ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಮೇಲಕ್ಕೇಳುವ ಹಂತದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನೀರು ಹರಿಸಲಾರದೆ ರೈತರು ಕಂಗಾಲಾಗುತ್ತಿದ್ದಾರೆ. ರೈತರಿಗೆ ವಿಶೇಷ ಆದ್ಯತೆ ಮೇರೆಗೆ ವಿದ್ಯುತ್ ಪೂರೈಸಬೇಕು. ವಿದ್ಯುತ್ ಕಣ್ಣಾ ಮುಚ್ಚಾಲೆ ತಡೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದ ಶಾಸಕ ರಮೇಶ ಜಾರಕಿಹೊಳಿ
ಗೋಕಾಕ(ಅ.09): ಮುಂಗಾರು ಮಳೆ ಕೈಕೊಟ್ಟ ಹಿನ್ನಲೆ ರೈತರು ತಮ್ಮ ಬೆಳೆಗಳಿಗೆ ನೀರು ಹರಿಸಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು ರೈತರ ಪರ ನಿಲ್ಲಬೇಕಾದ ಸರಕಾರ ವಿದ್ಯುತ್ ವಿಷಯದಲ್ಲಿ ಕಣ್ಣಾಮುಚ್ಚಾಲೆಯಾಟ ಆಡುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಕಿಡಿಕಾರಿದ್ದಾರೆ.
ರವಿವಾರದಂದು ತಮ್ಮ ಗೃಹ ಕಚೇರಿಯಲ್ಲಿ ಖನಗಾಂವ, ಶಿಲ್ತಿಭಾಂವಿ, ಜಮನಾಳ, ಮಕ್ಕಳಗೇರಿ, ಹುಲಿಕಟ್ಟಿ, ಕೊಳವಿ, ಹಣಮಾಪುರ, ಮಮದಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಹವಾಲು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಗ್ರಾಮೀಣ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಬೋರ್‌ವೇಲ್ ಮೂಲಕ ನೀರು ಹರಿಸಲು ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಸರಕಾರ ಉಚಿತಗಳ ಭಾಗ್ಯ ನೀಡುವ ಬರದಲ್ಲಿ ರೈತರನ್ನು ಮರೆಯುತ್ತಿದೆ. ಲೋಡ್ ಶೇಡ್ಡಿಂಗ್ ಮಾಡುವ ಮೂಲಕ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ ಹೀಗಾಗಿ ರೈತರ ಬೆಳೆಗಳು ನಾಶವಾಗುವ ಹಂತದಲ್ಲಿವೆ ಎಂದರು.
ಬಿಡುಗಡೆಯಾಗದ ಅನುದಾನ: ಸಂಕಷ್ಟದಲ್ಲಿ ಗುತ್ತಿಗೆದಾರರು
ಕೊಳವೆ ಬಾವಿಗಳಿಂದ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಸಿಗುವ ನೀರನ್ನು ಬಳಸಿಕೊಂಡು ಹೆಚ್ಚಿನ ಬೆಳೆಗಳನ್ನು ಬೆಳೆಯಬಹುದು ಎಂದುಕೊಂಡಿರು ರೈತರು ಕಬ್ಬು, ಮೆಕ್ಕಜೋಳ, ಹತ್ತಿ, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳನ್ನೂ ಬೆಳೆದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಮೇಲಕ್ಕೇಳುವ ಹಂತದಲ್ಲಿ ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನೀರು ಹರಿಸಲಾರದೆ ರೈತರು ಕಂಗಾಲಾಗುತ್ತಿದ್ದಾರೆ. ರೈತರಿಗೆ ವಿಶೇಷ ಆದ್ಯತೆ ಮೇರೆಗೆ ವಿದ್ಯುತ್ ಪೂರೈಸಬೇಕು. ವಿದ್ಯುತ್ ಕಣ್ಣಾ ಮುಚ್ಚಾಲೆ ತಡೆಯಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಅಧಿಕಾರಿಗಳಿಗೆ ಗ್ರಾಮೀಣ ಭಾಗದ ರೈತರಿಗೆ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿದರು.