ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರ ಸಮಸ್ಯೆ ಏಕೆ ಈಡೇರಿಸಲಿಲ್ಲ| ಕೋಡಿಹಳ್ಳಿ ಚಂದ್ರಶೇಖರ ಹಾಗೂ ಕಾಂಗ್ರೆಸ್ ಚಿತಾವಣಿಯಿಂದ ಪ್ರತಿಭಟನೆ ನಡೆಯುತ್ತಿದೆ| ಕೋಡಿಹಳ್ಳಿ ಒಬ್ಬ 420| ಕಾಂಗ್ರೆಸ್ ನಾಯಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ|
ಮಸ್ಕಿ(ಏ.15): ಸಾರಿಗೆ ನೌಕರರ ಪ್ರತಿಭಟನೆ ವಿಷಯದಲ್ಲಿ ಕಾಂಗ್ರೆಸ್‌ನವರು ಬೆಂಕಿ ಹಚ್ಚಿ ರಾಜಕೀಯ ಮಾಡಿಕೊಳ್ಳುವುದನ್ನು ನಿಲ್ಲಿಸಿ ಸಮಸ್ಯೆ ಬಗೆ ಹರಿಸಲು ಸರ್ಕಾರ ಜೊತೆ ಕೈಜೊಡಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಮುಖಂಡರು ಪೆಟ್ರೋಲ್ ಹಾಗೂ ಬೆಂಕಿ ಪಟ್ಟಣ ಜೇಬಲ್ಲಿಟ್ಟುಕೊಂಡಿರುತ್ತಾರೆ. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ ಅಲ್ಲಿ ಪೆಟ್ರೂಲ್ ಹಾಕಿ ಬೆಂಕಿ ಹಚ್ಚುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾರಿಗೆ ನೌಕರರ ಸಮಸ್ಯೆ ಏಕೆ ಈಡೇರಿಸಲಿಲ್ಲ ಎಂದ ಅವರು ಕೋಡಿಹಳ್ಳಿ ಚಂದ್ರಶೇಖರ ಹಾಗೂ ಕಾಂಗ್ರೆಸ್ ಚಿತಾವಣಿಯಿಂದ ಪ್ರತಿಭಟನೆ ನಡೆಯುತಿದೆ. ಕೋಡಿಹಳ್ಳಿ ಒಬ್ಬ 420 ಎಂದು ಹರಿಹಾಯ್ದರು. ಸಾರಿಗೆ ನೌಕರರದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು ಅದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕೋಡಿಹಳ್ಳಿ ಚಂದ್ರಶೇಖರ ಅವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
'ಕೊಟ್ಟ ಮಾತಿನಂತೆ ನಡೆವ ಯಡಿಯೂರಪ್ಪ'
ಕೋವಿಡ್ ವಿಷಯದಲ್ಲಿ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಲಿಲ್ಲ. ಪ್ರತಿಪಕ್ಷವಾದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದರು. ಮಸ್ಕಿ ಕ್ಷೇತ್ರದಲ್ಲಿ ಪ್ರತಿ ಬೂತ್ ನಲ್ಲಿಯೂ ಬಿಜೆಪಿ ಹೆಚ್ಚಿನ ಮತ ಪಡೆಯಲಿದೆ. ಪ್ರತಾಪಗೌಡ ಪಾಟೀಲ ಹಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಸ್ಪಂದಿಸದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ, ಕ್ಷೇತ್ರದಾದ್ಯಂತ ಉತ್ತಮ ವಾತಾವರಣ ಇದ್ದು ಪ್ರತಾಪಗೌಡ ಪಾಟೀಲ 25 ಸಾವಿರ ಮತಗಳಿಂದ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಾನಂದ ಯಾದವ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು.
ಬಣ್ಣದ ಓಕಳಿ ಆಡಿದ ರೇಣುಕಾಚಾರ್ಯ
ಯುಗಾದಿ ನಿಮಿತ್ತ ಮಸ್ಕಿ ಪಟ್ಟಣದಲ್ಲಿ ಬುಧವಾರ ನಡೆದ ಬಣ್ಣದ ಓಕಳಿಯಲ್ಲಿ ಯುವಕರೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರ ಪರವಾಗಿ ಮತಯಾಚನೆ ಮಾಡುತ್ತಿದ್ದ ವೇಳೆ ಕಾರಿನಿಂದ ಕೆಳಗೆ ಇಳಿದ ರೇಣುಕಾಚಾರ್ಯ ಯುವಕರ ಜೊತೆ ಬಣ್ಣದ ಹಬ್ಬ ಆಚರಿಸುವ ಮೂಲಕ ಯುಗಾದಿ ಹಬ್ಬದ ಶುಭ ಕೋರಿದರು.