ಹಳದಿ ಮಾರ್ಗ ಮೆಟ್ರೋಗೆ ಚೀನಾದಿಂದ ಬಂತು ಬೋಗಿ, ಆರಂಭ ಯಾವಾಗ?
ಆರ್.ವಿ. ರಸ್ತೆ-ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಕಾರಿಡಾರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಮಾರ್ಗಕ್ಕೆ ಬೇಕಾಗಿರುವ ರೈಲ್ವೆ ಬೋಗಿಗಳು ಭಾರತಕ್ಕೆ ಬಂದಿದೆ.
ಬೆಂಗಳೂರು (ನ.19): ಆರ್.ವಿ. ರಸ್ತೆ-ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಕಾರಿಡಾರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಮಾರ್ಗಕ್ಕೆ ಬೇಕಾಗಿರುವ ರೈಲ್ವೆ ಬೋಗಿಗಳನ್ನು (ಮೂಲ ಮಾದರಿ) ಚೀನಾದ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಕೊಲ್ಕತ್ತಾದ ತೀತಾಗರ್ ವ್ಯಾಗನ್ಸ್‌ಗೆ ತಲುಪಿಸಿದೆ.
ತೀತಾಗರ್ ವ್ಯಾಗನ್ಸ್‌ಗೆ ಬಂದಿರುವ ಬೋಗಿಗಳ ಫೋಟೋಗಳನ್ನು ಸಂಸದ ತೇಜಸ್ವಿ ಸೂರ್ಯ ‘ಎಕ್ಸ್’ ಕಾರ್ಪ್‌ನಲ್ಲಿ ಹಂಚಿಕೊಂಡಿದ್ದಾರೆ. ಮೂಲ ಮಾದರಿಯ ಈ ಬೋಗಿಗಳನ್ನು ಇಟ್ಟುಕೊಂಡು ತೀತಾಗರ್ ವ್ಯಾಗನ್ಸ್ ಬೆಂಗಳೂರು ಮೆಟ್ರೋ ರೈಲ್ವೆ ನಿಗಮಕ್ಕೆ ಅಗತ್ಯವಿರುವ ಬೋಗಿಗಳನ್ನು ತಯಾರಿಸಿ 2024ರ ಫೆಬ್ರವರಿ ವೇಳೆಗೆ ಪೂರೈಕೆ ಆರಂಭಿಸಲಿದೆ. 2024ರ ಎಪ್ರಿಲ್‌ನಲ್ಲಿ ಹಳದಿ ಮಾರ್ಗ ಸಂಚಾರ ಆರಂಭಿಸಲು ಚಿಂತಿಸಲಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗ ಶೀಘ್ರವೇ ಆರಂಭ, ಚೀನಾದಿಂದ ಬೋಗಿ ಬರುವುದನ್ನೇ ಕಾಯುತ್ತಿದೆ ಬಿಎಂಆರ್‌ಸಿಎಲ್
19.15 ಕಿ.ಮೀ. ಅಂತರದ ಹಳದಿ ಮಾರ್ಗ ಪ್ರತಿನಿತ್ಯ 1.15 ಲಕ್ಷ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ. ಜಯದೇವ ಇಂಟರ್‌ಚೇಂಜ್ ಸೇರಿ 16 ನಿಲ್ದಾಣಗಳನ್ನು ಹೊಂದಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ಡಬಲ್ ಡೆಕ್ಕರ್ ಫ್ಲೈಓವರ್ ಹೊಂದಿರಲಿದೆ.
ಹಳದಿ ಮಾರ್ಗಕ್ಕೆ ಅಗತ್ಯವಿರುವ ಮೆಟ್ರೋ ಬೋಗಿಗಳ ಟೆಂಡರ್ ಪಡೆದಿರುವ ಸಿಆರ್‌ಆರ್‌ಸಿ ಮೇಕ್ ಇನ್ ಇಂಡಿಯಾ ಅ ಎರಡು ರೈಲುಗಳನ್ನು (12 ಬೋಗಿ) ಪೂರೈಸುತ್ತಿದೆ. ಒಟ್ಟಾರೆ 216 ಬೋಗಿ (36 ರೈಲು) ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಯೋಜನೆ ಪ್ರಕಾರ ಸಾಗಿದ್ದರೆ ಸಿಆರ್‌ಆರ್‌ಸಿ ಸಂಸ್ಥೆಯು ಆಗಸ್ಟ್‌ನಲ್ಲೇ ಆರು ಬೋಗಿಗಳ ಎರಡು ಸೆಟ್ ಅಂದರೆ ಎರಡು ರೈಲನ್ನು ಪೂರೈಸುವ ಭರವಸೆ ನೀಡಿತ್ತು. ಆದರೆ, ಕೋವಿಡ್ ಸೇರಿ ತಾಂತ್ರಿಕ ಕಾರಣದಿಂದ ಈಗ ಚೀನಾದ ಬೋಗಿಗಳು ಭಾರತ ತಲುಪಿದೆ.
ಚೀನಾದಿಂದ ಎರಡು ರೈಲು ಬಂದರೆ, ಇನ್ನು 34 ರೈಲುಗಳನ್ನು ತಿತಾಗರ್ ಕಂಪನಿ ಪೂರೈಕೆ ಮಾಡಲಿದೆ. 216 ಕೋಚ್‌ಗಳ ಪೈಕಿ, 126 ಕೋಚ್‌ಗಳು ನೇರಳೆ ಮತ್ತು ಹಸಿರು ಮಾರ್ಗಕ್ಕೆ ಮೀಸಲಿಡಲಾಗಿದ್ದು, 90 ಬೋಗಿಗಳು ಹಳದಿ ಮಾರ್ಗಕ್ಕೆ ಮೀಸಲಾಗಿವೆ. 2026ರವರೆಗೆ ಈ ಬೋಗಿಗಳು ಪೂರೈಕೆ ಆಗಲಿವೆ.
ನೇರಳೆ ಮಾರ್ಗ ಮೆಟ್ರೋ ರೈಲು ಬಿಡದಿವರೆಗೂ ವಿಸ್ತರಣೆ, ಡಿಕೆಶಿ ಮಹತ್ವದ ಘೋಷಣೆ
ಚಾಲಕ ರಹಿತ ರೈಲು ಯಾವಾಗ?
ಆರ್.ವಿ.ರಸ್ತೆ- ಬೊಮ್ಮಸಂದ್ರ ನಡುವಿನ ರೀಚ್ -5 ಮಾರ್ಗದಲ್ಲಿ ತಲಾ ಆರು ಬೋಗಿಗಳ 12 ರೈಲುಗಳು ಸಂಚರಿಸಲಿವೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೊ ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಕಮ್ಯುನಿಕೇಷನ್ ಬೇಸ್ಡ್ ಟ್ರೇನ್ ಕಂಟ್ರೊಲ್ ಸಿಗ್ನಲಿಂಗ್ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಓಡುವುದಿಲ್ಲ. ಎರಡು ವರ್ಷಗಳ ಕಾಲ ಚಾಲಕ ಸಹಿತ ರೈಲುಗಳೇ ಈ ಮಾರ್ಗದಲ್ಲಿ ಸಂಚರಿಸಲಿದ್ದು, ಸಾಕಷ್ಟು ಪೂರ್ವಾಭ್ಯಾಸದ ಬಳಿಕವಷ್ಟೇ ಇವು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿವೆ.
ವಿಸ್ತರಣೆಯಿಂದಾಗಿ ಈಗಾಗಲೇ ನೇರಳೆ, ಹಸಿರು ಮಾರ್ಗ ಮೆಟ್ರೋ ರೈಲುಗಳ ಕೊರತೆ ಎದುರಿಸುತ್ತಿವೆ. ಹೊಸದಾಗಿ ಈ ಬೋಗಿಗಳು ಬಂದ ಬಳಿಕ ಈ ತೊಂದರೆ ನಿವಾರಣೆಯಾಗುವ ನಿರೀಕ್ಷೆಯಿದ್ದು, ರೈಲುಗಳ ಸಂಚಾರ ಹೆಚ್ಚಲಿದೆ.