ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದಲ್ಲಿಂದು ಬಿಜೆಪಿ ರಣಕಹಳೆ ಮೊಳಗಿಸಿದೆ. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ , ಒಬಿಸಿ ವಿರಾಟ್ ಸಮಾವೇಶ ಏರ್ಪಡಿಸುವ ಮೂಲಕ ಅಹಿಂದ ನಾಯಕ ಸಿದ್ದರಾಮಯ್ಯ ವಿರುದ್ಧವೂ ತಡೆತಟ್ಟಿ ನಿಂತಿದೆ.
ಬೆಂಗಳೂರು (ಅ.30): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದಲ್ಲಿಂದು ಬಿಜೆಪಿ ರಣಕಹಳೆ ಮೊಳಗಿಸಿದೆ. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ , ಒಬಿಸಿ ವಿರಾಟ್ ಸಮಾವೇಶ ಏರ್ಪಡಿಸುವ ಮೂಲಕ ಅಹಿಂದ ನಾಯಕ ಸಿದ್ದರಾಮಯ್ಯ ವಿರುದ್ಧವೂ ತಡೆತಟ್ಟಿ ನಿಂತಿದೆ. ಎಲ್ಲೆಲ್ಲೂ ರಾರಾಜಿಸುತ್ತಿರುವ ಕೇಸರಿ ಬಾವುಟಗಳು. ವೇದಿಕೆಯಲ್ಲಿ ರಣಕಹಳೆ ಮೊಳಗಿಸಿದ ಬಿಜೆಪಿ ನಾಯಕರು. ನಾಯಕರ ಭಾಷಣ ಕೇಳಲು ಮುಗಿಬಿದ್ದು ಆಗಮಿಸಿದ ಲಕ್ಷಾಂತರ ಕಾರ್ಯಕರ್ತರು. ಈ ದೃಶ್ಯಗಳು ಕಂಡು ಬಂದಿದ್ದು ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲಿ. ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯವಾದ ಬೆನ್ನಲ್ಲೆ, ಇದೀಗ ಕೇಸರಿ ಬ್ರೀಗೆಡ್ ಒಬಿಸಿ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಿದೆ. ಕಲಬುರಗಿಯಲ್ಲಿಂದು ಬಿಜೆಪಿ ನಡೆಸಿದ ಒಬಿಸಿ ವಿರಾಟ ಸಮಾವೇಶ ದಾವಣಗೆರೆಯ ಸಿದ್ರಾಮೋತ್ಸವಕ್ಕೆ ಪರ್ಯಾಯದಂತಿತ್ತು. ವೇದಿಕೆಯಲ್ಲಿ ಮಾತನಾಡಿದ ಬಿಜೆಪಿಯ ಬಹುತೇಕ ನಾಯಕರ ಟಾರ್ಗೆಟ್ ಅಹಿಂದ ನಾಯಕ ಸಿದ್ರಾಮಯ್ಯನವರೇ ಆಗಿದ್ದರು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಹಿಂದುಳಿದ ವರ್ಗಗಳ ಜನರ ಈ ಪರಿ ಬೆಂಬಲ ನೋಡಿದರೆ ನಮ್ಮ ಗೆಲುವು ಖಚಿತ. ನಿಮಗೆ ತಾಕತ್ ಇದ್ದರೆ, ನಿಮಗೆ ಧಮ್ ಇದ್ದರೆ ನಮ್ಮ ವಿಜಯ ಪತಾಕೆಯನ್ನ ತಡೆಯಿರಿ ಅಂತಾ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲು ಎಸೆದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ, ತಳವಾರ ಸಮುದಾಯ ಎಸ್ಟಿಗೆ ಸೇರ್ಪಡೆಯನ್ನು ಬಹುವಾಗಿ ಪ್ರಸ್ತಾಪಿಸಿದ ಕೇಸರಿ ಪಡೆ ನಾಯಕರುಗಳು, ಸಿದ್ರಾಮಯ್ಯನವರು ಒಬಿಸಿ ಮತಗಳಿಸಿ ಸಿಎಂ ಆದ ಮೇಲೆ ಅನ್ಯಾಯ ಮಾಡಿದ್ದಾರೆ. ಅವರನ್ನು ನಂಬಬೇಡಿ ಎಂದು ಕರೆ ನೀಡಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಸದ್ಯದಲ್ಲಿಯೇ ಮೈಸೂರಿನಿಂದ ರಥಯಾತ್ರೆ ಆರಂಭಿಸುತ್ತೆನೆ ಎನ್ನುವ ಮೂಲಕ ಪಾಂಚಜನ್ಯ ಮೊಳಗಿಸಿದರು.
OBC ವಿರಾಟ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಯಡಿಯೂರಪ್ಪ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯಡಿಯೂರಪ್ಪನವರು ಶ್ರೀಕೃಷ್ಣನಂತೆ ಪಾಂಚಜನ್ಯ ಮುಳಗಿಸಿದ್ದಾರೆ. ಅರ್ಜುನನಂತೆ ಸಿಎಂ ಬೊಮ್ಮಾಯಿ ರೆಡಿಯಾಗಿದ್ದಾರೆ. ನಾನು ಭೀಮನಂತೆ, ನಕುಲ ಸಹಾದೇವರಂತೆ ಪ್ರಹ್ಲಾದ ಜೋಷಿ ಮತ್ತು ಸಿಟಿ ರವಿ ಸೇರಿ ಪಾಂಡವರಂತೆ ಯುದ್ದ ಗೆಲ್ಲುತ್ತೇವೆ ಎಂದರು.
OBC ವಿರಾಟ ಸಮಾವೇಶ: ಸಿದ್ದರಾಮಯ್ಯ ವಿರುದ್ಧ ಬೊಮ್ಮಾಯಿ ವಾಕ್‌ಪ್ರಹಾರ
ಒಬಿಸಿ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಒಂದು ಲಕ್ಷಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರಿಗಾಗಿ ರುಚಿರುಚಿಯಾದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಒಟ್ಟಾರೆ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಈ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ, ಸಿದ್ರಾಮಯ್ಯನವರ ಮತಬ್ಯಾಂಕ್ ಮೇಲೆ ಬಿಜೆಪಿ ಲಗ್ಗೆ ಇಟ್ಟಿದ್ದು, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆತುವ ಯತ್ನ ಮಾಡಿದೆ. ಇದು ಒಬಿಸಿ ಮತಗಳ ಮೇಲೆ ಯಾವ ರೀತಿಯ ಪರಿಣಾಮ ಪ್ರಭಾವ ಬೀರುತ್ತದೆಯೋ ಎನ್ನುವುದು ಕಾದು ನೋಡಬೇಕಿದೆ.