ನಾನು ಹಿಂದೂ ಅಲ್ಲವೇ? ನನ್ನ ಹೆಸರಲ್ಲೇ ಸಿದ್ದರಾಮ ಇದ್ದಾನೆ ಎಂದು ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದನ್ನೂ ನಾನು ಗಮನಿಸಿದ್ದೇನೆ. ಅವರೂ ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬಂದಂತಾಗುತ್ತದೆ. ಅವರು ಮಾಲೆ ಹಾಕಿದರೆ ಜಮೀರ್ ಅಹಮದ್ ಸಹ ಮಾಲೆ ಹಾಕೇ ಹಾಕುತ್ತಾರೆ. ಆಗ ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.21): ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾನೂ ದತ್ತ ಮಾಲೆ ಧರಿಸಿ ಬರುತ್ತೇನೆ ಎಂದು ಹೇಳಿರುವುದು ಸ್ವಾಗತಾರ್ಹ. ಅವರ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರಿಗೂ ಮಾದರಿ ಆಗಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ದತ್ತಮಾಲೆ ಧರಿಸುವುದಾಗಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಇಂದು(ಮಂಗಳವಾರ) ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸಮಾಜ ನಿರೀಕ್ಷೆ ಮಾಡುವುದೇ ಇದನ್ನ. ನಾವು ಹಿಂದೂ ಎಂದು ಹೇಳಿಕೊಳ್ಳಲು ಗರ್ವ ಪಡಬೇಕು. ಕುಮಾರಸ್ವಾಮಿ ಮಾತ್ರವಲ್ಲ ಈಗಿನ ಮುಖ್ಯಮಂತ್ರಿಗಳೂ ಇದನ್ನೇ ಮಾಡಲಿ ಎಂದರು.
ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರಲಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ: ಭಜರಂಗಿಗೆ ಸಾಥ್ ಕೊಡ್ತಾಳೆ ತೆನೆಹೊತ್ತ ಮಹಿಳೆ
ಸಿದ್ದರಾಮಯ್ಯ ದತ್ತಮಾಲೆ ಹಾಕಿಕೊಂಡು ಬಂದರೆ ಸತ್ಯದ ಹೋರಾಟಕ್ಕೆ ಬಲ:
ನಾನು ಹಿಂದೂ ಅಲ್ಲವೇ? ನನ್ನ ಹೆಸರಲ್ಲೇ ಸಿದ್ದರಾಮ ಇದ್ದಾನೆ ಎಂದು ಹಿಂದೆ ಸಿದ್ದರಾಮಯ್ಯ ಅವರು ಹೇಳಿದ್ದನ್ನೂ ನಾನು ಗಮನಿಸಿದ್ದೇನೆ. ಅವರೂ ಮಾಲೆ ಹಾಕಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಬಲ ಬಂದಂತಾಗುತ್ತದೆ. ಅವರು ಮಾಲೆ ಹಾಕಿದರೆ ಜಮೀರ್ ಅಹಮದ್ ಸಹ ಮಾಲೆ ಹಾಕೇ ಹಾಕುತ್ತಾರೆ. ಆಗ ಸತ್ಯವನ್ನು ಎತ್ತಿ ಹಿಡಿದಂತಾಗುತ್ತದೆ ಎಂದರು.
ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ; ಎಚ್‌ಡಿಕೆ ಹೇಳಿಕೆಗೆ ಬಜರಂಗದಳ ವಿಶ್ವಹಿಂದು ಪರಿಷತ್ ಸ್ವಾಗತ!
ನಾವು ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳಲು ಯಾರಿಗೂ ಹೆದರಬೇಕಿಲ್ಲ. ಯಾರೂ ಸಹ ಚುನಾವಣೆ ಸಂದರ್ಭದ ಹಿಂದೂಗಳಾಗಬಾರದು. ಹಿಂದುತ್ವದ ವಿಚಾರ ಬಂದಾಗ ಹಿಂದೆ ತಿರುಗಿ ನೋಡಲೇ ಬಾರದು. ಆ ರೀತಿ ಭಾವನೆ ವ್ಯಕ್ತಪಡಿಸಬೇಕು. ನಾವು ಬರೇ ಬಿಜೆಪಿ, ಜನತಾದಳ ಅಷ್ಟೇ ಅಲ್ಲ ಕಾಂಗ್ರೆಸ್ನವರಿಗೂ ಆಹ್ವಾನ ಕೊಡುತ್ತೇವೆ. ಅವರೂ ಬರಲಿ, ಸೂರ್ಯ ಚಂದ್ರ ಇರುವುದೆಷ್ಟು ಸತ್ಯವೋ ಅಷ್ಟೇ ದಾಖಲೆಗಳ ಪ್ರಕಾರ ದತ್ತಾತ್ರೇಯ ಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ ಎಂದರು.ನಾವು ಬಹಳ ವರ್ಷಗಳಿಂದ ಇದನ್ನು ಹೇಳುತ್ತಿದ್ದೇವೆ. ನಮಗೂ ಬಾಬಾಬುಡನ್ಗೂ ಸಂಬಂಧವೇ ಇಲ್ಲ. ಇಲ್ಲಿರುವ ಆಸ್ತಿಯನ್ನು ಕಬಳಿಸಲು ಇಲ್ಲಿಗೆ ಬಂದು ಆಕ್ರಮಿಸಿಕೊಂಡು ಕುಳಿತಿದ್ದಾರೆ ಎಂದು ಹೇಳಿದರು.ಮಾಲೆ ಹಾಕಿದ ಕೂಡಲೇ ಜಾತ್ಯತೀತತೆಗೆ ಧಕ್ಕೆ ಬರುವುದಿಲ್ಲ. ಹಿಂದೂ ಆಗಿ ಹುಟ್ಟಿದವನು ಮಾಲೆ ಹಾಕುವುದು, ವೀಭೂತಿ ಬಳಿಯುವುದು ಎಲ್ಲವೂ ಪರಂಪರೆಯ ಭಾಗ. ನಮ್ಮದಲ್ಲದ ಆಚರಣೆಗಳನ್ನೇ ಓಟಿನಾಸೆಗಾಗಿ ಮಾಡುವ ಜನರಿದ್ದಾರೆ. ಹಾಗಿರುವಾಗ ನಮ್ಮ ಆಚರಣೆ ಮಾಡುವುದರಿಂದ ತಪ್ಪೇನು ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕೆಲಸಗಳು ಸ್ಥಗಿತ :
ಜಿಲ್ಲೆಯಲ್ಲಿ ಬಹುತೇಕ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಹೊಸ ಯೋಜನೆಗೆ ಯಾವುದೇ ಅನುದಾನವನ್ನೂ ಕೊಟ್ಟಿಲ್ಲ. ಹಳೇ ಯೋಜನೆಗಳ ಬಿಲ್ಗಳನ್ನೂ ಕೊಡುತ್ತಿಲ್ಲ ಎಂದು ದೂರಿದರು.ಇಂದು ನಾನು ಗೆದ್ದಿಲ್ಲದೆ ಇರಬಹುದು ಆದರೆ, ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕಡೂರು-ಚಿಕ್ಕಮಗಳೂರು ರಸ್ತೆ ಎಂದರೆ ಸಿ.ಟಿ.ರವಿ ಮಾಡಿಸಿದ್ದು ಎಂದೇ ಹೇಳಬೇಕಾಗುತ್ತದೆ ಎಂದರು.ಈಗ ರೈಲ್ವೇ ಯೋಜನೆ ಕೆಲಸ ಪ್ರಾರಂಭವಾಗಿದೆ. ಚಿಕ್ಕಮಗಳೂರು-ಬೇಲೂರು-ಹಾಸನ ಟೆಂಡರ್ ಕರೆಯಲಾಗುತ್ತಿದೆ. ನೀರಾವರಿ ಯೋಜನೆ ಎಂದ ತಕ್ಷಣ ನನ್ನ ಹೆಸರನ್ನೇ ಹೇಳಬೇಕಾಗುತ್ತದೆ. ಅಭಿವೃದ್ಧಿಗೆ, ಸಿದ್ಧಾಂತಕ್ಕೆ ಆಧ್ಯತೆ ಕೊಟ್ಟು ಕೆಲಸ ಮಾಡಿದ್ದೇವೆ. ಕೆಲವರಿಗೆ ಇದಾವುದೂ ಇಲ್ಲ. ಹಿಂದೆ ಇಲ್ಲಿಗೆ ಬರುವುದು ನೆಮ್ಮದಿ ಎಂದು ಅಧಿಕಾರಿಗಳಿಗೆ ಅನ್ನಿಸುತ್ತಿತ್ತು. ಈಗ ಯಾಕಪ್ಪಾ ಬಂದಿವಿ ಎನ್ನುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.ನಾವೆಲ್ಲ ಒಂದು ಧ್ಯೇಯದ ಉದ್ದೇಶಕ್ಕಾಗಿ ರಾಜಕಾರಣಕ್ಕಾಗಿ ಬಂದಿದ್ದೇವೆ. ಹಿಂದುತ್ವಕ್ಕಾಗಿ ಬಂದೆವು. ಗೆದ್ದ ನಂತರ ಅಭಿವೃದ್ಧಿಯನ್ನು ಆಧ್ಯತೆಯನ್ನಾಗಿಟ್ಟುಕೊಂಡು ಕೆಲಸ ಮಾಡಿದೆವು. 20 ವರ್ಷದ ಹಿಂದಿನ ಚಿಕ್ಕಮಗಳೂರನ್ನೂ ಇಂದಿನ ಚಿಕ್ಕಮಗಳೂರನ್ನು ನೋಡಿದವರಿಗೆ ಇದು ಅನುಭವಕ್ಕೆ ಬರುತ್ತದೆ. ಇನ್ನೂ ಕೆಲವರು ದುಡ್ಡಿಗಾಗಿಯೇ ರಾಜಕಾರಣ ಎನ್ನುವ ಮನಸ್ಥಿತಿಯಲ್ಲಿ ಗೆದ್ದಿರೋದೇ ಹಣ ಮಾಡಲಿಕ್ಕೆ ಎನ್ನುವಂತೆ ವರ್ತಿಸುತ್ತಿರುವುದು ಗಂಭೀರವಾಗಿ ಆಲೋಚಿಸಬೇಕಾದ ವಿಷಯ. ಜನರೂ ಇದನ್ನು ಯೋಚನೆ ಮಾಡಲಿ. ಜೀವನಕ್ಕೊಂದು ಸಾರ್ಥಕತೆ ಇರಬೇಕಾಗುತ್ತದೆ ಎಂದರು.