'ಸದಸ್ಯರ ಬೆದರಿಸಿ ಜೆಡಿಎಸ್ ಅಧಿಕಾರಕ್ಕೆ'

By Kannadaprabha NewsFirst Published Feb 2, 2021, 12:50 PM IST
Highlights

ಆಣೆ ಪ್ರಮಾಣ ಮಾಡಿಸಿಕೊಂಡು ಜೆಡಿಎಸ್ ಅಧಿಕಾರ ಹಿಡಿದಿದೆ. ಸದಸ್ಯರ ಸಮ್ಮತಿಯಂತೆ ಅಧಿಕಾರಕ್ಕೆ ಏರಿಲ್ಲ ಎಂದು ಗಂಭೀರ ಆರೋಪ ಮಾಡಲಾಗಿದೆ. 

ಅರಸೀಕೆರೆ (ಫೆ.02):  ಪಕ್ಷದ ಚಿಹ್ನೆ ಇಲ್ಲದೆ ಚುನಾಯಿತರಾದ ಗ್ರಾಪಂ ಸದಸ್ಯರಿಂದ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿಸಿಕೊಂಡು, ಗುಂಪು ಗಲಭೆ ಮಾಡಿ ಬೆದರಿಸಿ 32 ಗ್ರಾಪಂಗಳಲ್ಲಿ ಜೆಡಿಎಸ್‌ ಅಧಿಕಾರ ಹಿಡಿದಿರಬಹುದು. ಆದರೆ, ಜನತೆ ಹಾಗೂ ಚುನಾಯಿತ ಸದಸ್ಯರ ಅಪೇಕ್ಷೆಯಂತೆ ಅಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌. ಆರ್‌.ಸಂತೋಷ್‌ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಲಾಟೆ ಗದ್ದಲದಿಂದಲೇ ಜನರನ್ನ ಹಿಡಿದಿಟ್ಟುಕೊಳ್ಳಬಹುದು ಎಂಬ ಶಿವಲಿಂಗೇಗೌಡ ಭ್ರಮೆ ರಾಜಕಾರಣಕ್ಕೆ ಬಿಜೆಪಿ ಇತಿಶ್ರೀ ಆಡಲಿದೆ. ಅಲ್ಲದೆ ಗ್ರಾಪಂ ಚುನಾವಣೆಯ ಪೂರ್ವದಿಂದ ಹಿಡಿದು ಇತ್ತೀಚೆಗೆ ಗೀಜಿಹಳ್ಳಿಯಲ್ಲಿ ನಡೆದಂತ ಹಲ್ಲೆ ಪ್ರಕರಣ. ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೆಲ್ಲಾದರು ನಡೆದರೆ ಶಾಸಕರ ಮನೆಯ ಮುಂದೆ ಐದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಆಮರಣಾಂತರ ಉಪವಾಸ ಕೈಗೊಳ್ಳುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

'ಬಿಜೆಪಿಯನ್ನು ಟೀಕಿಸುತ್ತಿರುವ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗ್ತಾರೆ'?

ಗ್ರಾಪಂ ಅಧಿಕಾರ ಹಿಡಿಯಲು ಜೇನುಕಲ್‌ ಸಿದ್ದೇಶ್ವರ ಕ್ಷೇತ್ರದಲ್ಲಿ ಗ್ರಾಪಂ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಿಕೊಂಡ ಶಾಸಕರು, ಮುಂದಿನ ವಿಧಾನಸಭೆ ಚುನಾವಣೆ ಅಷ್ಟರಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಆಣೆ ಮಾಡಲಿ ಎಂದು ಸವಾಲು ಹಾಕಿದ ಅವರು, ಈಗ ಒಲ್ಲದ ಮನಸ್ಸಿನಿಂದ ಶಾಸಕರಿಂದ ಹಾರ ಶಾಲು ಹಾಕಿಸಿಕೊಂಡಿರುವ ಗ್ರಾಪಂ ಸದಸ್ಯರು ಮುಂದಿನ ದಿನಗಳಲ್ಲಿ ಅವರ ಹಿಂದೆಯೇ ಇರುತ್ತಾರೋ ಕಾದು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

 ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂಜಿನಿಯರಿಂಗ್‌ ಕಾಲೇಜು ಕಾಮಗಾರಿಗೆ ನನ್ನ ಹಾಗೂ ಪಕ್ಷದ ವಿರೋಧವಿಲ್ಲ. ಆದರೆ, ಪ್ರತಿಭಟನಾನಿರತ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಮುಂದುವರಿಯಲಿ. ಪ್ರತಿಭಟನಾಕಾರರ ಮನವೊಲಿಸಲು ಕರೆದರೆ ನಾನು ಸಹ ಬರುತ್ತೇನೆ ಎಂದು ಹೇಳಿದರು.

ಅರಸೀಕೆರೆ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರ ಘೋಷಣೆಯನ್ನು ನ್ಯಾಯಾಲಯದ ಮೂಲಕ ತಡೆದು ನಿಲ್ಲಿಸಿರುವ ಶಾಸಕರು ಮತ್ತು ಅವರ ಬೆಂಬಲಿಗರು ತಾವು ಸಲ್ಲಿಸಿರುವ ತಡೆಯಾಜ್ಞೆಯನ್ನು ವಾಪಸ್‌ ಪಡೆಯುವಂತೆ ಮನವಿ ಮಾಡಿದ ಅವರು, ಭಂಡತನವನ್ನು ಮುಂದುವರಿಸಿದರೆ ನ್ಯಾಯಾಲಯದಿಂದಲೇ ನಮ್ಮ ಪರವಾಗಿ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!