ಜಿಲ್ಲೆಯಲ್ಲಿ 4.50 ಲಕ್ಷದಷ್ಟುಕುರುಬ ಮತದಾರರಿದ್ದು ಜನಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. 3-4 ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿಯನ್ನೂ ಹೊಂದಿದ್ದೇವೆ. ಬಿಜೆಪಿ ಪಕ್ಷವು ಈ ಬಾರಿ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಒತ್ತಾಯಿಸಿದರು.
ತುಮಕೂರು : ಜಿಲ್ಲೆಯಲ್ಲಿ 4.50 ಲಕ್ಷದಷ್ಟುಕುರುಬ ಮತದಾರರಿದ್ದು ಜನಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. 3-4 ಕ್ಷೇತ್ರಗಳಲ್ಲಿ ಗೆಲ್ಲುವ ಶಕ್ತಿಯನ್ನೂ ಹೊಂದಿದ್ದೇವೆ. ಬಿಜೆಪಿ ಪಕ್ಷವು ಈ ಬಾರಿ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಒತ್ತಾಯಿಸಿದರು.
ಕಾಳಿದಾಸ ವಿದ್ಯಾವರ್ಧಕ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ, ಜಿಲ್ಲಾ ಕುರುಬರ ಸಂಘ ಹಾಗೂ ಜಿಲ್ಲೆಯ ಜನಾಂಗದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಹಕ್ಕೊತ್ತಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಜಿ ಎಂಎಲ್‌ಸಿ ಡಾ.ಎಂ.ಆರ್.ಹುಲಿನಾಯ್ಕರ್ ಅವರನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಬೇಕು. ಇದರಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷಕ್ಕೆ ಅನುಕೂಲವಾಗಲಿದೆ. ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿರುವ ಹುಲಿನಾಯ್ಕರ್ ಅವರು ವಿಧಾನಸಭೆಗೆ ಅರ್ಹ ಹಾಗೂ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ನೀಡಿದರೆ ಸಮುದಾಯವು ಅವರ ಪರ ನಿಲ್ಲಲಿದ್ದು ಬಿಜೆಪಿಗೆ ಹೆಚ್ಚು ಅನುಕೂಲ ಆಗಲಿದೆ ಎಂದರು.
ಪ್ರದೇಶ ಕುರುಬರ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಪುಟ್ಟರಾಜು ಮಾತನಾಡಿ, ಡಾ.ಎಂ.ಆರ್.ಹುಲಿನಾಯ್ಕರ್ ಅವರು ಬಿಜೆಪಿ ಪಕ್ಷದಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಬಯಸಿ ಪಕ್ಷಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದ್ದರಿಂದ ಬಿಜೆಪಿ ಕೋರ್ ಕಮಿಟಿಯು ಹುಲಿನಾಯ್ಕರ್ ಅವರ ಹೆಸರನ್ನು ತುಮಕೂರು ನಗರಕ್ಕೆ ಅಂತಿಮಗೊಳಿಸಿ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಬೇಕು ಇದರಿಂದ ಪಕ್ಷಕ್ಕೂ ಲಾಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಚ್ಡಿಕೆ ಮಂಜುನಾಥ್, ಮಲ್ಲಿಕಾರ್ಜುನ್ ಹೆಬ್ಬಾಕ, ಲಕ್ಷ್ಮೀನರಸಿಂಹರಾಜು, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಟಿ.ಇ.ರಘುರಾಮ್, ಮಾಜಿ ಸದಸ್ಯರಾದ ಮಹೇಶ್, ಎಸ್‌ಬಿಐ ವೆಂಕಟೇಶ್, ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಸುನಿತಾ ನಟರಾಜ್, ಯೋಗೀಶ್ ದಾದಯ್ಯ, ಕಾಳಿದಾಸ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜು, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ಮಹಾಲಿಂಗಯ್ಯ, ಗುಬ್ಬಿ ತಾಲ್ಲೂಕಿನ ನಿರ್ದೇಶಕರಾದ ನಿಂಬೆಕಟ್ಟೆಜಯಣ್ಣ, ಮಧುಗಿರಿ ತಾಲೂಕು ನಿರ್ದೇಶಕರಾದ ತಿಮ್ಮರಾಜು, ಮುಖಂಡರಾದ ಮಳೆಕೋಟೆ ರಮೇಶ್, ಗುರುಪ್ರಸಾದ್, ವಿನಯ್‌ಪ್ರಸಾದ್ ಕೋಟೆಮನೆ, ಸಿದ್ದು ಸೂರನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೋಟ....
ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಕುರುಬರನ್ನು ಕರಿಬೇವಿನ ಸೊಪ್ಪಿನ ರೀತಿಯಲ್ಲಿ ಬಳಕೆ ಮಾಡಕೊಳ್ಳುತ್ತಿದ್ದಾರೆ. ಒಗ್ಗರಣೆಗೆ ಕರಿಬೇವು ಬೇಕೆ ಬೇಕು. ಅದಿಲ್ಲದ ಅಡುಗೆ ರುಚಿಸದು. ಆದರೆ ಊಟದ ತಟ್ಟೆಯಲ್ಲಿ ಕರಿಬೇವಿಗೆ ಸ್ಥಾನವಿಲ್ಲ. ಅದನ್ನು ಎತ್ತಿ ಬಿಸಾಡಲಾಗುತ್ತದೆ. ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಿದ್ದು ಇನ್ನು ಮುಂದೆ ಕುರುಬರನ್ನು ಈ ರೀತಿ ವಂಚಿಸಲು ಸಾಧ್ಯವಿಲ್ಲ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜನಾಂಗದ ಯುವಕರನ್ನು ರಾಜಕೀಯವಾಗಿ ಮುನ್ನೆಲೆಗೆ ತಂದು ಬೆಳೆಸಲಾಗುವುದು.
ಟಿ.ಆರ್.ಸುರೇಶ್ ಅಧ್ಯಕ್ಷ, ಜಿಲ್ಲಾ ಕುರುಬರ ಸಂಘ