ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬುಧವಾರ(ಜ.1)ದಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಅರ್ಧಗಂಟೆ ಕಾಲ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿತ್ತು. ಆದ್ರೆ, ಇದೀಗ ಅದೇ ಮೆಟ್ರೋ ಪ್ರಯಾಣಿಕರಿಗೆ 2020 ಹೊಸ ವರ್ಷದ ಆರಂಭದಲ್ಲಿಯೇ ಶಾಕ್ ಕೊಟ್ಟಿದೆ.
ಬೆಂಗಳೂರು, ಜ.08]: ಬೆಂಗಳೂರು ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಬಿಎಂಆರ್‌ಸಿಎಲ್ ಆಘಾತ ನೀಡಿದೆ. ಇಷ್ಟು ದಿನ ಸ್ಮಾರ್ಟ್ ಕಾರ್ಡ್ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿಗೆ ಕತ್ತರಿ ಹಾಕಿದೆ.
ಈ ಹಿಂದೆ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 15 ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಆದ್ರೆ, ಇದೀಗ ಅದನ್ನು ಶೇಕಡ 5ಕ್ಕೆ ಇಳಿಸಿದೆ. ಈ ಬಗ್ಗೆ ಬುಧವಾರ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, (ಬಿಎಂಆರ್‌ಸಿಎಲ್) ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಗುಡ್ ನ್ಯೂಸ್ : ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
ಇಷ್ಟು ದಿನ, 100 ರುಪಾಯಿ ಮೌಲ್ಯದ ಸ್ಮಾರ್ಟ್ ಕಾರ್ಡ್ ಪಡೆದರೆ ಅದಕ್ಕೆ ನಮ್ಮ ಮೆಟ್ರೋ ಶೇ 15 ರಷ್ಟು ರಿಯಾಯಿತಿ ನೀಡುತ್ತಿತ್ತು. ಅಂದರೆ ನೂರು ರುಪಾಯಿಯಲ್ಲಿ ಪ್ರಯಾಣಿಕನಿಗೆ 15 ರುಪಾಯಿ ಉಳಿಯುತ್ತಿತ್ತು. ಆದರೆ, ಈಗ ಹೊಸ ನಿಯಮದಿಂದ ಕೇವಲ 5 ರುಪಾಯಿ ಮಾತ್ರ ಉಳಿಯಲಿದೆ.
ಹೊಸ ಸ್ಮಾರ್ಟ್ ಕಾರ್ಡ್ ದರ ಇದೇ ಜನವರಿ 20ರಿಂದ ಜಾರಿಗೆ ಬರಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲಾಗಿದ್ದು, 2017 ರಿಂದ ರಿಯಾಯಿತಿ ದರವನ್ನು ಪರಿಷ್ಕರಿಸಿರಲಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ರಿಯಾಯಿತಿ ದರವನ್ನು ಪರಿಷ್ಕರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಸ್ಮಾರ್ಟ್ ಕಾರ್ಡ್ ಬಳಕೆ ಉತ್ತೇಜನಕ್ಕಾಗಿ ಆರಂಭದಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಾಗಿತ್ತು. ಈಗ ಸದ್ಯ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಳಕೆದಾರರ ಸಂಖ್ಯೆ ಶೇ 62ಕ್ಕೆ ಏರಿಕೆಯಾಗಿದೆ.
ಮೊನ್ನೇ ಅಷ್ಟೇ ಬಿಎಂಆರ್‌ಸಿಎಲ್ ಮೆಟ್ರೋ ಸಮಯವನ್ನು ಅರ್ಧಗಂಟೆ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ 2020 ಹೊಸ ವರ್ಷದ ಉಡುಗೊರೆ ನೀಡಿತ್ತು.