
ಬೆಂಗಳೂರು: ಬೆಂಗಳೂರು ಹಾಗೂ ತುಮಕೂರು ನಡುವೆ ಮೆಟ್ರೋ ರೈಲು ಸಂಪರ್ಕ ಮಾಡುವ ಪ್ರಸ್ತಾವನೆಯಿದೆ. ಕೆಲ ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಮಾಡಲು ಮುಂದೆ ಬಂದಿದ್ದು, ಈ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಜೊತೆಗೂಡಿ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬುಲೆಟ್ ರೈಲು ಯೋಜನೆ ರಾಜ್ಯದಲ್ಲಿ ಅಳವಡಿಕೆ ಮಾಡುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ, ನಾನು ಖಾಲಿ ಮಾತನಾಡಿ ಟ್ರೋಲ್ ಮಾಡಲು ತಯಾರಿಲ್ಲ. ಈಗಾಗಲೇ ಗುಜರಾತ್‌ನಿಂದ ಮುಂಬೈ, ಬೆಂಗಳೂರು-ಚೆನ್ನೈ ನಡುವೆ ಬುಲೆಟ್ ರೈಲು ಯೋಜನೆ ಮಾಡುವ ಕುರಿತು ಕೇಂದ್ರದವರು ಚರ್ಚೆಗಳು ನಡೆಯುತ್ತಿವೆ. ನಾವು ಬೆಂಗಳೂರು-ತುಮಕೂರು ಮೆಟ್ರೋ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಪಿಪಿಪಿ ಮಾದರಿಯಲ್ಲಿ ಮೆಟ್ರೋ ಮಾಡಲು ಕೆಲ ಕಂಪನಿಗಳು ಮುಂದೆ ಬಂದಿವೆ. ಶುಕ್ರವಾರ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಗ ಬಳಕೆ ಮಾಡಿಕೊಳ್ಳಬೇಕು. ನಿಲ್ದಾಣಗಳಿಗೆ ಹೊರತುಪಡಿಸಿ ಮಾರ್ಗಕ್ಕೆ ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇವೆ ಎಂದರು.
ಮೆಟ್ರೋ ನಷ್ಟವಾಗಲಿದೆ ಎಂಬ ಆರೋಪಕ್ಕೆ, ‘ಬೆಂಗಳೂರು-ತುಮಕೂರು ನಡುವೆ ಮೆಟ್ರೋ ಮಾಡಿದರೆ ನಷ್ಟ ಆಗುತ್ತದೆ ಎಂದರೆ ಅರ್ಜಿ ಹಾಕುವವರು ದಡ್ಡರಲ್ಲ. ತುಮಕೂರಿಗೆ ಮೆಟ್ರೋ ಬರುತ್ತದೆ ಎಂದರೆ ನಗರ ಬೆಳೆಯುತ್ತದೆ. ರಾಜ್ಯ ಸರ್ಕಾರ ಯಾವುದೇ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಹೂಡಿಕೆ ಬಗ್ಗೆ ಏಪ್ರಿಲ್‌ನಲ್ಲಿ ಅಂತಿಮವಾಗಲಿದೆ’ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮಾದಾವರ-ತುಮಕೂರು ಮೆಟ್ರೋ ಡಿಪಿಆರ್ ಸಿದ್ಧ: ಮಹತ್ವದ ಯೋಜನೆಗೆ ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ