ಬೆಂಗಳೂರು ವಿದ್ಯುತ್‌ ತಂತಿ ತುಳಿದು ಸಾವು ಪ್ರಕರಣ: ಇಲಿ ಮೇಲೆ ಆರೋಪ ಹೊರಿಸಿದ ಬೆಸ್ಕಾಂ

By Sathish Kumar KH  |  First Published Nov 21, 2023, 3:41 PM IST

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ತಾಯಿ- ಮಗಳು ಸಾವನ್ನಪ್ಪಿದ್ದಕ್ಕೆ ಇಲಿಯೇ ಕಾರಣ. ಇಲಿ ವೈರ್‌ ಕಚ್ಚಿದ್ದರಿಂದ ತಂತಿ ಕೆಳಗೆ ಬಿದ್ದಿದ್ದು, ಅದನ್ನ ತುಳಿದು ಸಾವನ್ನಪ್ಪಿದ್ದಾರೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್‌ ಬೀಳಗಿ ಹೇಳಿದ್ದಾರೆ. 


ಬೆಂಗಳೂರು (ನ.21): ರಾಜ್ಯ ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ತಾಯಿ-ಮಗು ವಿದ್ಯುತ್‌ ತಂತಿ ತುಳಿದು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 5 ಬೆಸ್ಕಾಂ ಅಧಿಕಾರಿಗಳನ್ನು ಆರೋಪಿಗಳೆಂದು ಬಂಧಿಸಿದ್ದರೂ, ಮೃತರ ಅಂತ್ಯಕ್ರಿಯೆಗೂ ಮುನ್ನವೇ ಜೈಲಿಂದ ಬಿಡುಗಡೆ ಆಗಿದ್ದರು. ಆದರೆ, ಈಗ ತಾಯಿ-ಮಗುವಿನ ಸಾವಿಗೆ ಇಲಿಗಳೇ ಕಾರಣವೆಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್‌ ಬೀಳಗಿ ಅವರು ಹೇಳಿದ್ದಾರೆ. 

ವಿದ್ಯುತ್‌ ತಂತಿ ತುಳಿದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್‌ ಬೀಳಗಿ ಮಾತನಾಡಿ, ವೈಟ್‌ಫೀಲ್ಡ್‌ನ ಓಫಾರ್ಮ್‌ ರಸ್ತೆಯ ಬಳಿಯ ಟ್ರನ್ಸ್ ಫಾರ್ಮರ್ ಒಳಗೆ ಹೆಗ್ಗಣ ನುಗ್ಗಿತ್ತು. ಈ ಹೆಗ್ಗಣವೇ ವೈರ್‌ ಕಡಿದು ತಂತಿ ತುಂಡಾಗಿ ಬೀಳುವಂತೆ ಮಾಡಿದೆ. ಇನ್ನು ತಂತಿಯು ಬೆಳಗ್ಗೆ 3 ಗಂಟೆಯಿಂದ 4.50ರವರೆಗೆ ವಿದ್ಯುತ್‌ ಸಂಪರ್ಕ ಕಡಿತವಾಗಿತ್ತು. ಆದರೆ, ಪುನಃ 5 ಗಂಟೆ ಸುಮಾರಿಗೆ ವಿದ್ಯುತ್‌ ಪ್ರಸರಣಕ್ಕೆ ರಿಚಾರ್ಜ್‌ ಮಾಡಲಾಗಿದೆ. ಇದೇ ವೇಳೆ ಬಸ್‌ ಇಳಿದು ಇದೇ ದಾರಿಯಲ್ಲಿ ನಡೆದುಕೊಂಡು ಬಂದ ತಾಯಿ ವಿದ್ಯುತ್‌ ಪ್ರಸರಣವಿದ್ದ ತಂತಿಯನ್ನು ತುಳಿದಿದ್ದಾಳೆ. ತಾಯಿ- ಜೊತೆಗೆ ಅವರು ಎತ್ತಿಕೊಂಡಿದ್ದ 9 ತಿಂಗಳ ಮಗು ಕೂಡ ಕರೆಂಟ್‌ ಶಾಕ್‌ನಿಂದ ಮೃತಪಟ್ಟಿದೆ ಎಂದು ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು.

Tap to resize

Latest Videos

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಕರೆಂಟ್‌ ತಗುಲಿ ಮೃತಪಟ್ಟ ತಾಯಿ-ಮಗುವಿನ ಅಂತ್ಯಕ್ರಿಯೆಗೂ ಮೊದಲೇ ಆರೋಪಿಗಳ ಬಿಡುಗಡೆ!

ಭಾನುವಾರ ಬೆಳ್ಳಂಬೆಳಗ್ಗೆ ಇಡೀ ಬೆಂಗಳೂರು ಮಮ್ಮಲ ಮರುಗುವಂತಹ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿತ್ತು. ತಾವಾಯ್ತು, ತಮ್ಮ ಜೀವನವಾಯ್ತು ಎಂದು ತಮ್ಮ ಪಾಡಿಗಿದ್ದ ಕುಟುಂಬ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಬಲಿಯಾಗಿ ಹೋಗಿತ್ತು. ತಮಿಳುನಾಡಿನಲ್ಲಿರುವ ತನ್ನ ತಾಯಿ ಮನೆಗೆ ಗಂಡ-ಮಗುವಿನೊಂದಿಗೆ ಹೋಗಿದ್ದಳು. ಶನಿವಾರ ಬಸ್‌ ಹತ್ತಿಕೊಂಡು ಬೆಂಗಳೂರಿನ ವೈಟ್‌ಫೀಲ್ಡ್ಗೆ ಬಂದು ಭಾನುವಾರ ಬೆಳ್ಳಂಬೆಳಗ್ಗೆ ಇಳಿದಿದ್ದಾಳೆ. ಗಂಡ, ಹೆಂಡತಿ ಹಾಗೂ ಆಕೆಯ ಕಂಕಳಲ್ಲಿ 9 ತಿಂಗಳ ಮಗುವೊಂದಿತ್ತು. ಮುಂಜಾವಿನಲ್ಲಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಾಯಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದರು. ಕೂಡಲೇ ಕರೆಂಟ್‌ ಶಾಕ್‌ನಿಂದ ಕುಸಿದು ಪುನಃ ತಂತಿ ಮೇಲೆ ಬಿದ್ದ ತಾಯಿ ಹಾಗೂ ಮಗುವಿನ ಜೀವವನ್ನು ವಿದ್ಯುತ್‌ ತೆಗೆದಿದ್ದಲ್ಲದೇ ಅವರನ್ನು ಸುಟ್ಟು ಕರಕಲಾಗುವಂತೆ ಮಾಡಿತ್ತು. 

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಣಂತಿ ತಾಯಿ, 9 ತಿಂಗಳ ಹಸುಗೂಸು ಬಲಿ: ಹೆಂಡ್ತಿ-ಮಗು ಜೀವ ಹೋಗ್ತಿದ್ರೂ ರಕ್ಷಿಸಲಾಗಲಿಲ್ಲ

ತಾಯಿ- ಮಗು ಸಾವಿಗೆ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಡುಗೋಡಿ ಪೊಲೀಸರು, ಕರೆಂಟ್ ವೈರ್ ತಗುಲಿ ತಾಯಿ ಮಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ (BESCOM) ಅಧಿಕಾರಿಗಳನ್ನು ಬಂಧಿಸಿದ್ದರು. ಆದರೆ, ಮೃತಪಟ್ಟ ತಾಯಿ- ಮಗುವಿನ ಅಂತ್ಯಕ್ರಿಯೆ ಆಗುವುದಕ್ಕೂ ಮುನ್ನವೇ ಕರ್ತವ್ಯ ನಿರ್ಲಕ್ಷ್ಯಕ್ಕೆ ಜೀವವನ್ನೇ ಬಲಿ ಪಡೆದ ಬೆಸ್ಕಾಂ ಅಧಿಕಾರಿಗಳು ಜೈಲಿನಿಂದ ಹೊರಬಂದಿದ್ದರು. ಈಗ ತಾಯಿ-ಮಗು ಸಾವಿನಿಂದ ಕುಟುಂಬ ದುಃಖದಲ್ಲಿರುವಾಗ ತಪ್ಪು ಮಾಡಿದ ಬೆಸ್ಕಾಂ ಅಧಿಕಾರಿಗಳು ತಮ್ಮ ಕುಟುಂಬದೊಂದಿಗೆ ನೆಮ್ಮದಿಯಿಂದಿದ್ದಾರೆ.

click me!