ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ, ಅಲ್ಪಸಂಖ್ಯಾತರೆಲ್ಲರೂ ಭಯೋತ್ಪಾದಕರಲ್ಲ, ಯಾರೋ ಕೆಲವರು ಮಾಡುವ ತಪ್ಪಿಗೆ ಸಂಘರ್ಷಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಅ.16): ಬಿಜೆಪಿ ಎಂದೂ ಮುಸ್ಲಿಂ ವಿರೋಧಿಯಲ್ಲ, ಅಲ್ಪಸಂಖ್ಯಾತರೆಲ್ಲರೂ ಭಯೋತ್ಪಾದಕರಲ್ಲ, ಯಾರೋ ಕೆಲವರು ಮಾಡುವ ತಪ್ಪಿಗೆ ಸಂಘರ್ಷಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಶಾಸಕ ರೇಣುಕಾಚಾರ್ಯ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಬಳಿಕ ಮಾತನಾಡಿದರು. ಬೇವಿನಹಳ್ಳಿ ಗ್ರಾಮವು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ. ಹಿಂದೂ, ಮುಸ್ಲಿಮರ ಮಧ್ಯೆ ವಿಶ್ವಾಸ ಕೊರತೆಯಾದಾಗ ನಾವು ನೀವು ದೂರವಾಗಿದ್ದೇವೆ, ಈ ಹಿಂದೆ ಕೊಟ್ಟಮಾತಿನಂತೆ ಗ್ರಾಮದಲ್ಲಿ ಸಿ.ಸಿ. ರಸ್ತೆ ಸೇರಿ ಯಾವುದೇ ಕೆಲಸಗಳಿದ್ದರೂ ಮಾಡಿಸಲು ನಾನು ಸಿದ್ದನಿದ್ದೇನೆ ಎಂದರು.
ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು
ಸಂಘರ್ಷ ಆಗದರಲಿ: ಕೆಲ ಕಿಡಿಗೇಡಿಗಳ ಸಂಘರ್ಷದಿಂದ ಶಿವಮೊಗ್ಗದ ಹರ್ಷ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಮುಸ್ಲಿಂ ಯುವಕನ ಹತ್ಯೆಯಾದ್ದರಿಂದ ಭಾರತ ಮಾತೆ ಕಣ್ಣೀರು ಹಾಕುತ್ತಿದ್ದಾಳೆ. ಭಾರತ ಮಾತೆಯ ಮಕ್ಕಳು ಭಾರತ ಮಾತೆಗೆ ಜೈ ಎನ್ನಬೇಕೆ ವಿನಾ ಪಾಕಿಸ್ತಾನ್ ಜಿಂದಾಬಾದ್ ಎನ್ನಬಾರದು ಇದರಿಂದ ಸಂಘರ್ಷ ಏರ್ಪಡುತ್ತದೆ ಎಂದರು. ತ್ರಿವಳಿ ತಲಾಖ್‌ನಿಂದಾಗಿ ಸಾಕಷ್ಟುಹೆಣ್ಣು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರು. ಅದನ್ನು ಬೇಡ ಎಂದರೆ ಅದನ್ನು ವಿರೋಧಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ ಶಾಸಕರು, ಧರ್ಮ ಧರ್ಮಗಳ ನಡುವೆ ಸಂಘರ್ಷ ಆಗಬಾರದು. ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ನಡುವೆ ಜಗಳ ಉಂಟು ಮಾಡಬಾರದು ಎಂದರು.
ವೈಮನಸ್ಸು ಬರಬಾರದು: ಕಂಡವರ ಮಕ್ಕಳನ್ನು ಹಾಳು ಬಾವಿಗೆ ತಳ್ಳಿ ನಕ್ಕರೆ ನಾಳೆ ಅವರ ಮಕ್ಕಳಿಗೂ ಇದೇ ಪರಿಸ್ಥಿತಿ ಬರುತ್ತದೆ. ನಾವು, ನೀವು ಸಹೋದರರಾಗಿ ಕುಟುಂಬದ ಸದಸ್ಯರಾಗಿದ್ದಾಗ ಮಾತ್ರ ಕೆಲಸ ಆಗುತ್ತದೆ ಎಂದರು. ಹಿಜಾಬ್ ಧರಿಸುವ ವಿಚಾರವಾಗಿ ಮಾತನಾಡಿದ್ದೇನೆ. ಏಕೆಂದರೆ ಶಾಲೆಯಲ್ಲಿ ಮಕ್ಕಳ ನಡುವೆ ವೈಮನಸ್ಸು ಬರಬಾರದೆಂದು ಎಲ್ಲರೂ ಒಂದಾಗಿರಬೇಕೆಂದು ನಾನು ಮಾತನಾಡಿದ್ದೇನೆ ಅದನ್ನು ಕೆಲವರು ವಿರೋಧಿಸಿದರೆ ಏನು ಮಾಡುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮದ ನೂರಾರು ಮುಸ್ಲೀಂ ಭಾಂದವರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು, ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರಿದ್ದರು.
ಕ್ಷೇತ್ರದ ಜನರು ಕಣ್ಣೀರು ಹಾಕುವುದು ಇಷ್ಟವಿಲ್ಲ: ಅವಳಿ ತಾಲೂಕಿನಲ್ಲಿ ಕಳೆದ 5-6 ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿದ್ದು ಸಾಕಷ್ಟುಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಮನೆಹಾನಿ ಪರಿಹಾರದ ವಿಚಾರವಾಗಿ ಇದು ನಾಲ್ಕನೇ ಪರಿಹಾರ ವಿತರಣಾ ಸಮಾರಂಭ. ಹೊನ್ನಾಳಿ ತಾಲೂಕಿನ 215, ನ್ಯಾಮತಿ ತಾಲೂಕಿನ 108 ಫಲಾನುಭವಿಗಳು ಸೇರಿ ಒಟ್ಟು 323ಜನರಿಗೆ ಸೋಮವಾರ ಪರಿಹಾರ ಆದೇಶ ಪತ್ರಗಳ ವಿತರಿಸಲಾಗುತ್ತಿದೆ. ಇದರಿಂದ ಒಟ್ಟು 1983 ಸಂತ್ರಸ್ತರಿಗೆ ಆದೇಶ ಪತ್ರಗಳನ್ನು ವಿತರಿಸಿದ್ದೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಗುರುಭವನದಲ್ಲಿ ಹಮ್ಮಿಕೊಂಡಿದ್ದ ಆದೇಶ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿ ಮನೆಹಾನಿ ಸಂಭವಿಸಿದಾಗ ನಾನೊಬ್ಬನೇ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ, ಆಯಾ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ತಹಸೀಲ್ದಾರರು, ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ. ಎರಡು ಬಾರಿ ಅರ್ಜಿ ಸಲ್ಲಿಸುವ ದಿನಾಂಕ ಮುಗಿದಿದ್ದರೂ ಸಿಎಂ ಗೆ ಪರಿಸ್ಥಿತಿಯ ಮನವರಿಕೆ ಮಾಡಿ ಮತ್ತೊಮ್ಮೆ ದಿನಾಂಕ ಮುಂದೂಡಿಸಿದ್ದೇನೆ. ಏಕೆಂದರೆ ನನ್ನ ಕ್ಷೇತ್ರದ ಜನರು ಮನೆ ಕಳೆದುಕೊಂಡು ಕಣ್ಣೀರು ಹಾಕುವುದು ನನಗೆ ಇಷ್ಟವಿಲ್ಲ ಎಂದರು.
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡಿಗರ ಹಿತ ಕಾಯಿರಿ
ದೇಶದಲ್ಲಿ ಕಾಂಗ್ರೆಸ್ ವೋಟು ಬ್ಯಾಂಕ್ ರಾಜಕಾರಣ ಹಾಗೂ ಬರೀ ಅಪಪ್ರಚಾರ ಮಾಡುತ್ತಾ ಬಂದಿದೆ. ವೋಟ್‌ಗಾಗಿ ನಮ್ಮ ನಿಮ್ಮ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಂದರೆ ಬೆಂಕಿ ಹಚ್ಚುವುದು. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದು ಬೇಡ, ನಿಮಗೆ ಏನು ಮೂಲಭೂತ ಸೌಲಭ್ಯಗಳು ಬೇಕೋ ಅದನ್ನು ಕಲ್ಪಿಸಿದಾಗ ದೇಶ, ಸಮಾಜ ಅಭಿವೃದ್ಧಿ ಅದಕ್ಕೆ ನಾನು ಬದ್ಧನಿದ್ದೇನೆ.
-ಎಂ.ಪಿ.ರೇಣುಕಾಚಾರ್ಯ, ಶಾಸಕ