ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನಲ್ಲಿ ಕಳೆದ 49 ವರ್ಷಗಳಿಂದ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕ 70 ವರ್ಷದ ಮಹಾದೇವ ತುರಮರಿಗೆ ಬೆಳಗಾವಿ ಜಿಲ್ಲಾಡಳಿತದಿಂದ ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಅ.30): ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರಿನಲ್ಲಿ ಕಳೆದ 49 ವರ್ಷಗಳಿಂದ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕ 70 ವರ್ಷದ ಮಹಾದೇವ ತುರಮರಿಗೆ ಬೆಳಗಾವಿ ಜಿಲ್ಲಾಡಳಿತದಿಂದ ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕಾ ವಿತರಕ ಮಹಾದೇವ ತುರಮರಿ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ ನಿವಾಸಿ. ಬಡಕುಟುಂಬದಲ್ಲಿ ಹುಟ್ಟಿದ್ದ ಮಹಾದೇವ ತುರಮರಿ ಕುಟುಂಬ ನೇಕಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಆದ್ರೆ ನೇಕಾರಿಕೆ ಉದ್ಯಮದಲ್ಲಿ ನಷ್ಟವಾದಾಗ ಪತ್ರಿಕಾ ವಿತರಣೆ ಕಾರ್ಯ ಶುರು ಮಾಡಿದ್ದರು. ತಾವು ಪತ್ರಿಕಾ ವಿತರಣೆ ಕೆಲಸ ಆರಂಭಿಸಿದ ದಿನಾಂಕ ಇಂದೂ ಮರೆತಿಲ್ಲ ಮಹಾದೇವ ತುರಮರಿ. 14ನೇ ಸೆಪ್ಟೆಂಬರ್ 1973ರಂದು ಶುರು ಮಾಡಿದ ಪತ್ರಿಕಾ ವಿತರಣೆ ಕಾಯಕ ಈವರೆಗೂ ಬಿಟ್ಟಿಲ್ಲ. ಬೆಳಗ್ಗೆ 5 ಗಂಟೆಗೆ ಎದ್ದು ಬಸ್ ನಿಲ್ದಾಣಕ್ಕೆ ತೆರಳಿ ಪೇಪರ್ ಬಂಡಲ್ ತಗೆದುಕೊಂಡು ವಿತರಣೆ ಮಾಡಿಯೇ ಆಮೇಲೆ ಮುಂದಿನ ಕೆಲಸ. ಮಹಾದೇವ ತುರಮರಿ ಕರ್ತವ್ಯನಿಷ್ಠೆ ಎಷ್ಟರಮಟ್ಟಿಗೆ ಇದೆಯಂದ್ರೆ ಕೆಲ ವರ್ಷಗಳ ಹಿಂದೆ ಮಹಾದೇವ ತುರಮರಿ ಮಗಳು ಅಕಾಲಿಕ ನಿಧನರಾದಾಗ ಆಕೆಯ ಮೃತದೇಹ ಮನೆಯಲ್ಲಿಯೇ ಇಟ್ಟು ದಿನಪತ್ರಿಕೆಗಳನ್ನು ವಿತರಣೆ ಮಾಡಿ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದರಂತೆ. ಇನ್ನೋರ್ವ ಮಗಳು ಹಾಗೂ ಮಗನ ಮದುವೆ ದಿನವೂ ಅಷ್ಟೇ ಮೊದಲು ಪತ್ರಿಕೆ ವಿತರಣೆ ಮಾಡಿ ಬಳಿಕ ಬಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕಿತ್ತೂರಿನ ಜನರ ಜೊತೆಯೂ ಅಷ್ಟೇ ಪ್ರೀತಿಯಿಂದ ಇರುವ ಮಹಾದೇವ ತುರಮರಿ ಓದುಗರ ಆಪ್ತರಾಗಿದ್ದಾರೆ. ಮಹಾದೇವ ತುರಮರಿಯೇ ನಮ್ಮ ಮನೆಗೆ ಪೇಪರ್ ಹಾಕಬೇಕು ಅಂತಾರಂತೆ ಕಿತ್ತೂರಿನ ಜನ.
ಪ್ರತಿ ವರ್ಷ ಬೆಳಗಾವಿ ಜಿಲ್ಲಾಡಳಿತ ವತಿಯಿಂದ ಐವರು ಪತ್ರಕರ್ತರಿಗೆ ಹಾಗೂ ಐವರು ಕನ್ನಡಪರ ಹೋರಾಟಗಾರರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತೆ. ಬೆಳಗಾವಿ ಜಿಲ್ಲಾ ಪಂಚಾಯತ ಸಿಇಒ ದರ್ಶನ್ ನೇತೃತ್ವದ ಐದು ಜನರ ಸಮಿತಿ ಪತ್ರಿಕಾ ವಿತರಕ ಮಹಾದೇವ ತುರಮರಿ ರನ್ನು ಆಯ್ಕೆ ಮಾಡಿದ್ದು, ಮಹಾದೇವ ತುರಮರಿ ಕರ್ತವ್ಯನಿಷ್ಠೆಗೆ ಜಿ.ಪಂ. ಸಿಇಒ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಾದೇವ ತಳವಾರಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಸುದ್ದಿ ತಿಳಿದು ಕಿತ್ತೂರು ತಾಲೂಕು ಪತ್ರಕರ್ತರು ಮಹಾದೇವ ತುರಮರಿ ಮನೆಗೆ ತೆರಳಿ ಸನ್ಮಾನಿಸಿ ಸಂಭ್ರಮಿಸಿದ್ದಾರೆ.
Koti Kanta Gaayana: ನೆಲ,ಜಲ, ಆಗಸದಲ್ಲೂ ಮೊಳಗಿತು ಕನ್ನಡ ಡಿಂಡಿಮ..!
ಮಹಾದೇವ ತುರಮರಿರವರ ಕರ್ತವ್ಯನಿಷ್ಠೆ ಬಗ್ಗೆ ಕಿತ್ತೂರು ತಾಲೂಕು ವರದಿಗಾರರಿಂದ ಮಾಹಿತಿ ಪಡೆದಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ಬೆಳಗಾವಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಕೇವಲ ಪ್ರಶಸ್ತಿ ನೀಡಿ ಗೌರವಿಸಿದರೆ ಸಾಲದು 70 ವರ್ಷದ ಇಳಿವಯಸ್ಸಿನಲ್ಲೂ ಕನ್ನಡ ದಿನಪತ್ರಿಕೆಗಳನ್ನು ವಿತರಣೆ ಮಾಡುವ ಬಡ ಪತ್ರಿಕಾ ವಿತರಕ ಮಹಾದೇವ ತಳವಾರಗೆ ರಾಜ್ಯ ಸರ್ಕಾರ ಸಹಾಯ ಮಾಡಿ ಪತ್ರಿಕಾ ವಿತರಕರನ್ನು ಪ್ರೋತ್ಸಾಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.