ಬೆಳಗಾವಿ (ಸೆ.06): ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಏರಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಭಾರೀ ಕುತೂಹಲ ಸೃಷ್ಟಿಸಿದ್ದ ಫಲಿತಾಂಶದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ.
1984ರಿಂದಲೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಎಂಇಎಸ್ ಪರಾಭವಗೊಳಿಸಿ ಮೊದಲ ಬಾರಿ ಬಿಜೆಪಿ ಅಧಿಕಾರ ಹಿಡಿದಿದೆ. ಒಟ್ಟು 58 ವಾರ್ಡ್‌ಗಳಲ್ಲಿ 35 ಕ್ಷೇತ್ರದಲ್ಲಿ ಬಿಜೆಪಿ ಜಯ ಸಾಧಿಸಿದ್ದು, 30 ಮ್ಯಾಜಿಕ್ ನಂಬರ್ ಆಗಿದೆ.
ಕಾಂಗ್ರೆಸ್ 10, ಪಕ್ಷೇತರ 10, ಎಂಇಎಸ್ 02, ಎಐಎಂಐಎಂ ಪಕ್ಷ 01 ಗೆಲುವು ಸಾಧಿಸಿವೆ.
ಇದೇ ಮೊದಲ ಬಾರಿ ಎಂಇಎಸ್‌ಗೆ ತೀವ್ರ ಮುಖಭಂಗವಾಗಿದ್ದು, ಗಡಿ ವಿವಾದ, ಭಾಷಾ ವಿವಾದ, ಗುಂಪುಗಾರಿಕೆ ಕೇಂದ್ರ ಬಿಂದುವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗೆದ್ದತ್ತಿನ ಬಾಲ ಹಿಡಿದು ಅಧಿಕಾರ ಪಡೆಯುತ್ತಿದ್ದ ನಾಡದ್ರೋಹಿ ಎಂಇಎಸ್ಗೆ ಬಿಜೆಪಿ ಗರ್ವಭಂಗ ಮಾಡಿದೆ. ಭಾಷಾ ವಿವಾದ, ಗಡಿ ವಿವಾದ ಮಾಡುವ ಎಂಇಎಸ್ ವಿರುದ್ಧ ರಾಜಕೀಯ ಪಕ್ಷಗಳಿಗೆ ಮತ ಚಲಾಯಿಸಿದ ಪ್ರಜ್ಞಾವಂತ ಮರಾಠಿಗರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.
ಕುತೂಹಲದ ಫಲಿತಾಂಶ : ಯಾರಪಾಲಿಗೆ ಬೆಳಗಾವಿ ಗದ್ದುಗೆ?
ಭಾಷೆ, ಗಡಿ ವಿಚಾರದಲ್ಲೇ ಚುನಾವಣೆ ಎದುರಿಸುತ್ತ ಬಂದಿದ್ದ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಈ ಬಾರಿ ಯಾರ ಪಾಲಾಗಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸತ್ತು. ಬೆಳಗಾವಿ ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸಿದ್ದವು. ರಾಜಕೀಯ ಪಕ್ಷಗಳ ಸ್ಪರ್ಧೆಯಿಂದ ಎಂಇಎಸ್ ಕಂಗಾಲಾಗಿತ್ತು. ಮರಾಠಿ ಬಾಹುಳ್ಯವುಳ್ಳ ವಾರ್ಡ್‌ಗಳಲ್ಲಿ ಮತದಾರರು ಯಾವ ಪಕ್ಷ ಬೆಂಬಲಿಸುತ್ತಾರೆ? ಇಲ್ಲವೇ ಪಕ್ಷೇತರ ಅಭ್ಯರ್ಥಿಗಳಿಗೆ ಜೈ ಎನ್ನುತ್ತಾರೆಯೆ ಎನ್ನುವ ಹಲವು ಪ್ರಶ್ನೆಗಳು ಸಹಜವಾಗಿ ಮೂಡಿದ್ದವು.
ಬೆಳಗಾವಿ ಪಾಲಿಕೆಯ ಈ ಹಿಂದಿನ ಎಲ್ಲ ಚುನಾವಣೆಗಳು ಕನ್ನಡ- ಮರಾಠಿ ಭಾಷೆ, ಗುಂಪುಗಾರಿಕೆ ಹೆಸರಿನಲ್ಲಿ ಎದುರಿಸಿತ್ತು. ಭಾಷೆ, ಗುಂಪುಗಾರಿಕೆ ರಾಜಕಿಯವೇ ಇಲ್ಲಿ ಪ್ರಬಲ ಹಿಡಿತ ಸಾಧಿಸಿತ್ತು. ಕನ್ನಡ ಮತ್ತು ಮರಾಠಿ ಭಾಷಿಕರೇ ಕೂಡಿಕೊಂಡು ಗುಂಪುಗಾರಿಕೆ ಹೆಸರಿನಲ್ಲಿ ರಾಜಕೀಯ ಮಾಡುತ್ತ ಬಂದಿದ್ದರು. ಆದರೆ, ಈ ಬಾರಿ ಭಾಷೆ, ಗುಂಪುಗಾರಿಕೆ ರಾಜಕೀಯಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ತೊಡೆತಟ್ಟಿನಿಂತಿದ್ದು ಯಶಸ್ವಿಯಾಗಿವೆ. ಈ ಹೊಸ ರಾಜಕೀಯ ಬೆಳವಣಿಗೆಯಿಂದ ಭಾಷೆ, ಗುಂಪುಗಾರಿಕೆ ರಾಜಕೀಯ ನೇಪಥ್ಯಕ್ಕೆ ಸರಿಯುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.