ಮಡಿಕೇರಿ ಘಾಟ್‌ನಲ್ಲಿ ಸಿಲುಕಿದ ವಾಹನಗಳಿಗೆ ಆಪದ್ಭಾಂಧವರಾದ ಸ್ಪೀಕರ್‌ ಖಾದರ್‌

By Kannadaprabha News  |  First Published Jul 20, 2024, 1:39 PM IST

ಭಾರಿ ಮಳೆಗೆ ಕುಸಿಯುವ ಭೀತಿ ಕಾರಣ ದಿಢೀರ್‌ ಸಂಚಾರ ನಿಷೇಧಕ್ಕೆ ಒಳಗಾಗಿದ್ದ ಮಡಿಕೇರಿ ಘಾಟ್‌ನಲ್ಲಿ ನೂರಾರು ವಾಹನಗಳಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಸ್ಪೀಕರ್‌ ಯು.ಟಿ.ಖಾದರ್‌ ಆಪದ್ಭಾಂಧನಾಗಿ ಸ್ಪಂದಿಸಿದ ವಿದ್ಯಮಾನ ಗುರುವಾರ ರಾತ್ರಿ ನಡೆದಿದೆ.


  ಮಂಗಳೂರು :  ಭಾರಿ ಮಳೆಗೆ ಕುಸಿಯುವ ಭೀತಿ ಕಾರಣ ದಿಢೀರ್‌ ಸಂಚಾರ ನಿಷೇಧಕ್ಕೆ ಒಳಗಾಗಿದ್ದ ಮಡಿಕೇರಿ ಘಾಟ್‌ನಲ್ಲಿ ನೂರಾರು ವಾಹನಗಳಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಸ್ಪೀಕರ್‌ ಯು.ಟಿ.ಖಾದರ್‌ ಆಪದ್ಭಾಂಧನಾಗಿ ಸ್ಪಂದಿಸಿದ ವಿದ್ಯಮಾನ ಗುರುವಾರ ರಾತ್ರಿ ನಡೆದಿದೆ. ಸ್ಪೀಕರ್‌ ಖಾದರ್‌ ಸೂಚನೆ ಮೇರೆಗೆ ಸ್ಪಂದಿಸಿದ ದ.ಕ. ಜಿಲ್ಲಾಧಿಕಾರಿ ಮತ್ತು ಕೊಡಗು ಎಸ್ಪಿಯ ಕ್ಷಿಪ್ರ ಕಾರ್ಯವೈಖರಿಗೆ ಪ್ರಯಾಣಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಲ್ಲಿ ಗುಡ್ಡ ಕುಸಿತ ಕಾರಣ ರಾತ್ರಿಯೇ ಸಂಚಾರ ಬಂದ್‌ ಮಾಡಲಾಗಿತ್ತು. ಇದೇ ವೇಳೆ ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಘಾಟ್‌ ಕೂಡ ಕುಸಿತದ ಭೀತಿ ಮೂಡಿಸಿತ್ತು. ಹೀಗಾಗಿ ಕೊಡಗು ಜಿಲ್ಲಾಡಳಿತ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಮಡಿಕೇರಿ-ಸಂಪಾಜೆ ಘಾಟ್‌ನಲ್ಲಿ ರಾತ್ರಿ ಸಂಚಾರವನ್ನು ಹಠಾತ್ತನೆ ನಿರ್ಬಂಧಿಸಿತ್ತು.

Tap to resize

Latest Videos

ಮಡಿಕೇರಿಯ ಜನರಲ್ ಕಾರ್ಯಪ್ಪ ಸರ್ಕಲ್ ಬಳಿ ಮತ್ತು ಘಾಟಿ ಮಧ್ಯೆ ಮದೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ನೂರಾರು ವಾಹನಗಳು ಅಡಕತ್ತರಿಯಲ್ಲಿ ಸಿಲುಕಿದ್ದವು. ಹಲವಾರು ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು ಘಾಟ್ ಮಧ್ಯೆ ಮದೆನಾಡು ಮತ್ತು ಸಂಪಾಜೆಯ ಕುಗ್ರಾಮದಲ್ಲಿ ಬಾಕಿಯಾಗಿದ್ದರು. ಹಿರಿಯ ಜೀವಗಳೂ ಒದ್ದಾಡಿದವು. ಜೋರಾಗಿ ಮಳೆ ಕೂಡಾ ಬರುತ್ತಿತ್ತು. ಘಾಟ್ ರಸ್ತೆಯಲ್ಲಿ ಯಾವುದೇ ಅನಾಹುತವಾಗದೇ ಇದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಹಠಾತ್ ರಸ್ತೆ ನಿರ್ಬಂಧ ಮಾಡಲಾಗಿತ್ತು.

ಆ ರಸ್ತೆಯಾಗಿ ಮಧ್ಯರಾತ್ರಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರು ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಅವರ ಗಮನ ಸೆಳೆದರು. ಫೋನ್ ಮಾಡುವಾಗ ಮಧ್ಯರಾತ್ರಿ 12.30 ಆಗಿತ್ತು. ಯು.ಟಿ.ಖಾದರ್ ತಕ್ಷಣ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಸೂಚಿಸಿ ಅವರಿಗೆ ವಸ್ತುಸ್ಥಿತಿಯ ವಿವರಣೆ ನೀಡುವಂತೆ ರಶೀದ್‌ಗೆ ತಿಳಿಸಿದರು.

ಸ್ಥಳದಲ್ಲಿದ್ದ ರಶೀದ್ ವಿಟ್ಲ ಅವರು ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ಫೋನ್ ಮೂಲಕ ಸಂಪರ್ಕಿಸಿ ಹಠಾತ್ ರಸ್ತೆ ಬಂದ್‌ನಿಂದ ವಾಹನ ಪ್ರಯಾಣಿಕರಿಗೆ ಆಗಿರುವ ತೊಂದರೆಗಳ ಬಗ್ಗೆ ಹಾಗೂ ದುಷ್ಪರಿಣಾಮಗಳ ಕುರಿತು ಗಮನ ಸೆಳೆದಿದ್ದರು.

ಇದರ ಪರಿಣಾಮ ತಡರಾತ್ರಿಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಉನ್ನತ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿದ್ದ ಎಲ್ಲ ವಾಹನಗಳನ್ನು 1.30ಕ್ಕೆ ಪೊಲೀಸ್ ಇಲಾಖೆಯ ಹೈವೇ ಪ್ಯಾಟ್ರೋಲ್‌ಗಳ ಮೂಲಕ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಮದೆನಾಡು ಪ್ರದೇಶದಿಂದ ಸಂಪಾಜೆಗೆ ತಲುಪಿಸುವ ವ್ಯವಸ್ಥೆ ಮಾಡಿದರು. ಸಂಪಾಜೆಯಿಂದ ಮಡಿಕೇರಿ ಕಡೆ ಹೋಗಬೇಕಾಗಿದ್ದ ವಾಹನಗಳನ್ನು ಅದೇ ಪೊಲೀಸ್ ಎಸ್ಕಾರ್ಟ್‌ನಲ್ಲಿ ಮಡಿಕೇರಿಗೆ ಸುರಕ್ಷಿತವಾಗಿ ತಲುಪಿಸಿದರು. ಇದರಿಂದಾಗಿ ನೂರಾರು ವಾಹನಗಳಲ್ಲಿದ್ದ ಕುಟುಂಬಿಕರು ನಿಟ್ಟುಸಿರು ಬಿಡುವಂತಾಯಿತು. 

click me!