ನಾನೇನು ಸನ್ಯಾಸಿನಾ? ನನಗೂ ಸಚಿವ ಸ್ಥಾನ ಬೇಕು ಎಂದ ಬಿಜೆಪಿ ಶಾಸಕ

By Kannadaprabha NewsFirst Published Feb 26, 2020, 12:40 PM IST
Highlights

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಕರುಣಾಕರ ರೆಡ್ಡಿ| ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ಹರಪನಹಳ್ಳಿ ಜಿಲ್ಲಾ ಕೇಂದ್ರ ಮಾಡುವ ಕುರಿತು ಈಚೆಗೆ ನಿಯೋಗದೊಂದಿಗೆ ಹೋಗಿ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ| ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ| 

ಹರಪನಹಳ್ಳಿ(ಫೆ.26): ನಾನು ಸನ್ಯಾಸಿ ಅಲ್ಲ, ನನಗೂ ಸಚಿವನಾಗಬೇಕೆಂಬ ಆಸೆ ಇದೆ, ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಸಿಗುವುದು ದೈವ ಇಚ್ಛೆ, ಆ ನಿಟ್ಟಿನಲ್ಲಿ ಪ್ರಯತ್ನ ಇದೆ. ಸಚಿವ ಸ್ಥಾನಗಳು ಭರ್ತಿಯಾಗುವ ವರೆಗೂ ಖಂಡಿತ ಪ್ರಯತ್ನ ಇರುತ್ತದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವ ಕುರಿತು ಈಚೆಗೆ ನಿಯೋಗದೊಂದಿಗೆ ಹೋಗಿ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದೇವೆ. ವರದಿ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ವಿಶ್ವಾಸವಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹರಪನಹಳ್ಳಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನ ಸಹ ಇದೆ, ಈ ಸಂಬಂಧ ಶಿಕ್ಷಣ ಸಚಿವ ಸುರೇಶಕುಮಾರ ಬಳಿ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು. ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿ ಯಾವುದೇ ಸಚಿವರಿರಲಿ ಅಭಿವೃದ್ಧಿಯಾಗಬೇಕಷ್ಟೆ ಎಂದರು.

ಕಕ ಅಭಿವೃದ್ಧಿಗೆ 2 ಸಾವಿರ ಕೋಟಿ ಪ್ರಸ್ತಾವನೆ:

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ . 2 ಸಾವಿರ ಕೋಟಿ ಅನುದಾನ ನೀಡಬೇಕೆಂದು ಈ ಭಾಗದ ಶಾಸಕರೆಲ್ಲಾ ಸೇರಿ ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಕಳೆದ 1 ವರ್ಷದಲ್ಲಿ ಹರಪನಹಳ್ಳಿ ಕ್ಷೇತ್ರಕ್ಕೆ 371 ಜೆ ಅಡಿ 58 ಕೋಟಿ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಮುಂಬರುವ ಬಜೆಟ್‌ ನಲ್ಲಿ ಹರಪನಹಳ್ಳಿ ತಾಲೂಕಿನ ಚಿಗಟೇರಿ ಹಾಗೂ ನಿಚ್ಚವನಹಳ್ಳಿ ಭಾಗದ ಉಳಿದಿರುವ ಹಳ್ಳಿಗಳಿಗೆ ನದಿಯಿಂದ ಕುಡಿಯುವ ನೀರು ಒದಗಿಸುವ ಯೋಜನೆ ಸೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜು ಯೋಜನೆ ಟೆಂಡರ್‌ ಆಗಿ 2 ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಈ ಕುರಿತು ಸಂಬಂಧ ಪಟ್ಟವರ ಬಳಿ ಮಾತನಾಡುತ್ತೇನೆ ಎಂದ ಅವರು, ಸ್ಥಳೀಯ ಪಿಕಾರ್ಡ್‌ ಬ್ಯಾಂಕ್‌ ಚುನಾವಣೆಯಲ್ಲಿ ಬಹಳಷ್ಟು ಮತಗಳನ್ನು ತೆಗೆದು ಹಾಕಿದ್ದು, ಗೊಂದಲದಲ್ಲಿ ಚುನಾವಣೆ ನಡೆದಿದ್ದರಿಂದ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಅವರು ಅಭಿಪ್ರಾಯ ಪಟ್ಟರು. ಇಲ್ಲಿಯ ಪೊಲೀಸ್‌ ಹಾಗೂ ಅರಣ್ಯ ಇಲಾಖೆಗಳು ಒಂದು ವರ್ಷ ಕಳೆದರೂ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡಿಲ್ಲ, ಈ ಕುರಿತು ಸಂಬಂಧ ಪಟ್ಟವರ ಜೊತೆ ಮಾತನಾಡಿದ್ದೇನೆ ಎಂದರು.
 

click me!