ಬೆಂಗಳೂರು: ಮಧ್ಯರಾತ್ರಿ ಆರ್ಡರ್ ಮಾಡಿದ ಗ್ರಾಹಕನೊಂದಿಗೆ ಕಿರಿಕ್, ಮೂಗು ಗುದ್ದಿ ಪುಡಿ ಮಾಡಿದ ಡೆಲಿವರಿ ಬಾಯ್‌!

Published : Mar 12, 2026, 04:15 PM IST
Blinkit delivery boy assaults customer in Bengaluru

ಸಾರಾಂಶ

ಬೆಂಗಳೂರಿನ ಕೋರಮಂಗಲದಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್, ಆರ್ಡರ್ ವಿತರಣೆ ವೇಳೆ ಗ್ರಾಹಕರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗ್ರಾಹಕನ ಮೂಗಿನ ಮೂಳೆ ಮುರಿದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು: ನಗರದ ಕೋರಮಂಗಲ ಪ್ರದೇಶದಲ್ಲಿ ಡೆಲಿವರಿ ಬಾಯ್ ಮತ್ತು ಗ್ರಾಹಕರ ನಡುವೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಕ್ವಿಕ್-ಕಾಮರ್ಸ್ ಸೇವೆ ನೀಡುವ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಕಾರ್ಯನಿರ್ವಾಹಕನೊಬ್ಬ ಗ್ರಾಹಕನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆಯಲ್ಲಿ ಗ್ರಾಹಕನ ಮೂಗಿನ ಮೂಳೆ ಮುರಿದಿದೆ.

ತಡರಾತ್ರಿ ವಿತರಣೆಯ ವೇಳೆ ಗಲಾಟೆ

ಈ ಘಟನೆ ಮಾರ್ಚ್ 7ರಂದು ಬೆಳಗಿನ ಜಾವ ಸುಮಾರು 2 ಗಂಟೆಯ ಸುಮಾರಿಗೆ ನಡೆದಿದೆ. ಕೋರಮಂಗಲ 8ನೇ ಬ್ಲಾಕ್‌ನಲ್ಲಿ ವಾಸಿಸುತ್ತಿರುವ ಪೌಲ್ ವಿಥಯಥಿಲ್ ಎಂಬವರು Blinkit ಆ್ಯಪ್ ಮೂಲಕ ಸ್ಯಾಕ್ ಸೇರಿದಂತೆ ಕೆಲವು ವಸ್ತುಗಳನ್ನು ಆರ್ಡರ್ ಮಾಡಿದ್ದರು.

ಡೆಲಿವರಿ ಬಾಯ್ ಜೋಸೆಫ್ ಆರ್ಡರ್ ವಿತರಿಸಲು ಸ್ಥಳಕ್ಕೆ ಬಂದಾಗ ಪೌಲ್ ಅವರು ಎರಡನೇ ಮಹಡಿಯಲ್ಲಿ ಇದ್ದರು. ಆದರೆ ಡೆಲಿವರಿ ಬಾಯ್ ನಾಲ್ಕನೇ ಮಹಡಿಗೆ ತೆರಳುತ್ತಿದ್ದ ವೇಳೆ ಪೌಲ್ ಅವರು ಕರೆ ಮಾಡಿ ಎರಡನೇ ಮಹಡಿಗೆ ಬರಲು ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ವಾಗ್ವಾದ ತೀವ್ರಗೊಂಡಾಗ ಡೆಲಿವರಿ ಬಾಯ್ ಜೋಸೆಫ್ ಗ್ರಾಹಕ ಪೌಲ್ ಅವರ ಮುಖಕ್ಕೆ ಪಂಚ್ ಹೊಡೆದಿದ್ದಾನೆ. ಹೋಗುವಾಗ ಮರಳಿ ಮತ್ತೊಮ್ಮೆ ಮೂಗಿಗೆ ಹೊಡೆದು, ಆರ್ಡರ್ ಮಾಡಿದ ವಸ್ತುಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂಗಿನ ಮೂಳೆ ಮುರಿತ, ಚಿಕಿತ್ಸೆಗಾಗಿ ಕೇರಳಕ್ಕೆ ಪ್ರಯಾಣ

ಈ ಹಲ್ಲೆಯಿಂದ ಪೌಲ್ ವಿಥಯಥಿಲ್ ಅವರ ಮೂಗಿನ ಮೂಳೆ ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರು ತನ್ನೂರು ಕೇರಳಾಗೆ ತೆರಳಿದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಊರಲ್ಲೇ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.

ಪೊಲೀಸರಿಗೆ ದೂರು, ಎಫ್‌ಐಆರ್ ದಾಖಲು

ಈ ಸಂಬಂಧ ಪೌಲ್ ಅವರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಡೆಲಿವರಿ ಬಾಯ್ ಜೋಸೆಫ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ, ನಗರದಲ್ಲಿ ನಡೆದ ಈ ಘಟನೆ ಕ್ವಿಕ್-ಕಾಮರ್ಸ್ ಸೇವೆಗಳ ಸುರಕ್ಷತೆ ಹಾಗೂ ಗ್ರಾಹಕ-ವಿತರಣಾ ಸಿಬ್ಬಂದಿ ನಡುವಿನ ಸಂಬಂಧದ ಕುರಿತು ಹೊಸ ಚರ್ಚೆಗೆ ಕಾರಣವಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

PREV
Read more Articles on
click me!

Recommended Stories

ಬಾಗಲಕೋಟೆ: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಧಗಧಗನೇ ಹೊತ್ತಿ ಉರಿದ ಪೀಠೋಪಕರಣ ಮಳಿಗೆ
ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಒಡವೆ ಬ್ಯಾಗ್ ರಾಬರಿ!