ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಮರ್ಪಕ ಆರೋಗ್ಯ ಸೇವೆ ಸಿಗದೇ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಪರಿಣಾಮ ಔಷಧಿ ಹಾಗೂ ಆರೋಗ್ಯ ಸೇವೆಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು(ಆ.24): ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಮರ್ಪಕ ಆರೋಗ್ಯ ಸೇವೆ ಸಿಗದೇ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಪರಿಣಾಮ ಔಷಧಿ ಹಾಗೂ ಆರೋಗ್ಯ ಸೇವೆಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಅಗತ್ಯ ತುರ್ತು ಚಿಕಿತ್ಸೆ ಸೌಲಭ್ಯಕ್ಕೆ ಸಾಕಷ್ಟುಜನರು ಬರುತ್ತಾರೆ. ರೋಗಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಮರೀಚಿಕೆಯಾಗಿ ಪರಿಣಮಿಸಿದೆ. ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮೂಲಸೌಕರ್ಯಗಳೂ ಇಲ್ಲ:
ಇಲ್ಲಿರುವುದು ಕೇವಲ ಹೆಸರಿಗಷ್ಟೇ ಸರ್ಕಾರಿ ಆರೋಗ್ಯ ಕೇಂದ್ರ ಎಂಬಂತಿದೆ. ಮೂಲ ಸೌಕರ್ಯಗಳು ಇಲ್ಲ. 50 ಹಾಸಿಗೆ ಸೌಲಭ್ಯದ ವರದಿಯಿದ್ದರೂ ಇಲ್ಲಿ ಕಲ್ಪಿಸಿರುವ ಸೌಲಭ್ಯ ಕನಿಷ್ಠ 30 ಹಾಸಿಗೆಗಿಂತ ಕಡಿಮೆ ಇರುವಂತೆ ಕಂಡುಬಂದಿದೆ. ಕಡೂರಿನಲ್ಲಿ 12 ವೈದ್ಯರ ಹುದ್ದೆಯಲ್ಲಿ 11 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತರೀಕೆರೆ ಆಸ್ಪತ್ರೆಯಲ್ಲಿ 10 ವೈದ್ಯರು ಹಾಗೂ ಅಜ್ಜಂಪುರದಲ್ಲಿ 6 ವೈದ್ಯರಿದ್ದಾರೆ. ಆದರೆ, ಬೀರೂರು ಆಸ್ಪತ್ರೆಯಲ್ಲಿ ಕೇವಲ 3 ಜನ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿದಿನ 300ರಿಂದ 400ರೋಗಿಗಳು:
ಇದೀಗ ಫಿಜಿಷಿಯನ್ ವಾಸುದೇವಮೂರ್ತಿ ಸಹ ಸ್ವಯಂನಿವೃತ್ತಿ ಪಡೆದಿದ್ದಾರೆ. 2 ತಿಂಗಳಿಂದ ಹೊರರೋಗಿಗಳ ಒತ್ತಡವನ್ನು ಇರುವ ಇಬ್ಬರೇ ವೈದ್ಯರು ಹೊರಬೇಕಿದೆ. ಮಕ್ಕಳ ವೈದ್ಯರು ವರ್ಗಾವಣೆಗೊಂಡು ತೆರಳಿದ್ದಾರೆ. ಆರೋಗ್ಯ ಕೇಂದ್ರ ಇಲ್ಲಿಯವರೆಗೆ ಪ್ರತಿದಿನ 300 ರಿಂದ 400 ಹೊರರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ನೀಡಬೇಕಿದೆ. ಔಷಧಿಗಳ ಕೊರತೆ ಹಾಗೂ ನಿಗದಿತ ಸಮಯಕ್ಕೆ ಔಷಧಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಇರುವ ಔಷಧಿಯನ್ನೇ ಹಂಚುವ ಇಲಾಖೆಯ ಚೌಕಾಸಿಯಿಂದಾಗಿ ಮಧುಮೇಹ ಹಾಗೂ ರಕ್ತದೊತ್ತಡ ಹಾಗೂ ಇನ್ನಿತರ ಮಾತ್ರೆಗಳು ಸಿಗದೇ ರೋಗಿಗಳು ಪರದಾಡುವಂತಾಗಿದೆ.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುಡ್ಡ ಕುಸಿತಕ್ಕೆ ಮಹಾಮಳೆಯೇ ಕಾರಣ..?
ಅರಿವಳಿಕೆ ತಜ್ಞರು ಇಲ್ಲದೇ ಶಸ್ತ್ರಚಿಕಿತ್ಸೆ ಸೌಲಭ್ಯಕ್ಕೆ ಬೇರೆ ಕಡೆಯ ತಜ್ಞರನ್ನು ಅವಲಂಬಿಸಿದ ಪರಿಣಾಮ ನಿಗದಿತ ವೇಳೆಗೆ ಸೌಲಭ್ಯ ದೊರಕದಾಗಿದೆ. ಒಬ್ಬರು ವೈದ್ಯರು ಆಡಳಿತ ವೈದ್ಯಾಧಿಕಾರಿಯ ಸೇವೆ ಒತ್ತಡ ಸಹ ನೋಡಿಕೊಂಡು ಸೇವೆ ನೀಡಬೇಕಿದ್ದರೆ ಇನ್ನೊಬ್ಬರಿಗೆ ಆರೋಗ್ಯ ಕ್ಯಾಂಪ್ ಹಾಗೂ ಸಭೆಗಳ ಒತ್ತಡದಲ್ಲಿ ಚಿಕಿತ್ಸೆ ಹೊರೆಹೊರಬೇಕಿದೆ. ಸರ್ಕಾರ ನೂತನವಾಗಿ ವೈದ್ಯರನ್ನು ನೇಮಿಸುವ ಸಂದರ್ಭದಲ್ಲಿ ತಾಲೂಕು ಕೇಂದ್ರವನ್ನು ಮಾತ್ರ ಪರಿಗಣಿಸುತ್ತಿದೆ. ಹೀಗಾಗಿ ಹುದ್ದೆಗಳೇ ಇಲ್ಲಿಗೆ ಮಂಜೂರಾಗದ ಸ್ಥಿತಿಯಿದೆ.
ರೋಗಿಗಳ ಪರದಾಟ:
ಆರೋಗ್ಯ ಇಲಾಖೆ ಹೋಬಳಿ ಕೇಂದ್ರದ ಚಿಂತನೆ ಕೈ ಬಿಟ್ಟು ಜನಸಂಖ್ಯೆ ಹಾಗೂ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿ ವೈದ್ಯಕೀಯ ಸೇವೆ ದೊರಕಿಸಲು ಮನಸ್ಸು ಮಾಡದಿರುವುದು ಸಾರ್ವಜನಿಕರ ಆರೋಗ್ಯಸೇವೆ ಮೇಲೆ ದುಷ್ಟರಿಣಾಮ ಬೀರಿದೆ. ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ಆರೋಗ್ಯ ಸೇವೆಗೆ ಇಲಾಖೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಲಿ ಎಂಬುದು ನಾಗರಿಕರ ಆಗ್ರಹ.