
ಬೆಂಗಳೂರು (ಜೂ.11): ಭಾರತ ಸೇರಿದಂತೆ ವಿದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಪಟ್ಟೆ ಅಭಿಮಾನಿಗಳಿದ್ದಾರೆ, ಅದರಲ್ಲೂ ತುಂಬಾ ವಿಭಿನ್ನ ವಿಭಿನ್ನ ಅಭಿಮಾನಿಗಳಿರೋದನ್ನ ನೋಡಿದ್ದೇವೆ. ಕೆಲವರು ಕೈ ಮೇಲೆ ಮೋದಿಯವರ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡಿರೋದು, ಇನ್ನೂ ಕೆಲವರು ತಮ್ಮ ಮಕ್ಕಳಿಗೆ ಮೋದಿ ಎಂದು ಹೆಸರಿಟ್ಟಿರೋದು ಹಾಗೇ ಅವರ ಮನೆಗೆ ಮೋದಿಮನೆ ಎಂದು ಹೆಸರಿಟ್ಟು ಗೃಹ ಪ್ರವೇಶ ಮಾಡಿರೋದನ್ನ ನೋಡಿದ್ದೇವೆ. ಈಗ ನಮ್ಮ ರಾಜ್ಯದಲ್ಲಿರೋ ಮತ್ತೊಬ್ಬ ಮೋದಿ ಅಭಿಮಾನಿಯನ್ನ ಪರಿಚಯ ಮಾಡಿಸ್ತೀವಿ ಈ ಸ್ಟೋರಿ ಓದಿ.
ಹೌದು! ಇಂಥ ಸಾಕಷ್ಟು ಮೋದಿ ಅಭಿಮಾನಿಗಳ ನಡುವೆ ನಮ್ಮ ರಾಜ್ಯದ ಅದ್ರಲ್ಲೂ ಬೆಂಗಳೂರಿನ ಮೋದಿ ಅಭಿಮಾನಿಯೋರ್ವ ತಮ್ಮ ನೂತನ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮರದ ಪ್ರತಿಮೆ ಸ್ಥಾಪಿಸಿ ತಾನೊಬ್ಬ ಕಟ್ಟಾ ಮೋದಿ ಅಭಿಮಾನಿ ಎಂದು ಸಾರಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿರುವ ರಾಘವೇಂದ್ರ ಶೆಟ್ಟಿಯವರೇ ತಮ್ಮ ನೂತನ ನಿವಾಸದಲ್ಲಿ ಪ್ರಧಾನಮಂತ್ರಿ ಮೋದಿಯವರ ಪ್ರತಿಮೆಯನ್ನ ಮನೆಯೊಳಗೆ ಪ್ರತಿಷ್ಟಾಪನೆ ಮಾಡಿರೋದು. ರಾಘವೇಂದ್ರ ಶೆಟ್ಟಿ ಮೋದಿ ಅಭಿಮಾನಿಯಾಗಿರೋದ್ರಿಂದ ತಮ್ಮ ನೂತನ ನಿವಾಸದಲ್ಲಿ ಮೋದಿಯವರಿಗೂ ಜಾಗ ಕೊಡಬೇಕು ಎಂದು ತಮ್ಮ ನಿವಾಸದಲ್ಲಿ ಮೋದಿಯವರನ್ನ ಮರದಲ್ಲಿ ಕೆತ್ತಿಸಿ ಪ್ರತಿಷ್ಠಾನ ಮಾಡಿಕೊಂಡಿದ್ದಾರೆ.
ಇನ್ನೂ ಒಂದೂವರೆ ವರ್ಷ ಕೊರೋನಾ ಕಾಟ; ಕೋಡಿಹಳ್ಳಿ ಶ್ರೀ ಭವಿಷ್ಯ
6 ಅಡಿ ಎತ್ತರದಲ್ಲಿ ಕೆತ್ತಲಾಗಿರುವ ಈ ಪ್ರತಿಮೆಯನ್ನ ಶಿವಾನಿ ಮರದಲ್ಲಿ ಕೆತ್ತಿಸಲಾಗಿದೆ. ಇದಕ್ಕಾಗಿ ರಾಘವೇಂದ್ರ ಶೆಟ್ಟಿಯವರು ಸುಮಾರು 8 ಲಕ್ಷ ರೂಪಾಯಿ ಖರ್ಚು ಹಾಕಿದ್ದಾರೆ. ವಿಶೇಷ ಅಂದ್ರೆ ಕೇವಲ ಪ್ರಧಾನಿ ಮೋದಿ ಪ್ರತಿಮೆ ಅಷ್ಟೇ ಅಲ್ಲದೇ ಇವರ ಮನೆಯಲ್ಲಿ ಅಂಬೇಡ್ಕರ್, ಶಿವಾಜಿ, ರಾಜ್ ಕುಮಾರ್ ಸೇರಿದಂತೆ ಸುಮಾರು ಹನ್ನೆರಡು ಮರದಿಂದ ನಿರ್ಮಿಸಿರುವ ಪ್ರತಿಮೆಗಳ ಸ್ಥಾಪನೆ ಮಾಡಿದ್ದಾರೆ ಒಂದೊಂದು ಕೋಣೆಯಲ್ಲಿ ಒಂದೊಂದು ಪ್ರತಿಮೆಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಇಂದು ರಾಘವೇಂದ್ರ ಶೆಟ್ಟಿಯವರು ತಮ್ಮ ನೂತನ ಮನೆಯ ಗೃಹ ಪ್ರವೇಶ ಮಾಡಿದ್ದು, ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಮೋದಿಯವರ ಪ್ರತಿಮೆ ಎಲ್ಲರ ಗಮನ ಸೆಳೆಯಿತು.