ಹಗ್ಗವೇ ಸೇತುವೆ: ಐನೆಕಿದು ಗ್ರಾಮದ ಬಾಣೂರಿನ BLO ಕರ್ತವ್ಯನಿಷ್ಠೆ; ಮೂರು ಮನೆಗಾಗಿ ಸಾಹಸ

Published : Jul 16, 2026, 08:40 AM IST
BLO

ಸಾರಾಂಶ

ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ರಸ್ತೆ ಸಂಪರ್ಕವಿಲ್ಲದ ಮೂರು ಮನೆಗಳನ್ನು ತಲುಪಲು ಹಗ್ಗದ ಮೂಲಕ ಹೊಳೆ ದಾಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ, ಅನಾರೋಗ್ಯಪೀಡಿತ ಮತದಾರರೂ ಸೇರಿದಂತೆ ಎಲ್ಲರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅವರು ಈ ಸಾಹಸಮಯ ಕರ್ತವ್ಯವನ್ನು ನಿರ್ವಹಿಸಿದರು.

ದಕ್ಷಿಣ ಕನ್ನಡ: ಮತದಾರರ ಪಟ್ಟಿ ಉದ್ದೇಶದಿಂದ ನಿಖರಗೊಳಿಸುವ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕರ್ತವ್ಯನಿಷ್ಠೆಗೆ ಸಾಕ್ಷಿಯಾಗುವ ಘಟನೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ ಸಂಭವಿಸಿದೆ.

ಬಾಣೂರು ಸಮೀಪ ಹೊಳೆಯ ಆಚೆ ಕೇವಲ ಮೂರು ಮನೆಗಳಿದ್ದು, ಅಲ್ಲಿಗೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಬಹುದೂರ ಸುತ್ತಿಹೋಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಳಿನೆಲೆಬೈಲು ಸರ್ಕಾರಿ ಶಾಲೆಯ ಶಿಕ್ಷಕರೂ ಆಗಿರುವ ಬಿಎಲ್‌ ಒ ಲೋಹಿತ್ ಹಾಗೂ ಬಿಎಲ್‌ಎ ಗುಣವರ್ಧನ ಸ್ಥಳೀಯರು ಬಳಸುವ ಹಗ್ಗದ ಮೂಲಕವೇ ಹೊಳೆ ದಾಟಿ ಮತದಾರರನ್ನು ಭೇಟಿ ಮಾಡಿದರು.

ಎಸ್‌ಐಆರ್ ಪ್ರಕ್ರಿಯೆ ಪೂರ್ಣ

ಅಗತ್ಯ ದಾಖಲೆಗಳು ಹಾಗೂ ಪರಿಕರಗಳನ್ನು ಹೊತ್ತುಕೊಂಡು ಹಗ್ಗದ ಮೇಲೆ ಅಳವಡಿಸಿದ ಪರಿಕರದ ಮೂಲಕ ದಾಟಿದ ಅವರು, ಮೂರು ಮನೆಗಳಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಈ ಮೂರು ಮನೆಗಳಲ್ಲಿ ಒಬ್ಬ ಮತದಾರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಹೊಳೆ ದಾಟಿ ಹೊರಬರುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಎಲ್‌ಒ ಅವರೇ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿತ್ತು.

ಇದನ್ನೂ ಓದಿ: BDA: ಕಾರಂತ ಬಡಾವಣೆಯಲ್ಲಿ ಸೈಟ್‌ ಬೇಕಿದ್ದರೆ ಜುಲೈ ಒಳಗೆಯೇ ಅರ್ಜಿ ಹಾಕಿ, ಬೆಲೆ ಎಷ್ಟು?

ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದ ಕಾರಣ ಸ್ಥಳೀಯರು ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗವನ್ನು ಬಳಸುತ್ತಾರೆ. ಮಳೆ ಕಡಿಮೆಯಿದ್ದರಿಂದ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಇದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಹೊಳೆ ದಾಟಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು.

ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ್ಷಕರೂ ಆಗಿರುವ ಲೋಹಿತ್ ಅವರ ವ್ಯಾಪ್ತಿಯಲ್ಲಿ ಸುಮಾರು 793 ಮತದಾರರು ಹಾಗೂ 200ಕ್ಕೂ ಅಧಿಕ ಮನೆಗಳಿವೆ.

ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ 2ನೇ ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದ ಕೋಂಡೇನಹಳ್ಳಿಯ ಸುರೇಶ್ ಗಟ್ಟಾಪುರ

PREV
Read more Articles on
click me!

Recommended Stories

ಇಂಗ್ಲೆಂಡ್‌ನಲ್ಲಿ 2ನೇ ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದ ಕೋಂಡೇನಹಳ್ಳಿಯ ಸುರೇಶ್ ಗಟ್ಟಾಪುರ
ಪತಿ ವಿರುದ್ಧವೇ 9 ಕೇಸ್‌ ದಾಖಲಿಸಿದ ಪತ್ನಿ: ಗಂಡನ 'ಬದುಕು ಜಟಕಾಬಂಡಿ' ಕಥೆ!