ರಾಜ್ಯಾದ್ಯಂತ ಬೂತ್ ಮಟ್ಟದ ಅಧ್ಯಕ್ಷರನ್ನು ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ| ಡಿ. 14 ಮತ್ತು 15ರೊಳಗಾಗಿ ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಸಮಾಲೋಚನೆ ಸಭೆಗಳನ್ನು ನಡೆಸಿ, ಡಿ. 20 ರೊಳಗಾಗಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ ಎಂದ ಕಟೀಲ್|
ಹುಬ್ಬಳ್ಳಿ(ಡಿ.09): ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಹೆಚ್ಚಿಸಬೇಕಿದ್ದು, ಈ ನಿಟ್ಟಿನಲ್ಲಿ ಡಿಸೆಂಬರ್ 13 ರೊಳಗಾಗಿ ಮಂಡಳ ಅಧ್ಯಕ್ಷರ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಸೂಚನೆ ನೀಡಿದ್ದಾರೆ.
ಪಕ್ಷ ಸಂಘಟನೆ ದೃಷ್ಟಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ರಾಜ್ಯ ಸಂಘಟನಾತ್ಮಕ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದೆ. ರಾಜ್ಯಾದ್ಯಂತ ಬೂತ್ ಮಟ್ಟದ ಅಧ್ಯಕ್ಷರನ್ನು ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ. ಅಲ್ಲದೆ, ಡಿ. 14 ಮತ್ತು 15ರೊಳಗಾಗಿ ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಸಮಾಲೋಚನೆ ಸಭೆಗಳನ್ನು ನಡೆಸಿ, ಡಿ. 20 ರೊಳಗಾಗಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಬೇಕಿದೆ. ಈ ನಿಟ್ಟಿನಲ್ಲಿ ಡಿ. 14 ರೊಳಗೆ ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಸೂಚಿಸಿದರು. ಇನ್ನು ಮಂಡಳ ಅಧ್ಯಕ್ಷ ಸ್ಥಾನಕ್ಕೆ 45, ಜಿಲ್ಲಾಧ್ಯಕ್ಷ ಸ್ಥಾನಕ್ಕೆ 55 ಹಾಗೂ ಸ್ಥಳೀಯತೆಗೆ ಅನುಗುಣವಾಗಿ ಮೀಸಲಾತಿ, ಪಕ್ಷಕ್ಕಾಗಿ ಶ್ರಮಿಸಿರುವವರನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ 7 ವಿಭಾಗಗಳ 37 ಸಂಘಟನಾತ್ಮಕ ಜಿಲ್ಲೆಗಳ ಸಾಂಸ್ಥಿಕ ಚುನಾವಣಾ ವೀಕ್ಷಕರು ಭಾಗವಹಿಸಿದ್ದರು. ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಬಿಜೆಪಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಸಚಿವ ಜಗದೀಶ ಶೆಟ್ಟರ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಾಸಕ ಹಾಲಪ್ಪ ಆಚಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಏಳು ವಿಭಾಗವಾರು ಸಭೆ
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿನ ಏಳು ವಿಭಾಗೀಯ ಪ್ರಮುಖರು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡುವುದರ ಜತೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ- ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ, ಯುವ ಮತದಾರರನ್ನು ಪಕ್ಷದ ಸದಸ್ಯರಾಗುವಂತೆ ಪ್ರೇರೇಪಿಸುವ ಮೂಲಕ ಪಕ್ಷದ ತತ್ವ- ಸಿದ್ಧಾಂತಗಳ ಮೂಲಕ ಪ್ರೇರೇಪಿಸಿ, ಸಕ್ರಿಯ ಕಾರ್ಯಕರ್ತರಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ ಎನ್ನಲಾಗುತ್ತಿದೆ. ಭಾನುವಾರ ನಡೆದ ರಾಜ್ಯ ಸಂಘಟನಾತ್ಮಕ ಪ್ರಮುಖರ ಸಭೆಯನ್ನು ಗಣ್ಯರು ಉದ್ಘಾಟಿಸಿದರು.