ಕೊರೋನಾ ಶರವೇಗ, ಜಿಲ್ಲಾಡಳಿತ ಆಮೆವೇಗ| ಕಲಬುರಗಿಯಲ್ಲಿ ಮಿತಿಮೀರುತ್ತಿದೆ ಕೊರೋನಾ ಸೋಂಕು ಹಾಗೂ ಸಾವಿನ ಸಂಖ್ಯೆ| ಕಳೆದ 8 ತಿಂಗಳ ನಂತರ ಒಂದೇ ದಿನದಲ್ಲಿ 4 ಸಾವು- ಜಿಲ್ಲೆಯಲ್ಲಿ ಹೆಚ್ಚಿದ ಆತಂಕ| ಕಳೆದ 5 ದಿನದಲ್ಲಿ 1, 363 ಹೊಸ ಸೋಂಕಿನ ಪ್ರಕರಣಗಳು, 13 ಮಂದಿ ಸಾವು|
ಶೇಷಮೂರ್ತಿ ಅವಧಾನಿ
ಕಲಬುರಗಿ(ಏ.15): ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆ ಆತಂಕ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಕಳೆದ 10 ದಿನದಲ್ಲೇ ಸೋಂಕಿನ 2 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ, ಸೋಂಕಿನಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 65 ವರ್ಷ ಮೇಲ್ಪಟ್ಟಿದ್ದವರು ಹಾಗೂ ಇತರೆ ಅನಾರೋಗ್ಯದಿಂದ ಬಳಲುತ್ತಿರುವವರು 18 ಮಂದಿ ಸಾವನ್ನಪ್ಪಿದ್ದಾರೆ.
ಸೋಂಕು, ಸಾವಿನಲ್ಲಿ ರಾಜಧಾನಿ ಬೆಂಗಳೂರು ನಂತರದ ಸ್ಥಾನದಲ್ಲಿ ಕಲಬುರಗಿಯೇ ಇದೆ. ಸರಾಸರಿ ನಿತ್ಯ 300ರಷ್ಟುಸೋಂಕು ಪತ್ತೆಯಾಗುತ್ತಿವೆಯಲ್ಲದೆ ಮೂವರು ಸಾವನ್ನಪ್ಪುದ್ದಿದ್ದಾರೆ. ಹೀಗಾಗಿ ಕೊರೋನಾ ಸೋಂಕಿನ ಹೆಚ್ಚಳ ಹಾಗೂ ಸಾವಿನ ಸರಪಳಿ ಹಿಗ್ಗುತ್ತಿರೋದರಿಂದ ನಗರ ಹಾಗೂ ಜಿಲ್ಲೆಯಲ್ಲಿ ಜನ ಹೌ ಹಾರುವಂತಾಗಿದೆ.
ಏ.12ರಂದು ಕಲಬುರಗಿಯಲ್ಲಿ 335 ಸೋಂಕಿನ ಪ್ರಕರಣ ಪತ್ತೆಯಾದಾಗ ಅಕ್ಷರಶಃ ಜನ ತಲ್ಲಣಗೊಂಡಿದ್ದರು. ಬೆಂಗಳೂರು ನಂತರ 2ನೇ ಅತಿ ಹೆಚ್ಚಿನ ಸೋಂಕು ಕಂಡ ಜಿಲ್ಲೆಯಾಗಿ ಕಲಬುರಗಿ ಹೊರಹೊಮ್ಮಿ ಆತಂಕ ಹೆಚ್ಚಿಸಿದೆ. ಕಳೆದ 8 ತಿಂಗಳಲ್ಲಿ ಜಿಲ್ಲೆ ಕಂಡ ಅತೀ ಹೆಚ್ಚಿನ ಸೋಂಕು- ಸಾವಿನ ಪ್ರಕರಣಗಳು ಇದಾಗಿದ್ದು ಆತಂಕ ಹೆಚ್ಚಿದೆ. ಇನ್ನು ಯುಗಾದಿ ಹಬ್ಬದ ದಿನವಾದ ಏ.13ರಂದು ಜಿಲ್ಲೆಯಲ್ಲಿ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದು ಈ ಸಂಖ್ಕೆಯೂ ಕಳೆದ 8 ತಿಂಗಳಲ್ಲಿ ಅತ್ಯಧಿಕ, ಏ.8ರಂದು ಮೂವರು ಒಂದೇ ದಿನ ಸಾವನ್ನಪ್ಪಿರೋದು ಹೊರತುಪಡಿಸಿದರೆ ಹೆಚ್ಚಿನ ಸಾವು ನೋವು ಸಂಭಿಸಿದ್ದು ಏ.13ರ ಮಂಗಳವಾರ ಎಂಬುದು ಗಮನಾರ್ಹ ಸಂಗತಿ.
ಮತ್ತೆ ಲಾಕ್ ಡೌನ್ ಆಗುತ್ತಾ? ಹೆಣ ಸುಡಲು ಆಂಬುಲೆನ್ಸ್ ಸರತಿ ಸಾಲು
ಪರೀಕ್ಷೆಯಲ್ಲಿ ಹೆಚ್ಚಳ:
ಆರೋಗ್ಯ ಇಲಾಖೆ ನಿತ್ಯ 3ರಿಂದ 4 ಸಾವಿರ ಕೋವಿಡ್- 19 ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಗಳು ಹೆಚ್ಚುತ್ತಿರುವಂತೆಯೇ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು ಬರುವ ದಿನಗಳಲ್ಲಿ ಇನ್ನೂ ಸೋಂಕು ಹೆಚ್ಚುವ ಸಂಭವಗಳಿವೆ.
ಕೊರೋನಾ ಮರೆತ ಮಂದಿ:
ಕೊರೋನಾ ಸೋಂಕು ಮೀತಿ ಮೀರುತ್ತಿದ್ದರೂ ಜನ ಮಾತ್ರ ಸುರಕ್ಷತೆ ಕ್ರಮಗಳನ್ನು ಪಾಲಿಸದೆ ಅಲಕ್ಷತನ ತೋರುತ್ತಿದ್ದಾರೆ. ಸೂಪರ್ ಮಾರ್ಕೆಟ್, ಗಂಜ್, ರಾಮ ಮಂದಿರ ವೃತ್ತ, ಕಣ್ಣಿ ಮಾರುಕಟ್ಟೆ ಪ್ರದೇಶ ಸೇರಿದಂತೆ ಜನದಟ್ಟಣೆಯ ದಿನಸಿ, ತರಕಾರಿ ಮಾರಾಟ ಪ್ರದೇಶದಲ್ಲಿ ಮಾಸ್ಕ್ ಹಾಕೋದನ್ನ ವರ್ತಕರು, ಖರೀದಿದಾರರು ಇಬ್ಬರೂ ಮರೆತಿದ್ದಾರೆ. ಇನ್ನು ಸಾಮಾಜಿಕ ಅಂತರ ಕಾಪಾಡೋದರ ಬಗ್ಗೆ ಯಾರೂ ಲಕ್ಷ ತೋರುತ್ತಿಲ್ಲ. ಹಬ್ಬವಾದ್ದರಿಂದ ಖರೀದಿ ಬಲು ಜೋರು, ಮಾರುಕಟ್ಟೆ ಸದಾ ಜನಜಂಗುಲಿಯಿಂದ ತುಂಬಿರೋದರಿಂದ ಸೋಂಕಿನ ಸರಪಳಿ ಹಾಗೇ ಹಿಗ್ಗುತ್ತಲೇ ಸಾಗಿದೆ.
ಕಲಬುರಗಿಯಲ್ಲಿ ಕಳೆದ 3 ದಿನದಿಂದ ರಾತ್ರಿ ಕರ್ಫ್ಯೂ ಸಾಗಿದೆ. ರಾತ್ರಿ 9. 30 ರೊಳಗೇ ಜನ ಮಳಿಗೆಗಳನ್ನು ಮುಚ್ಚಿ ಮನೆ ಸೇರುತ್ತಿದ್ದಾರೆ. ಆದರೆ ಹಗಲಲ್ಲಿ ಸಾಗುವ ಜಾತ್ರೆಯಲ್ಲಿ ಯಾವುದೇ ನಿಯಂತ್ರಣವಿಲ್ಲ, ಸೋಂಕಿನ ಸರಪಳಿ ತುಂಡಾಗದೆ ಹಾಗೇ ಬೆಳೆಯುತ್ತ ಹೊರಟಿದೆ. ಮಾಸ್ಕ್ ಬಳಕೆಯ ಬಗ್ಗೆ ಜನ ತೋರುತ್ತಿರುವ ಬೇಕಾಬಿಟ್ಟಿತನ, ಸಾಮಾಜಿಕ ಅಂತರ ಪಾಲನೆಯಲ್ಲಿನ ಅಲಕ್ಷತನಗಳಿಂದಲೂ ಸೋಂಕು ವ್ಯಾಪಿಸುತ್ತಿದೆ.
ಮಹಾರಾಷ್ಟ್ರ ಗಡಿ ಹೊಂದಿರುವ ಅಫಜಲ್ಪುರ ಹಾಗೂ ಆಳಂದದಲ್ಲಿ 5 ಚೆಕ್‌ಪೋಸ್ಟ್ ಮೂಲಕ ಮಹಾರಾಷ್ಟ್ರದಿಂದ ಬರುವವರನ್ನು ತಪಾಸಣೆಗೊಳಪಡಿಸಲಾಗುತ್ತಿದೆಯಾದರೂ ಇಲ್ಲಿ ಕದ್ದುಮುಚ್ಚಿ ಜಿಲ್ಲೆ ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾಹಾರಾಷ್ಟ್ರದಿಂದಲೇ ಸೊಂಕು ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರೋದು ಆತಂಕ ಇಮ್ಮಡಿಗೊಳಿಸಿದೆ. ದತ್ತಾನ ತಾಣ ಗಾಣಗಾಪುರ, ರೇಣುಕಾ ಯಲ್ಲಮ್ಮ ಮಂದಿರದ ಮಣ್ಣೂರು, ಭಾಗ್ಯಂವತಿ ದೇವಿ ತಾಣ ಘತ್ತರಗಾ ಇಲ್ಲೆಲ್ಲಾ ಭಕ್ತರಿಗೆ ನಿರ್ಬಂಧಗಳಿದ್ದರೂ ಸಹ ಕದ್ದುಮುಚ್ಚಿ ಇಲ್ಲಿಗೆ ಬಂದು ಹೋಗುವ ಮಹಾ ಭಕ್ತರ ಸಂಪೂರ್ಣ ನಿಯಂತ್ರಣ ಇಂದಿಗೂ ಸಾಧ್ಯವಾಗಿಲ್ಲ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳು ಕಾಗದಲ್ಲೇ ಉಳಿಯುತ್ತಿವೆಯೇ ಹೊರತು ಅನುಷ್ಠಾನಕ್ಕೇ ಬರುತ್ತಿಲ್ಲ. ಮಾಸ್ಕ್ ರಹಿತರಿಗೆ ದಂಡ ಎಂದು ಹೇಳಲಾಗಿತ್ತು, 2 ದಿನ ಮಾತ್ರ ಈ ಬಗ್ಗೆ ಪರಿಶೀಲನೆ ನಡೆಯಿತು, ನಂಚರ ಎಲ್ಲವೂ ಮಾಮೂಲಾಯ್ತು, ಇದರಂತೆಯೇ ಸಾಮಾಜಿಕ ಅಂತರ ಕಾಪಾಡದ ಮಳಿಗೆ ಲೈಸನ್ಸ್ ರದ್ದು ಅಂತ ಪಾಲಿಕೆ ಹೇಳಿತು, ಇಂದಿಗೂ ಈ ಕ್ರಮ ಜಾರಿಗೊಂಡಿಲ್ಲ. ಜಿಲ್ಲಾಧಿಕಾರಿಗಳು ಕೊರೋನಾ ನಿಂತ್ರಣದ ಹಲವು ಕ್ರಮಗಳನ್ನು ನಿತ್ಯ ಹೇಳಿಕೆ ರೂಪದಲ್ಲಿ ನೀಡುತ್ತಿದ್ದಾರಾದರೂ ಅವು ಅನುಷ್ಠಾನಕ್ಕೆ ಬರುತ್ತಿಲ್ಲ. ಇದರಿಂದಾಗಿ ಕೊರೋನಾ ನಾಗಾಲೋಟದ ಮುಂದೆ ಜಿಲ್ಲಾಡಳಿತ ತೆವಳುತ್ತಿದೆ.
ಬಸ್ ಮುಷ್ಕರವೂ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡಲು ಕಾರಣವಾಗಿದೆ. ಜನ ಬಸ್ಸುಗಳಿಲ್ಲದೆ ಆಟೋ, ಕ್ರೂಸರ್, ಜೀಪ್, ಕಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ. ಇದರಿಂದ ಕಿಕ್ಕಿರಿದು ವಾಹನಗಲು ಜನರಿಂದ ತುಂಬುತ್ತಿವೆ. ಇಲ್ಲಿ ಸಾಮಾಜಿಕ ಅಂತರ ಮಂಗಮಾಯ, ಹೀಗಾಗಿ ಸೋಂಕಿನ ಸರಪಳಿ ಇದರಿಂದ ತುಂಡರಿಸೋದು ಅಸಾಧ್ಯ. ಹೀಗಾಗಿ ಕೊರೆನಾ ಸೋಂಕು ಶರವೇಗದಿಂದ ಹರಡಲಾರಂಭಿಸಿವೆ.