ರೈಲು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲು ಮಲ್ಟಿ ಮಾಡಲ್ ಟ್ರಾನ್ಸ್‌ಪೋರ್ಟ್ ಹಬ್. ಆಧುನಿಕ ಡಿಪೋ ನಿರ್ಮಾಣಕ್ಕೂ ಹೆಬ್ಬಾಳದಲ್ಲಿ ಬಿಂಎಆರ್‌ಸಿಎಲ್‌ಗೆ ಭೂಮಿ ಅಗತ್ಯ. ಕೆಐಎಡಿಬಿ ಬಳಿ 55 ಎಕರೆ ಭೂಸ್ವಾಧೀನ, ಈ ಜಾಗ ನೀಡುವಂತೆ ಮೆಟ್ರೋ ಮನವಿ.
ಬೆಂಗಳೂರು (ಜು.20): ಬಹುಮಾದರಿ ಸಾರಿಗೆ ಕೇಂದ್ರ, ಬಹು ಹಂತದ ನಿಲುಗಡೆ ತಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೆಬ್ಬಾಳದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಳಿಯಿರುವ 45.5 ಎಕರೆ ನೀಡುವಂತೆ ಸರ್ಕಾರವನ್ನು ಕೋರಿದೆ.
ಕಾಮಗಾರಿ ಪ್ರಗತಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ನೀಲಿ ಮಾರ್ಗ ಸೇರಿದಂತೆ ಪ್ರಸ್ತಾಪಿತ ಕಿತ್ತಳೆ ಹಾಗೂ ಕೆಂಪು ಮಾರ್ಗದ ನಿಲ್ದಾಣಗಳು ಹೆಬ್ಬಾಳದಲ್ಲಿ ನಿರ್ಮಾಣ ಆಗಲಿವೆ. ಅಲ್ಲದೆ, ಕೆಂಪಾಪುರ ಬಳಿ ನೀಲಿ, ಕಿತ್ತಳೆ ಮಾರ್ಗದ ಇಂಟರ್ ಚೇಂಜ್ ಕೂಡ ನಿರ್ಮಾಣ ಆಗಲಿದೆ. ಜೊತೆಗೆ ಉಪನಗರ ರೈಲ್ವೇ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ ನಿಲ್ದಾಣವೂ ಬರಲಿದೆ.
undefined
ಶ್ರೇಯಸ್ ಪಟೇಲ್, ಪ್ರಭಾ ಮಲ್ಲಿಕಾರ್ಜುನ್ ಸಂಸದ ಸ್ಥಾನ ವಜಾ ಕೋರಿ ಹೈಕೋರ್ಟ್‌ಗೆ ಅರ್ಜಿ!
ಇವೆಲ್ಲದಕ್ಕೂ ಒಂದಕ್ಕೊಂದು ಸಂಪರ್ಕ ಕಲ್ಪಿಸಲು ಮಲ್ಟಿ ಮಾಡಲ್ ಟ್ರಾನ್ಸ್‌ಪೋರ್ಟ್ ಹಬ್ ನಿರ್ಮಿಸುವ ಯೋಜನೆ ಇದೆ. ಇದರ ಜೊತೆಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ರೈಲುಗಳ ಕಾರ್ಯಾಚರಣೆಗೆ ಅನುವಾಗುವಂತೆ ಆಧುನಿಕ ಡಿಪೋ ನಿರ್ಮಾಣಕ್ಕೂ ಹೆಬ್ಬಾಳದಲ್ಲಿ ಬಿಂಎಆರ್‌ಸಿಎಲ್‌ಗೆ ಭೂಮಿ ಬೇಕಿದೆ.
ಹೀಗಾಗಿ ಬಿಎಂಆರ್‌ಸಿಎಲ್ ಹೆಬ್ಬಾಳದಲ್ಲಿ ಜಾಗ ನೀಡುವಂತೆ ಸರ್ಕಾರವನ್ನು ಕೋರಿದೆ. ಹೆಬ್ಬಾಳದಲ್ಲಿ ದಶಕದ ಹಿಂದೆ ಖಾಸಗೀ ಕಂಪನಿಯ ಯೋಜನೆಗಾಗಿ ಕೆಐಎಡಿಬಿ ಸುಮಾರು 55 ಎಕರೆ ಭೂಸ್ವಾದೀನ ಮಾಡಿಕೊಂಡಿತ್ತು. ಆದರೆ, ಇಲ್ಲಿ ಯಾವುದೇ ಯೋಜನೆ ಆರಂಭವಾಗಿಲ್ಲ. ಹೀಗಾಗಿ ಖಾಲಿ ಇರುವ ಈ ಸ್ಥಳವನ್ನು ಇದೀಗ ಬಿಎಂಆರ್‌ಸಿಎಲ್‌ಗೆ ನೀಡುವಂತೆ ಕೋರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಗಾರನ ಬೆನ್ನಟ್ಟಲು ಮಳೆಯನ್ನೂ ಲೆಕ್ಕಿಸದೆ 8 ಕಿ.ಮೀ ಓಡಿ ಮಹಿಳೆಯ ಪ್ರಾಣ ಉಳಿಸಿದ ಕರ್ನಾಟಕ ಪೊಲೀಸ್ ಶ್ವಾನ!
ಇಲ್ಲಿ ಈಗಾಗಲೇ ಮೆಟ್ರೋ ನೀಲಿ ಮಾರ್ಗದ ಎಲಿವೆಟೆಡ್ ಕಾರಿಡಾರ್‌ಗಾಗಿ ಬಿಎಂಆರ್‌ಸಿಎಲ್ ಹೆಬ್ಬಾಳದಲ್ಲಿ ಸುಮಾರು 6712 ಚ.ಮೀ. ಸ್ಥಳವನ್ನು ಪಡೆದಿದೆ. ಒಂದು ಎಕರೆಗೆ ಸುಮಾರು ₹ 12ಕೋಟಿಯಂತೆ ಈ ಜಾಗಕ್ಕಾಗಿ ₹ 550 ಕೋಟಿಯನ್ನು ಪಾವತಿಸಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಜೆ.ಪಿ. ನಗರದಿಂದ ಕೆಂಪಾಪುರವರೆಗಿನ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರದ ಒಪ್ಪಿಗೆ ಬಿಎಂಆರ್‌ಸಿಎಲ್ ಕಾಯುತ್ತಿದೆ. ಈ ಯೋಜನೆಗೆ ಎಲಿವೆಟೆಡ್ ಕಾರಿಡಾರ್, ನಿಲ್ದಾಣಕ್ಕಾಗಿ ಅಗತ್ಯ ಭೂಸ್ವಾಧೀನಕ್ಕಾಗಿ 775 ಕ್ಕೂ ಹೆಚ್ಚಿನ ಸ್ಥಳಗಳನ್ನು ಗುರುತಿಸಲಾಗಿದೆ. ಶೀಘ್ರವೇ ನೋಟಿಫಿಕೇಶನ್ ಹೊರಡಿಸಲು ಪ್ರಕ್ರಿಯೆ ನಡೆದಿದೆ. ಮೈಸೂರು ರಸ್ತೆ - ಹೆಬ್ಬಾಳವರೆಗೆ ಭೂಸ್ವಾಧೀನಕ್ಕಾಗಿ ಜಂಟಿ ಸಮೀಕ್ಷೆ ಮುಂದುವರಿದಿದೆ.