ಎರಡೂ ಕಣ್ಣುಗಳನ್ನು ಕಳೆದುಕೊಂಡು ಜಗತ್ತನ್ನೇ ನೋಡದೆ ಸದಾ ಕಾಲ ಕತ್ತಲೆಯನ್ನೇ ಅನುಭವಿಸುವ ಅಂಧ ಯುವಕನ ಅಪ್ರತಿಮ ಟ್ಯಾಲೆಂಟ್‌ಗೆ ಯಾರಾದರೂ ಬೆರಗಾಗಲೇ ಬೇಕು. ಈತ ವಾತಾವರಣ ಗಮನಿಸಿಯೇ ನಿಖರ ಸಮಯ ಹೇಳ್ತಾನೆ, ತಾನು ಭೇಟಿ ಮಾಡಿದ 10 ಸಾವಿರಕ್ಕೂ ಹೆಚ್ಚು ಜನರ ಮೊಬೈಲ್ ನಂಬರ್ ಪಟ್ ಪಟಾಂತ ಹೇಳ್ತಾನೆ. ಬೆಳಗಾವಿಯ ಈ ಯುವಕನ ಯಶೋಗಾಥೆ ತಿಳಿಯಲು ಈ ಸುದ್ದಿ ಓದಿ.
ಚಿತ್ರದುರ್ಗ(ಆ.24): ಎರಡೂ ಕಣ್ಣುಗಳನ್ನು ಕಳೆದುಕೊಂಡು ಜಗತ್ತನ್ನೇ ನೋಡದೆ ಸದಾ ಕಾಲ ಕತ್ತಲೆಯನ್ನೇ ಅನುಭವಿಸುವ ಅಂಧ ಯುವಕನ ಅಪ್ರತಿಮ ಸಾಧನೆಗೆ ಶುಕ್ರವಾರ ಸಿರಿಗೆರೆಯ ಎಂಬಿಆರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒಂದು ಕ್ಷಣ ಬೆರಗಾದ ಘಟನೆ ನಡೆಯಿತು.
ಬಸವರಾಜ ಶಂಕ ಉಮರಾಣಿ ಎಂಬ ಈ ಯುವಕ ದೂರದ ಬೆಳಗಾವಿ ಜಿಲ್ಲೆಯ ಅಥಣಿಯವನು. ಹುಟ್ಟುತ್ತಲೇ ತನ್ನ ಎರಡೂ ಕಣ್ಣುಗಳ ದೃಷ್ಟಿಕಳೆದುಕೊಂಡಿದ್ದರೂ ಸಾಧನೆಯ ಛಲವನ್ನು ಹೆಗಲ ಮೇಲೆ ಹಾಕಿಕೊಂಡು ತನ್ನ ಸುತ್ತಲಿನವರು ನಿಬ್ಬೆರಗಾಗುವಂತೆ ಬೆಳೆದವನು.
10 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆ ಪಟ್ ಪಟಾಂತ ಹೇಳ್ತಾನೆ:
ನೀವು ಹತ್ತು ಸಂಖ್ಯೆಗಳ ಹಲವು ಮೊಬೈಲ್ ಸಂಖ್ಯೆಗಳನ್ನು ಅವನಿಗೆ ಕೇಳುವಂತೆ ಹೇಳಿದರೆ, ಅವುಗಳನ್ನು ಕೇಳಿಸಿಕೊಂಡು ಅರೇ ಕ್ಷಣದಲ್ಲಿ ಅವುಗಳನ್ನು ನಿಮಗೆ ಒಪ್ಪಿಸಿಬಿಡುತ್ತಾನೆ. ಅಷ್ಟಲ್ಲದೆ, ಇದುವರೆಗೂ ತಾನು ಭೇಟಿ ಮಾಡಿರುವ ಸುಮಾರು ಹತ್ತು ಸಾವಿರ ಜನರ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ತನ್ನೊಳಗೇ ಅಡಗಿಸಿಟ್ಟುಕೊಂಡು ನೀವು ಕೇಳಿದಾಕ್ಷಣ ಅವುಗಳನ್ನು ತನ್ನ ಜ್ಞಾನಭಂಡಾರದಿಂದ ಹೆಕ್ಕಿ ಕೊಡುತ್ತಾನೆ. ಈ ಪೋರನ ಸಾಧನೆಗೆ ಬೆರಗಾಗದವರೇ ಇಲ್ಲ. ಅಂತಹ ಅಪರೂಪದ ನೆನಪಿನ ಶಕ್ತಿಯನ್ನು ಈ ಹುಡುಗ ಹೊಂದಿದ್ದಾನೆ. ಇದರಿಂದಾಗಿ ಗಿನ್ನಿಸ್ ದಾಖಲೆಗೆ ತನ್ನ ಹೆಸರನ್ನು ದಾಖಲುಗೊಳಿಸುವ ದಾರಿಯಲ್ಲಿ ಸಾಗಿದ್ದಾನೆ.
ಈತನ ಮೈಂಡ್‌ನಲ್ಲಿದೆ 100 ವರ್ಷದ ಕ್ಯಾಲೆಂಡರ್ ಮಾಹಿತಿ :
ಒಂದು ನೂರು ವರ್ಷಗಳ ಕ್ಯಾಲೆಂಡರ್‌ನ ಮಾಹಿತಿಯನ್ನು ತನ್ನೊಳಗೇ ಅಡಗಿಸಿಕೊಂಡಿರುವ ಈ ಯುವಕ ನಿಮಗೆ ಬೇಕೆಂದಾಗ ದಿನ, ವಾರ, ತಿಂಗಳು, ವರ್ಷ ಮುಂತಾದ ಮಾಹಿತಿಯನ್ನೂ ನೀಡುತ್ತಾನೆ. 1900 ರಿಂದ 2017ರವರೆಗಿನ ಯಾವುದೇ ದಿನಾಂಕಗಳಿಗೆ ವಾರಗಳನ್ನು ಕೇಳಿದರೆ, ಅವನು ಉತ್ತರಿಸುವ ವೇಗಕ್ಕೆ ನೀವು ಮೂಕವಿಸ್ಮಿತರಾಗುತ್ತೀರಿ.
ಗಣಿತ ನೀರು ಕುಡಿದಷ್ಟೇ ಸುಲಭ:
ಇಷ್ಟಲ್ಲದೆ ನೀವು ಹೇಳುವ ಅಂಕೆಗಳ ಆಧಾರದಲ್ಲಿ ಕೂಡುವ, ಕಳೆಯುವ ಲೆಕ್ಕಗಳನ್ನೂ ಅರೆಕ್ಷಣದಲ್ಲೇ ಮಾಡುತ್ತಾನೆ. ಗುಣಿಸುವುದು, ಭಾಗಿಸುವುದು ಈತನಿಗೆ ನೀರು ಕುಡಿದಷ್ಟೇ ಸರಾಗ. ಇಂತಹ ಸಾಧನೆ ಮಾಡಿರುವ ಹಲವರನ್ನು ನಾವು ಕಂಡಿದ್ದೇವೆ ಎಂದುಕೊಂಡರೆ, ಈಗ ಇನ್ನಷ್ಟುಮುಂದೆ ಹೋಗಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ಗಣಿತಶಾಸ್ತ್ರದ ಸೂತ್ರಗಳನ್ನು ಅರಳು ಹುರಿದಂತೆ ಹೇಳುತ್ತಾನೆ. ಇವುಗಳನ್ನು ಕೇಳಿಸಿಕೊಂಡವರು ಮೂಖಸ್ಮಿತರಾಗಬೇಕಷ್ಟೆ!
ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ರೋಗಿಗಳ ಪರದಾಟ
ಇಂತಹದೊಂಡು ಕಾರ್ಯಕ್ರಮವನ್ನು ಸಿರಿಗೆರೆಯ ಎಂ.ಬಸವಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಲ್ಲಿ ಭರವಸೆ ತುಂಬುವ ಕೆಲಸವನ್ನು ಕಾಲೇಜಿನ ಪ್ರಾಚಾರ‍್ಯ ಡಿ.ಎಂ.ನಾಗರಾಜ್ ಮಾಡಿದರು.
ವಾತಾವರಣ ನೋಡಿ ಸಮಯ ಹೇಳ್ತಾನೆ:
ಅಕ್ಷರಶಃ ಎರಡೂ ಕಣ್ಣು ಕಾಣದ ಈ ಯುವಕ ಗಡಿಯಾರದ ಸಹಾಯವಿಲ್ಲದೆ ವಾತಾವರಣವನ್ನು ಗಮನಿಸಿಯೇ ನಿಖರವಾದ ಸಯಮವನ್ನು ಹೇಳುವ ಚಾಕಚಕ್ಯತೆ ಹೊಂದಿದ್ದಾನೆ. ನೋಟುಗಳನ್ನು ಮುಟ್ಟಿಯೇ ಅವುಗಳ ಮೌಲ್ಯವನ್ನು ಹೇಳುವ ಅವರು ಕ್ರಿಕೆಟ್ ಕಾಮೆಂಟರಿ ನೀಡುವಲ್ಲಿ ಪರಿಣತಿ ಹೊಂದಿದ್ದಾರೆ. ಜೊತೆಗೆ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನೀಡಿದ್ದಾನೆ.
ತನಗೆ ಗಣಿತಶಾಸ್ತ್ರದ ಮೇರುಪರ್ವತವೆಂದೇ ಬಿಂಬಿತವಾದ ಶಾಕುಂತಲಾದೇವಿಯವರು ಆದರ್ಶ ಎಂದು ಹೇಳುವ ಈ ಯುವಕ ತನ್ನ ಸಾಧನೆಯಲ್ಲಿ ನನ್ನ ಅಂಗವೈಫಲ್ಯ ನನಗೆ ಅಡ್ಡಿ ಆಗಿಯೇ ಇಲ್ಲ. ಸಾಧನೆಗೆ ಛಲವೊಂದೇ ದಾರಿ ಎನ್ನುತ್ತಾನೆ. ತನ್ನ ತಂದೆ, ತಾಯಿ ಹಾಗೂ ಕಿರಿಯ ಸಹೋದರನಿಗೆ ಆಸರೆಯಾಗಿರುವ ಈ ಅಂಧ ಬಾಲಕ ಬಿಎಸ್‌ಸಿ, ಬಿ.ಇಡಿ, ವ್ಯಾಸಂಗ ಪೂರ್ಣಗೊಳಿಸಿ ಈಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾನೆ.