ಇನ್ನೂ ಎರಡೂವರೇ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ| ಬಿಎಸ್‌ವೈ ನಮ್ಮ ಸರ್ವಸಮ್ಮತ ನಾಯಕರಾಗಿದ್ದು, ಯಾವುದೇ ರೀತಿಯ ಬದಲಾವಣೆ ಇಲ್ಲ| ನಾಯಕತ್ವ ಬದಲಾವಣೆಯ ವಿಚಾರ ಇಲ್ಲವೇ ಇಲ್ಲ: ಕಟೀಲ್|
ಬಾಗಲಕೋಟೆ(ಏ.13): ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ‘ಮುಳುಗುವ ಹಡಗು’ ಜಟಾಪಟಿ ಮುಂದುವರೆದಿದ್ದು, ದೇಶದಲ್ಲಿ ನಡೆದಿರುವ ಪಂಚರಾಜ್ಯಗಳ ಚುನಾವಣೆಯೂ ಸೇರಿದಂತೆ ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದ್ದು, ಆಗ ಯಾರು ಮುಳುಗೋ ಹಡಗು ಎಂಬುದು ತಿಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಮುಳುಗುತ್ತಿರುವ ಹಡಗು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸೋಮವಾರ ನಗರದಲ್ಲಿ ತಿರುಗೇಟು ನೀಡಿದ ಕಟೀಲ್, ಅಧಿಕಾರ ಕಳೆದುಕೊಂಡ ಮೇಲೆ ಸ್ಥಿಮಿತವನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಅವರು ಹೀಗೆ ಮಾತನಾಡುತ್ತಿದ್ದು, ಯಾರು ಮುಳುಗುವ ಹಡಗು ಎಂಬುದು ಎಲ್ಲರಿಗೂ ತಿಳಿದಿದೆ. ಸಿದ್ದರಾಮಯ್ಯ ಮುಳುಗುತ್ತಾರಾ ಅಥವಾ ಡಿಕೆಶಿ ಮುಳುಗುತ್ತಾರಾ ಎಂದು ಪರಸ್ಪರ ನೋಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
undefined
'ಬಿಎಸ್‌ವೈ ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕಾದ ಹೈಕಮಾಂಡ್ ಬಾಯಿಮುಚ್ಚಿ ಕುಳಿತಿದೆ'
ಸಿಎಂ ಬದಲಾವಣೆ ಇಲ್ಲ:
ರಾಜ್ಯದಲ್ಲಿ ಇನ್ನೂ ಎರಡೂವರೇ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ಅವರು ನಮ್ಮ ಸರ್ವಸಮ್ಮತ ನಾಯಕರಾಗಿದ್ದು, ಯಾವುದೇ ರೀತಿಯ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಕುರಿತು ಯಾರೋ ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದರೆ ಅದಕ್ಕೆ ಮಾಧ್ಯಮದವರಾದ ನೀವು ಆಸ್ಪದ ಕೊಟ್ಟರೆ ನಾವು ಜವಾಬ್ದಾರರಲ್ಲ. ನಾಯಕತ್ವ ಬದಲಾವಣೆಯ ವಿಚಾರ ಇಲ್ಲವೇ ಇಲ್ಲ ಎಂದರು.
ಯತ್ನಾಳ ವಿರುದ್ಧ ಗರಂ:
ಪಕ್ಷದಿಂದ ನೀಡಿರುವ ನೋಟಿಸ್ ಅನ್ನು ಲವ್‌ಲೆಟರ್‌ಗೆ ಹೋಲಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಗರಂ ಆಗಿರುವ ಕಟೀಲ್, ಲವ್ ಲೆಟರ್ ಯಾವುದು, ನೋಟಿಸ್ ಯಾವುದು ಎಂಬ ಜ್ಞಾನ ಇಲ್ಲದವರ ಕುರಿತು ಏನಂತ ಮಾತನಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಿಂದ ನನ್ನನ್ನು ಯಾರಿಂದಲೂ ಹೊರ ಹಾಕಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿರುವ ಯತ್ನಾಳ್ ಕುರಿತು ಮಾತನಾಡಿ, ಇದು ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ವಿಚಾರಣೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಪಕ್ಷದಲ್ಲಿದೆ. ಇದನ್ನು ಮೀರಿದರೆ ಮತ್ತೊಂದು ನೋಟಿಸ್ ಹೋಗುತ್ತೆ. ಆವಾಗಲೂ ಹದ್ದುಮೀರಿ ಅವರೇ ಹೊರಗೆ ಹೋಗಬೇಕೆನ್ನುವುದಿದ್ದರೆ ಅದು ಅವರ ತಪ್ಪು ಎಂದು ಹೇಳಿದರು.