ರೈತರ ಹೋರಾಟ ಪ್ರಾಯೋಜಕತ್ವದ ಹೋರಾಟ ಎಂದ ಬಿಜೆಪಿ ರಾಜ್ಯಸಭಾ ಸದಸ್ಯ

By Kannadaprabha NewsFirst Published Feb 7, 2021, 1:49 PM IST
Highlights

ಯಾರೊಬ್ಬರು ಏನೂ ಮಸೂದೆಯಲ್ಲಿ ಏನು ನ್ಯೂನತೆ ಇದೆ ಎಂದು ಹೇಳುತ್ತಿಲ್ಲ| ಕೇಂದ್ರ ಸರ್ಕಾರ ಹೋರಾಟಗಾರರ ಜೊತೆಗೆ 11ಸಲ ಗೌರವಾನ್ವಿತವಾಗಿ ಸಭೆ ನಡೆಸಿದೆ| ಲೋಪ ಇಲ್ಲದ ಮಸೂದೆಯನ್ನು ಹಿಂಪಡೆಯಿರಿ ಎಂಬ ಬೇಡಿಕೆ ಇಡುತ್ತಿರುವುದು ವಿಪರ್ಯಾಸದ ಸಂಗತಿ| 

ಬೆಳಗಾವಿ(ಫೆ.07): ಕೇಂದ್ರದ ಕೃಷಿ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಪ್ರಾಯೋಜಕತ್ವ ಹೋರಾಟವಾಗಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈತರ ಹೋರಾಟ ರೈತರ ಕೈಯಲ್ಲಿ ಉಳಿದಿಲ್ಲ, ಹೈಜಾಕ್‌ ಮಾಡಲಾಗಿದೆ. ಪ್ರಧಾನಿ ವಿರುದ್ಧ ಮಾತನಾಡಲು ಯಾವ ಅಂಶಗಳು ಪ್ರತಿಪಕ್ಷಗಳಿಗೆ ಸಿಗುತ್ತಿಲ್ಲ. ಅಮಾಯಕ ರೈತರನ್ನು ಪ್ರಚೋದಿಸುವ ಕೆಲಸವನ್ನು ಕಾಂಗ್ರೆಸ್‌ ಸೇರಿದಂತೆ ಇತರ ಪ್ರತಿಪಕ್ಷಗಳು ಮಾಡುತ್ತಿವೆ. ಕೇಂದ್ರದ ನೂತನ ಕೃಷಿ ಮಸೂದೆಗಳಲ್ಲಿ ಯಾವ ಅಂಶ ಒಳ್ಳೆಯದಿಲ್ಲ ಎಂದು ಹೇಳಲು ರೈತರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲೂ ಪ್ರತಿಪಕ್ಷದವರು ನೂತನ ಮಸೂದೆಯಲ್ಲಿನ ಲೋಪವನ್ನು ಹೇಳುತ್ತಿಲ್ಲ. ಕೇವಲ ನೂತನ ಮಸೂದೆಗಳು ರೈತ ವಿರೋಧಿ ಎಂದು ಜನರಲ… ಹೇಳಿಕೆ ನೀಡುತ್ತಿದ್ದಾರೆ. ರೈತರಾಗಲಿ, ಪ್ರತಿಪಕ್ಷದವರು ಕೃಷಿ ಮಸೂದೆಯಲ್ಲಿನ ಲೋಪ ತಿಳಿಸಲು ವಿಫಲರಾಗಿದ್ದಾರೆ. ಇವತ್ತು ನಡೆಯುತ್ತಿರುವ ಹೋರಾಟ ರೈತ ಹೋರಾಟವಾಗಿಲ್ಲ. ಇದು ಪ್ರಾಯೋಜಕತ್ವದ ಹೋರಾಟವಾಗಿದೆ. ಭಾರತದ ಹೋರಾಟಕ್ಕೆ ವಿದೇಶಿಗರು ಬೆಂಬಲ ನೀಡುವ ಮಟ್ಟಿಗೆ ಈ ಹೋರಾಟ ಬಂದು ನಿಂತಿದೆ. ನೂತನ ಕೃಷಿ ಮಸೂದೆಗಳ ಬಗ್ಗೆ ಪ್ರಧಾನಿ ಹಾಗೂ ಕೃಷಿ ಸಚಿವರು ಉಭಯ ಸದನಗಳಲ್ಲಿ ತಿಳಿಸಿದ್ದಾರೆ ಎಂದರು.

'ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪರ, ನಿಷ್ಠಾವಂತರಿಗೆ ಬೆಲೆ ಇದ್ದೇ ಇದೆ'

ಎಂಎಸ್‌ಪಿ ದರದ ಅನ್ವಯ ಪಂಜಾಬ ಗೋಧಿ ಹಾಗೂ ಹರಿಯಾಣದ ಅಕ್ಕಿ ಶೇ. 60 ರಷ್ಟುದೇಶಾದ್ಯಂತ ಖರೀದಿಯಾಗಿದೆ. ದೆಹಲಿ ರೈತರ ಹೋರಾಟಕ್ಕೆ ನಮ್ಮ ರಾಜ್ಯದ ರೈತರೇಕೆ ಬೆಂಬಲಿಸುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಹೋರಾಟ ಮಾಡುತ್ತಿರುವ ರೈತ ಮುಖಂಡರು ರಾಜ್ಯದ ರೈತರಿಗೆ ಉತ್ತರಿಸಬೇಕಿದೆ. ನಮ್ಮ ಸರ್ಕಾರದ ಮೂರು ಕಾಯ್ದೆಗಳಲ್ಲಿ ರೈತ ವಿರೋಧಿಯ ಯಾವ ಅಂಶವೂ ಇಲ್ಲ . ರೈತರ ಆದಾಯ ದ್ವಿಗುಣವಾಗಬೇಕು ಎಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಮಸೂದೆ ಜಾರಿಗೊಳಿಸಿದೆ ಎಂದರು.

ಕೇಂದ್ರ ಸರ್ಕಾರ ಹೋರಾಟಗಾರರ ಜೊತೆಗೆ 11ಸಲ ಗೌರವಾನ್ವಿತವಾಗಿ ಸಭೆ ನಡೆಸಿದೆ. ಸಭೆಯಲ್ಲಿ ಮಸೂದೆಯಲ್ಲಿನ ಲೋಪವನ್ನು ಯಾವೊಬ್ಬ ಮುಖಂಡರು ಹೇಳುತ್ತಿಲ್ಲ. ಲೋಪ ಇಲ್ಲದ ಮಸೂದೆಯನ್ನು ಹಿಂಪಡೆಯಿರಿ ಎಂಬ ಬೇಡಿಕೆ ಇಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಅವರು ಹೇಳಿದರು.
 

click me!