ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿದ ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ| ತುಂಗಾಭದ್ರ ನದಿಯಲ್ಲಿ ಮೀನು ಹಿಡಿಯುವ ಟೆಂಡರ್ ಹೆಸರಿನಲ್ಲೂ ವ್ಯಾಪಕ ಭ್ರಷ್ಟಾಚಾರ| ಶಾಸಕರ ಈ ಹೀನ ಕೃತ್ಯವನ್ನು ಬಯಲಿಗೆಳೆದು ಕ್ಷೇತ್ರದಾದ್ಯಂತ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಲು ಮುಂದಾದ ಬಿಜೆಪಿ|
ಕೊಟ್ಟೂರು(ಸೆ.30): ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಂತರ ರುಪಾಯಿಗಳ ಅನುದಾನ ದುರುಪಯೋಗವಾಗಿದ್ದು, ಈ ಪೈಕಿ ಹಳೆಯ ಕಾಮಗಾರಿಗಳನ್ನು ನಮೂದಿಸಿ ಹಣ ಪಾವತಿಸಿಕೊಳ್ಳಲಾಗಿದ್ದರೆ, ವಾಲ್ಮೀಕಿ ಭವನ ನಿರ್ಮಿಸಿರುವುದಾಗಿ 39 ಲಕ್ಷಗಳನ್ನು ಸಹ ಲಪಟಾಯಿಸಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದ್ದಾರೆ.
undefined
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶಾಸಕ ಎಸ್. ಭೀಮಾನಾಯ್ಕ ಅವರು ನಾರಾಯಣ ದೇವರ ಕೆರೆಯಲ್ಲಿ ವಾಲ್ಮೀಕಿ ಭವನ ನಿರ್ಮಿಸುವ ಯೋಜನೆ ತಯಾರಿಸಿ 39 ಲಕ್ಷ ಅನುದಾನ ಒದಗಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ವಾಸ್ತವದಲ್ಲಿ ವಾಲ್ಮೀಕಿ ಜನಾಂಗದವರೇ ಸ್ವಂತ ಹಣ ವ್ಯಯಿಸಿ ವಾಲ್ಮೀಕಿ ಭವನ ನಿರ್ಮಿಸಿದ್ದಾರೆ. ಹೀಗಿದ್ದರೂ ತಮ್ಮ ಅನುದಾನದಲ್ಲಿ ಭೂಸೇನಾ ನಿಗಮದ ಮೂಲಕ ಹಣವನ್ನು ಮಂಜೂರು ಮಾಡಿಸಿಕೊಳ್ಳುವ ಮೂಲಕ ವ್ಯಾಪಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು.
ಭಾರಿ ಮಳೆಗೆ ಕುಸಿದ ಹಂಪಿಯ ಸಾಲು ಮಂಟಪ
ಈ ಕುರಿತು ಸಂಬಂಧಪಟ್ಟ ಸಚಿವರಿಗೆ ಮತ್ತು ತನಿಖಾ ಸಂಸ್ಥೆಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಇದರ ತನಿಖೆ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿಯೇ ಬಹುತೇಕ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ್ದರೂ ಇದೀಗ ದುರಸ್ತಿಯ ಹೆಸರಿನಲ್ಲಿ ಮೊರಾರ್ಜಿ ದೇಸಾಯಿ ಶಾಲೆಯ ಹೆಸರು ನಮೂದಿಸಿ 75 ಲಕ್ಷ ಮೊತ್ತ ದುರುಪಯೋಗ ಮಾಡಿದ್ದಾರೆ. ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಅನುದಾನ ತಂದು ದುರ್ಬಳಕೆ ಮಾಡಿಕೊಳ್ಳುವ ಭ್ರಷ್ಟತನವನ್ನು ಶಾಸಕ ಭೀಮಾನಾಯ್ಕ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಾಭದ್ರ ನದಿಯಲ್ಲಿ ಮೀನು ಹಿಡಿಯುವ ಟೆಂಡರ್ ಹೆಸರಿನಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯಲು ತನ್ನ ಕಾರ್ಯಕರ್ತರಿಗೆ ಅನುವು ಮಾಡಿಕೊಟ್ಟಿರುವ ಶಾಸಕರ ಈ ಹೀನ ಕೃತ್ಯವನ್ನು ಬಯಲಿಗೆಳೆದು ಕ್ಷೇತ್ರದಾದ್ಯಂತ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಲು ಬಿಜೆಪಿ ಮುಂದಾಗಲಿದೆ. ದಾಖಲೆ ಸಮೇತ ಜನತೆಗೆ ಶಾಸಕರು ನಡೆಸುತ್ತಿರುವ ಭ್ರಷ್ಟಾಚಾರ, ದಬ್ಬಾಳಿಕೆ ಮತ್ತಿತರ ವಿಚಾರ ತಿಳಿಸಲು ಮುಂದಾಗುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೊಟ್ಟೂರು ತಾಪಂ ಅಧ್ಯಕ್ಷ ಗುರುಮೂರ್ತಿ ಶಾನುಭೋಗರ, ಬಿಜೆಪಿ ಜಿಲ್ಲಾ ಧುರೀಣ ಕೋಗಳಿ ಸಿದ್ದಲಿಂಗನಗೌಡ, ಹಗರಿಬೊಮ್ಮನಹಳ್ಳಿ ಪಟ್ಟಣ ಬಿಜೆಪಿ ಅಧ್ಯಕ್ಷ ಜಗದೀಶ ಮತ್ತಿತರರು ಉಪಸ್ಥಿತರಿದ್ದರು.