ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಕಾರ್ಯ ಮಾಡಲಿ| ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್| ಯಡಿಯೂರಪ್ಪ ಸರ್ಕಾರದಲ್ಲಿ ಕಳೆದ ವರ್ಷ ಘೋಷಣೆ ಮಾಡಿದ ಪರಿಹಾರ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ| ಹಿಂದೆಂದೂ ನೀಡದ ಪರಿಹಾರ ಯಡಿಯೂರಪ್ಪ ನೀಡಿದ್ದಾರೆ|
ಹಾನಗಲ್ಲ(ಆ.12): ಪಕ್ಷದ ಕಾರ್ಯಕರ್ತ ಕೇವಲ ರಾಜಕಾರಣಿಯಾಗಿರಬಾರದು, ಸಾಮಾಜಿಕ ಚಿಂತನೆ ಉಳ್ಳವರಾಗಿ ಸಾಮಾಜಿಕ ಕಾರ್ಯ ಮಾಡಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಸೇವಾ ಹೀ ಸಂಘಟನೆ ಎಂದು ಘೊಷಣೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳಿದ್ದಾರೆ.
ಮಂಗಳವಾರ ಪಟ್ಟಣದಲ್ಲಿ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ಬೂತ್‌ಗಳಲ್ಲಿ ಕೋವಿಡ್ ಸಂಕಷ್ಟದಲ್ಲಿರುವರಿಗೆ, ವಲಸೆ ಕಾರ್ಮಿಕರಿಗೆ, ಅನಾರೋಗ್ಯ ಪೀಡಿತರಿಗೆ ಸೇವೆಗಳನ್ನು ಕಲ್ಪಿಸುವ ಜತೆಗೆ ಸಹಕಾರಿಯಾಗಿ ನಿಲ್ಲಬೇಕು ಎಂಬುದು ಸೇವಾ ಹೀ ಸಂಘಟನೆ ಗುರಿಯಾಗಿದೆ. ರಾಜ್ಯದಲ್ಲಿ ಹೀಗೆ ಕರೆ ಕೊಟ್ಟಾಗ 1.60 ಕೋಟಿ ಜನರಿಗೆ ಆಹಾರ ಒದಗಿಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡಿದ್ದಾರೆ. 65 ಲಕ್ಷ ಕುಟುಂಬಗಳಿಗೆ ದಿನಸಿ ಸಾಮಗ್ರಿ ತಲುಪಿಸುವ ಕೆಲಸ ಪಕ್ಷ ಮಾಡಿದೆ. 1.5 ಲಕ್ಷ ಜನರಿಗೆ ಔಷಧ ಕೊಡುವ ಕೆಲಸ ಮಾಡಲಾಗಿದೆ. ಜತೆಗೆ ಕ್ವಾರಂಟೈನ್ ಪ್ರದೇಶದಲ್ಲಿ, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಅಲ್ಲದೇ ಸರ್ಕಾರ ಬಯಸಿದರೆ ಶವ ಸಂಸ್ಕಾರಗಳಲ್ಲಿ ಭಾಗವಹಿಸಲು ಕಾರ್ಯಕರ್ತರು ತಯಾರಿದ್ದಾರೆ ಎಂದರು.
ಹಾವೇರಿ: ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ
ಹಲವು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ನೆರೆ ಬಂದಿದೆ. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಸೇವೆ ಮತ್ತು ಪರಿಹಾರ ಎರಡನ್ನು ಕೈಗೊಳ್ಳುವ ಕೆಲಸದಲ್ಲಿದ್ದಾರೆ. ಕೋವಿಡ್‌ನಿಂದ ಸಂಘಟನೆ ಕಾರ್ಯ ನಿಲ್ಲಬಾರದು ಎನ್ನುವ ಉದ್ದೇಶದಿಂದ ಸಾಮಾಜಿಕ ಅಂತರ, ಮುಖ ಕವಚ ಅವಶ್ಯವಾಗಿ ಬಳಸುವ ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರನ್ನು ಕರೆಯದೇ ಕೇವಲ ಪದಾಧಿಕಾರಿಗಳ ಸಭೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹೇಗೆ ಕೆಲಸ ಮಾಡಬೇಕು ಹಾಗೂ ಹೇಗೆ ಯಶಸ್ವಿಗೊಳಿಸಬೇಕು ಎಂದು ಪ್ರೇರಣೆ ನೀಡಲು ಹಾಗೂ ಸಂಘಟನೆ ಹಾಗೂ ಸೇವಾ ಕಾರ್ಯ ಎರಡೂ ನಿಲ್ಲಬಾರದು. ಕೋವಿಡ್ ಜೊತೆಯಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿಸಲು ಈ ಪ್ರವಾಸ ಕೈಗೊಳ್ಳಲಾಗಿದೆ. ಮೈಸೂರಿನಿಂದ ಆರಂಭಿಸಿದ ಈ ಪ್ರವಾಸ ಈಗ ಕಲ್ಯಾಣ ಕರ್ನಾಟಕದತ್ತ ಸಾಗಿದೆ. ಎಲ್ಲ ಕಡೆಗಳಲ್ಲೂ ಪದಾಧಿಕಾರಿಗಳ ಕಾರ್ಯ ಚೆನ್ನಾಗಿ ನಡೆದಿದೆ. ಕಾರ್ಯಕರ್ತರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನೆರೆ ಹಾವಳಿಯಿಂದ ಹಾನಿಗೊಳಗಾದವರ ನೆರವಿಗೆ ಪ್ರಧಾನ ಮಂತ್ರಿಗಳು ಸಹಾಯಹಸ್ತ ಚಾಚಲು ಮುಂದಾಗಿದ್ದಾರೆ. ಕೋವಿಡ್ ಮತ್ತು ನೆರೆ ಹಾವಳಿಯ ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜವಾಬ್ದಾರಿಯುತ ಕೆಲಸ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕೋವಿಡ್ ಬಂದಾಗ ವಲಸೆ ಕಾರ್ಮಿಕರಿಗೆ ಹಣವಿಲ್ಲ, ಬಸ್ ಇಲ್ಲ ಎಂದು ಸುಳ್ಳು ಚೆಕ್‌ನ್ನು ತೋರಿಸುವ ಕೆಲಸ ಮಾಡಿದರು. ನಂತರ ಅವರನ್ನು ಎತ್ತಿ ಕಟ್ಟುವ ಕೆಲಸ ಮಾಡಿದರು. ಮುಂದೆ ಕೋವಿಡ್‌ನಲ್ಲಿ ಹಗರಣವಾಗಿದೆ ಎಂದು ಸುಳ್ಳು ಆರೋಪ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಉತ್ತರಿಸುತ್ತಾರೆ. ಆದರೆ, ನೆರೆ ಬಂದಾಗ ನಿಮ್ಮ ಸರ್ಕಾರ ಎಷ್ಟು ಪರಿಹಾರ ನೀಡಿದೆ? ಅಂದು ಘೋಷಣೆ ಮಾಡಿದ ಪರಿಹಾರ ಇದುವರೆಗೂ ಬಂದಿಲ್ಲ. ಆದರೆ, ಯಡಿಯೂರಪ್ಪ ಸರ್ಕಾರದಲ್ಲಿ ಕಳೆದ ವರ್ಷ ಘೋಷಣೆ ಮಾಡಿದ ಪರಿಹಾರ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ. ಹಿಂದೆಂದೂ ನೀಡದ ಪರಿಹಾರ ಯಡಿಯೂರಪ್ಪ ನೀಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು ಅವರಿಗೆ ಪ್ರತಿಯೊಂದಕ್ಕೂ ಒಂದು ನಿಯಮ ಇರುತ್ತದೆ ಎಂಬುದು ಗೊತ್ತಿಲ್ವಾ ಎಂದು ಪ್ರಶ್ನಿಸಿದ ಅವರು, ಈ ನಿಯಮಾವಳಿ ಗೊತ್ತಿಲ್ಲ ಅಂದ್ರೆ ಅವರೊಬ್ಬ ವಿಫಲ ಮುಖ್ಯಮಂತ್ರಿ ಅಥವಾ ಗೊತ್ತಿಲ್ಲದಂತೆ ನಟಿಸುತ್ತಿದ್ದರೆ, ಅವರೊಬ್ಬ ನಾಟಕಕಾರ ಎಂದು ಟೀಕಿಸಿದ ನಳಿನ್ ಕುಮಾರ್ ಕಟೀಲ್, ವಿರೋಧ ಪಕ್ಷಗಳು ಜವಾಬ್ದಾರಿಯುತ ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ಸಿ.ಎಂ. ಉದಾಸಿ, ಅರುಣಕುಮಾರ, ಆರ್. ಶಂಕರ, ಯು.ಬಿ. ಬಣಕಾರ, ನೆಹರು ಓಲೇಕಾರ, ಶಿವರಾಜ ಸಜ್ಜನರ, ಮಹೇಶ ತೆಂಗಿನಕಾಯಿ, ಮಂಜುನಾಥ ಕುನ್ನೂರ, ರಾಜೂ ಗೌಳಿ ಇದ್ದರು.