'ದೇಶದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕಾಂಗ್ರೆಸ್‌ ಪಕ್ಷವೇ ಕಾರಣ'

By Kannadaprabha NewsFirst Published Feb 27, 2020, 1:07 PM IST
Highlights

ಡಿ.ಕೆ.ಶಿವಕುಮಾರ ಅಧ್ಯಕ್ಷರಾಗಲಿ ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ|ಡಿಕೆಶಿ ಅಧ್ಯಕ್ಷರಾದರೆ ಸಿದ್ದರಾಮಯ್ಯ ಹೊರಬರುತ್ತಾರೆ| ಸಿದ್ದರಾಮಯ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಪರಮೇಶ್ವರ ಹೊರ ಬರುತ್ತಾರೆ| ಪ್ರಧಾನಿ ಮೋದಿ ಹೆಸರು ಕೆಡಿಸಲು ಕಾಂಗ್ರೆಸ್‌ ಷಡ್ಯಂತ್ರ: ನಳಿನ್‌ ಕಿಡಿ|

ಬೆಳಗಾವಿ(ಫೆ.27): ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೆಡಿಸಲು ಕಾಂಗ್ರೆಸ್‌ ಷಡ್ಯಂತ್ರ ನಡೆಸುತ್ತಿದ್ದು, ದೇಶದ್ರೋಹ ಚಟುವಟಿಕೆಗಳನ್ನು ನಡೆಸುವವರಿಗೆ ಬೆಂಗಾವಲಾಗಿ ನಿಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಗಂಭೀರ ಆರೋಪ ಮಾಡಿದ್ದಾರೆ. 

"

ನಗರದ ಮರಾಠ ಮಂದಿರದಲ್ಲಿ ಬುಧವಾರ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಬೆಳಗಾವಿ ಮಹಾನಗರ ಜಿಲ್ಲೆ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕಾಂಗ್ರೆಸ್‌ ಪಕ್ಷವೇ ಕಾರಣವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಗಲಾಟೆ ನಡೆಸಲು ಕಾಂಗ್ರೆಸ್‌ ಕುಮ್ಮಕ್ಕು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನೇಕ ದಿನಗಳಿಂದ ದೆಹಲಿಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಕೈಯಲ್ಲಿ ಶಸ್ತ್ರಾಸ್ತ್ರಗಳು ಹೇಗೆ ಬಂದವು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ದೇಶವನ್ನು ಹಾಳು ಮಾಡಲು ಹೊರಟಿದ್ದು, ಲಾಲ್ ಬಹಾದ್ದೂರ ಶಾಸ್ತ್ರಿ ಹೊರತುಪಡಿಸಿ ಈ ದೇಶವನ್ನಾಳಿದ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸಿದ್ದು ಡಿಕೆಶಿಗೆ ಪಟ್ಟ ಕಟ್ಟಲಿ:

ಇದೇ ವೇಳೆ ರಾಜ್ಯ ಕಾಂಗ್ರೆಸ್‌ ವಿರುದ್ಧವೂ ಹರಿಹಾಯ್ದ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷರು ರಾಜೀನಾಮೆ ನೀಡಿ ಆರು ತಿಂಗಳಾದರೂ ಆ ಹುದ್ದೆಗಳಿಗೆ ನೇಮಕ ಮಾಡುವ ತಾಕತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದೇವೇಳೆ ತನಗೆ ರಾಜಕೀಯ ಜ್ಞಾನವಿಲ್ಲ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡ ಅವರು, ರಾಜಕೀಯ ಅನುಭವಿ, ಜ್ಞಾನಿ, ರಾಜಕೀಯ ಪಂಡಿತ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ ಅವರನ್ನು ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲಿಕ್ಕೆ ಆಗಿಲ್ಲ. ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಡಿ.ಕೆ.ಶಿವಕುಮಾರ ಅವರನ್ನು ಮಾಡಲಿ ಎಂದು ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲೆಸೆದರು.

ಡಿಕೆಶಿ ಅಧ್ಯಕ್ಷರಾದರೆ ಸಿದ್ದರಾಮಯ್ಯ ಹೊರಬರುತ್ತಾರೆ. ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಪರಮೇಶ್ವರ ಹೊರ ಬರುತ್ತಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಹೆಚ್ಚಾಗುತ್ತಿದೆ. ಕಾಂಗ್ರೆಸ್‌ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಕಾಂಗ್ರೆಸ್‌ ನಿರ್ನಾಮವಾಗಲಿದೆ ಎಂದು ಹೇಳಿದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

 

click me!