ಜಾತಿ ನಿಂದನೆ ಮಾಡಿದ್ದಲ್ಲದೆ, ಮಾರಣಾಂತಿಕ ಹಲ್ಲೆ ನಡೆಸಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ಅರವಿಂದ ಚವ್ಹಾಣ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಕೆ.
ಕಲಬುರಗಿ(ನ.09): ತಮ್ಮ ಮೇಲೆ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿ. ಜಾತಿ ನಿಂದನೆ ಮಾಡಿದ್ದಲ್ಲದೆ ವಿವಸ್ತ್ರಗೊಳಿಸಲು ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಅರವಿಂದ ಚವ್ಹಾಣ್ ವಾಡಿ ಠಾಣೆಯಲ್ಲಿ 16 ಜನರ ವಿರುದ್ಧ ದೂರು ನೀಡಿದ್ದಾರೆ.
ತಾವು ಕಲಬುರಗಿ ವಿಮಾನ ನಿಲ್ದಾಣದಿಂದ ವಾಡಿ ಜಂಕ್ಷನ್‌ಗೆ ಹೋಗುತ್ತಿದ್ದಾಗ ದಾರಿಯಲ್ಲಿ ರಾವೂರ್ ಬಳಿಯ ತೇಗನೂರ್ ಕಲ್ಯಾಣ ಮಂಟಪದ ಮುಂದೆ ಗುಂಪಾಗಿ ಬಂದ ಖರ್ಗೆ ಬೆಂಬಲಿಗರು ತಮ್ಮ ಮೇಲೆ ಮುಗಿಬದ್ದಿದ್ದಾರೆ. 30ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದ ಅವರು ಜಾತಿ ನಿಂದನೆ ಮಾಡಿದ್ದಾರೆ. ಅವಾಚ್ಯ ಪದಗಳನ್ನು ಬಳಸಿ ಕಟ್ಟಿಗೆ, ಕಬ್ಬಿಣದ ರಾಡುಗಳೊಂದಿಗೆ, ಕಲ್ಲಿನಿಂದ ಹೊಡೆಯಲು ನನ್ನ ಮೇಲೆ ಮುಗಿಬಿದ್ದಿದ್ದರು. ಆಗ ಅಲ್ಲಿಂದಲೇ ಸಾಗುತ್ತಿದ್ದ ಪಿಸ್‌ಐ ಚೇತನ್ ಅವರು ದಾಂಧಲೆ ಖುದ್ದು ನೋಡಿ ತಾವೇ ಬಂದು ಗುಂಪನ್ನು ಚದುರಿಸಿದ್ದಾರೆಂದು ಲಿಖಿತವಾಗಿ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.
ಸೌರಪಾರ್ಕ್ ಟೆಂಡರಲ್ಲಿ ಅಕ್ರಮ ಆಗಿದ್ರೆ ತನಿಖೆ ಮಾಡಿ; ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಬೆಂಬಲಿಗರಾದ ಗುರು ಗುತ್ತೇದಾರ್, ರಾವೂರ್, ಸೂರ್ಯಕಾಂತ ರದ್ದೇವಾಡಗಿ, ಶರಣಬಸ್ಸು ಸಿರೂರಕರ್, ದತ್ತಾತ್ರೇಯ ಜಾಧವ್, ಪೃಥ್ವಿರಾಜ್ ಸೂರ್ಯವಂಶಿ, ಸುನೀಲ ಗುತ್ತೇದಾರ್, ವಿಜಯಕುಮಾರ್ ಸಿಂಘ, ಮಲ್ಲಯ್ಯಾ ಗುತ್ತೇದಾರ್, ಚಂದ್ರು ಧನ್ನೇಕರ್, ಜಹೂರ್ ಖಾನ್, ರಾಜಾ ಪಟೇಲ್, ಮೊಹ್ಮದ್ ಗೌಸ್, ಅಶ್ರಫ್ ಖಾನ್, ಫಿರೋಜ್ ಮೌಜಾನಾ, ಅಲ್ತಾಫ್ ಸೌದಾಗರ್, ಜಗದೀಶ ಜಾಧವ್ ಮತ್ತು ಇತರರು ಸೇರಿಕೊಂಡು ತಮ್ಮ ಕಾರಿಗೆ ಅಡ್ಡಗಟ್ಟಿಇಷ್ಟೆಲ್ಲ ದಾಂಧಲೆ ಮಾಡಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ಇವರಿಂದ ತಮ್ಮ ಜೀವಕ್ಕೆ ಬೆದರಿಕೆ ಇದ್ದು ತಕ್ಷಣ ಇವರೆಲ್ಲರನ್ನು ಬಂಧಿಸಬೇಕು. ಐಪಿಸಿ ಸಕ್ಷನ್ 504, 506ರಲ್ಲಿ ಇವರ ವಿರುದ್ಧ ಕಾನೂನು ಕ್ರಮ ಆರಂಭಿಸಿ ಇವರನ್ನು ಶಿಕ್ಷೆಗೆ ಒಳಪಡಿಸಬೇಕು. ಹೀಗೆ ಮಾಡದೆ ಹೋದಲ್ಲಿ ಚಿತ್ತಾಪುರ ಭಾಗದಲ್ಲಿ ಶಾಂತಿ- ಸುವ್ಯವಸ್ಥೆ ಇರೋದಿಲ್ಲವೆಂದು ಚವ್ಹಾಣ್ ಹೇಳಿದ್ದಾರೆ. ಮೇಲಿನ ಎಲ್ಲರಂದಲೂ ತಮ್ಮ ಜೀವಕ್ಕೆ ಬರುವ ದಿನಗಳಲ್ಲಿ ಅಪಾಯವಿದೆ ಎಂದಿರುವ ಅರವಿಂದ ಚವ್ಹಾಣ್ ತಮಗೆ ಸೂಕ್ತ ರಕ್ಷಣೆ ಕೋಡುವಂತೆ ವಾಡಿ ಠಾಣೆ ಪಿಎಸ್‌ಐ ಅವರಿಗೆ ಕೋರಿದ್ದಾರೆ.
ಈ ಘಟನೆಯಿಂದಾಗಿ ವಾಡಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರಿಯಾಂಕ್ ಹಾಗೂ ಅರವಿಂದ ಬೆಂಬಿಗರು ಗುಂಪಾಗಿ ಜಮಾವಣೆಯಾಗುತ್ತಿದ್ದಾರೆ. ಪೊಲೀಸ್ ಠಾಣೆಯ ಮುಂದೆ ಹಾಗೂ ಸುತ್ತೆಲ್ಲ ಜನ ಸೇರಿದದು ಇನ್ನೂ ಈ ಘಟನೆ ಅದ್ಯಾವ ತಿರುವು ಪಡೆಯುವುದೋ ಎಂಬಂತಹ ವಾತಾವರಣ ವಾಡಿಯಲ್ಲಿ ನಿರ್ಮಾಣವಾಗಿದೆ.