ಶೀಘ್ರವೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಸಿದ್ಧತೆ ನಡೆಸಬೇಕು ಎಂದು ಬಿಜೆಪಿ ಮುಖಂಡರು ಕರೆ ನೀಡಿದ್ದಾರೆ.
ನರಸಿಂಹರಾಜಪುರ [ಜ.12]: ಏ.5ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಡಿ.ಎನ್. ಜೀವರಾಜ್ ಕರೆ ನೀಡಿದರು.
ಶನಿವಾರ ಉಮಾ ಮಹೇಶ್ವರ ಸಭಾಂಗಣದಲ್ಲಿ ತಾಲೂಕು ನೂತನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್‌ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಎಸ್‌ಎಸ್‌ಎನ್ ಹಾಗೂ ಪಿಸಿಎಆರ್‌ಡಿ ಬ್ಯಾಂಕ್ ಚುನಾವಣೆಗಳು ಶೀಘ್ರದಲ್ಲೇ ಬರಲಿವೆ. ಬಿಜೆಪಿಯಿಂದ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡೋಣ. ಈ ಹಿಂದೆ ಬಾಳೆಹೊನ್ನೂರಿನ ವೆನಿಲ್ಲಾ ಭಾಸ್ಕರ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರ ಅವಧಿಯಲ್ಲೇ ಎರಡು ಬಾರಿ ಶಾಸಕನಾಗಿದ್ದೇನೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದೇವೆ. ನೂತನ ಅಧ್ಯಕ್ಷ ಅರುಣ್‌ಕುಮಾರ್, ಶೃಂಗೇರಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ. ಅವರ ಕೈ ಬಲಪಡಿಸೋಣ ಎಂದರು.
ಏಪ್ರಿಲ್ 5, 9ಕ್ಕೆ ಗ್ರಾಪಂ ಚುನಾವಣೆ: ಇದು #FakeNews..
ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅರುಣ್‌ಕುಮಾರ್ ಮಾತನಾಡಿ, ಹಿಂದಿನ ಬಿಜೆಪಿ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಬೆಳೆಸುತ್ತೇನೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಮಧ್ಯೆ ಕೊಂಡಿಯಂತೆ ಕೆಲಸ ಮಾಡುತ್ತೇನೆ. ಪಕ್ಷ ನೀಡಿದ ಜವಬ್ದಾರಿ ಸರಿಯಾಗಿ ನಿಭಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಕಲ್ಮರುಡಪ್ಪ ವಹಿಸಿದ್ದರು. ಸಭೆಯಲ್ಲಿ ಹಿಂದಿನ ಸಾಲಿನ ತಾಲೂಕು ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೋಹನ್ ಉಪಸ್ಥಿತರಿದ್ದರು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸುವಿ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.