5 ಎಕರೆ ಜಾಗ ಕೋರಿ ಸಿಎಂ BSYಗೆ ಪತ್ರ ಬರೆದ ಎಸ್.ಎಂ.ಕೃಷ್ಣ

By Suvarna NewsFirst Published Aug 15, 2020, 4:55 PM IST
Highlights

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ , ಬಿ ಎಸ್ ಯಡಿಯೂರಪ್ಪ ವಗೆ ಪತ್ರ ಬರೆದಿದ್ದಾರೆ. 5 ಎಕರೆ ಜಾಗಕ್ಕೆ ಕೋರಿಕೆ ಇಟ್ಟಿದ್ದಾರೆ.

ಮಂಡ್ಯ (ಆ.15):  ಮೈಸೂರು- ಬೆಂಗಳೂರು ಹೆದ್ದಾರಿ ವಿಸ್ತರಣೆ ಹಾಗೂ ಕಕ್ಷಿದಾರರ ಒತ್ತಡದಿಂದ ಕಿಷ್ಕಿಂಧೆಯಾಗಿರುವ ಮದ್ದೂರು ನ್ಯಾಯಾಲಯವನ್ನು ವಿಸ್ತರಣೆ ಮಾಡಲು ಅನುಕೂಲವಾಗುವಂತೆ ರೇಷ್ಮೆ ಇಲಾಖೆಯ ಐದು ಎಕರೆ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರ ಮಾಡುವಂತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಪತ್ರ ಬರೆದಿರುವ ಎಸ್‌.ಎಂ. ಕೃಷ್ಣ ಅವರು ತಾವು ಮದ್ದೂರು ಕ್ಷೇತ್ರದ ಜನಪ್ರತಿನಿಧಿಯಾಗಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹಾಲಿ ಇರುವ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಿಸಿದ್ದೆ. ಸದರಿ ನ್ಯಾಯಾಲಯ ಜನಸಾಂದ್ರತೆಯಿಂದಾಗಿ ಪ್ರಸ್ತುತ ಕಿರಿದಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಸ್ಥಳಾವಕಾಶದ ಕೊರತೆ:

ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆಯಿಂದ ನ್ಯಾಯಾಲಯದ ಆವರಣ ಮತ್ತಷ್ಟುಕಿರಿದಾಗಿದೆ. ಹೊಸದಾಗಿ ಮಂಜೂರಾಗಿರುವ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಇದರಿಂದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಪ್ರಸ್ತುತ ಮದ್ದೂರಿನ ನ್ಯಾಯಾಲಯ ಸಂಕೀರ್ಣದಲ್ಲಿ 6 ನ್ಯಾಯಾಲಯಗಳು ಕಾರ‍್ಯನಿರ್ವಹಿಸುತ್ತಿವೆ. ಹೊಸದಾಗಿ ಮತ್ತೆ 3 ನ್ಯಾಯಾಲಯಗಳು ಮಂಜೂರಾಗಿವೆ. ಸ್ಥಳಾವಕಾಶದ ಕೊರತೆಯಿಂದ ಹೊಸದಾಗಿ ಮಂಜೂರಾದ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

12 ಎಕರೆ ಜಾಗ ಅನುಪಯುಕ್ತ:

ಹಾಲಿ ನ್ಯಾಯಾಲಯದ ಎದುರು ಭಾಗದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಸುಮಾರು 12 ಎಕರೆ ಜಾಗ ಅನುಪಯುಕ್ತವಾಗಿದೆ. ಈ ಜಾಗದಲ್ಲಿರುವ 5 ಎಕರೆ ಜಾಗದಲ್ಲಿ ಹೈಕೋರ್ಟ್‌ ಮಾದರಿಯ ಸುಸಜ್ಜಿತ ನ್ಯಾಯಾಲಯ ನಿರ್ಮಿಸಿ ಅದರ ಪಕ್ಕದಲ್ಲಿ ನ್ಯಾಯಾಧೀಶರಿಗೆ ವಸತಿಗೃಹಗಳನ್ನು ನಿರ್ಮಿಸಿದರೆ ಮದ್ದೂರು ನ್ಯಾಯಾಲಯದ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ. ಇದನ್ನು ಸೂಕ್ಷ್ಮವಾಗಿ ಮನಗಂಡಿರುವ ಎಸ್‌.ಎಂ.ಕೃಷ್ಣ ಅವರು ನ್ಯಾಯಾಲಯಕ್ಕೆ ಹೊಸ ರೂಪ ನೀಡುವ ಸದುದ್ದೇಶ ಹಾಗೂ ದೂರದೃಷ್ಟಿಯಿಂದ ಸರ್ಕಾರಕ್ಕೆ ಪತ್ರ ಬರೆದು ಗಮನಸೆಳೆದಿದ್ದಾರೆ.

ಬೊಮ್ಮಾಯಿ ಯಾರು ಆ ಮಾತು ಹೇಳಲು? ಗೃಹ ಸಚಿವರ ವಿರುದ್ಧ ಡಿಕೆಶಿ ಏಕವಚನದಲ್ಲಿ ವಾಗ್ದಾಳಿ...

ತಕ್ಷಣವೇ ವರದಿಗೆ ಸೂಚನೆ:

ಎಸ್‌.ಎಂ.ಕೃಷ್ಣ ಅವರು ಬರೆದಿರುವ ಪತ್ರದ ಆಧಾರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ಈ ಕುರಿತು ತಕ್ಷಣವೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಾರ್ಯೋನ್ಮುಖರಾಗಿದ್ದಾರೆ.

ಬೆಂಗಳೂರು ಗಲಭೆ: ಕೊನೆಗೂ ದೂರು ದಾಖಲಿಸಿದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ...

ಹೊಸದಾಗಿ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ವಸ್ತ್ರದ್‌ಮಠ್‌ ಅವರು ಶೀಘ್ರಗತಿಯಲ್ಲಿ ಮದ್ದೂರು ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್‌ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾದರಿ ನ್ಯಾಯಾಲಯವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರ ಶೀಘ್ರವಾಗಿ ಜಮೀನು ಹಸ್ತಾಂತರಿಸಿದರೆ ಕೆಲವೇ ವರ್ಷಗಳಲ್ಲಿ ಮದ್ದೂರಿನಲ್ಲಿ ಅತ್ಯಾಧುನಿಕ ನ್ಯಾಯಾಲಯ ನಿರ್ಮಾಣವಾಗಲಿದೆ.

 3ರ ಜಾಗದಲ್ಲಿ 6 ನ್ಯಾಯಾಲಯಗಳು--

ಮದ್ದೂರಿನಲ್ಲಿ ಹಾಲಿ ನ್ಯಾಯಾಲಯ ಸಂಕೀರ್ಣದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. 3 ನ್ಯಾಯಾಲಯಗಳು ಕಾರ್ಯನಿರ್ವಹಿಸುವ ಜಾಗದಲ್ಲಿ 6 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. 2 ಜೆಎಂಎಫ್‌ಸಿ, 2 ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಹಾಗೂ 2 ಕಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯಗಳು ಸೇರಿವೆ. ಇವೆಲ್ಲವೂ ಕಿರಿದಾದ, ಇಕ್ಕಟ್ಟಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಕೋರ್ಟ್‌ ಹಾಲ್‌ಗಳ ಕೊರತೆಯಿಂದ ಮಂಜೂರಾಗಿರುವ ಎಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದ ಮಾದರಿಯಲ್ಲಿ ನ್ಯಾಯಾಲಯದ ನೂತನ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗೃಹಗಳನ್ನು ಒಂದೇ ಆವರಣದಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ನ್ಯಾಯದಾನದ ಕಾರ್ಯಕ್ಕೆ ಅನುಕೂಲವಾಗಲಿದೆ. ಮೈಸೂರು-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ ಸದರಿ ಜಾಗದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುವುದರಿಂದ ಎಲ್ಲರಿಗೂ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮದ್ದೂರು ಜನರಿಗೆ ಶೀಘ್ರ ನ್ಯಾಯದಾನ ದೊರಕಲು ಹಾಗೂ ಸುಸಜ್ಜಿತ ನ್ಯಾಯಾಲಯ ನಿರ್ಮಿಸಿ ಸಾರ್ವಜನಿಕರು ಹಾಗೂ ವಕೀಲರಿಗೆ ಅನುಕೂಲ ಕಲ್ಪಿಸಿಕೊಡುವಲ್ಲಿ ಮಾಜಿ ಸಿಎಂ ಎಸ್‌.ಎಂ.ಕೃಷ್ಣರವರ ಇಚ್ಛಾಶಕ್ತಿ, ದೂರದೃಷ್ಟಿಮೆಚ್ಚುವಂತಹದ್ದು.

- ಟಿ.ಎಸ್‌.ಸತ್ಯಾನಂದ, ವಕೀಲರು.

ವರದಿ:  ಮಂಡ್ಯ ಮಂಜುನಾಥ

click me!