'ಕಾಂಗ್ರೆಸ್‌ ಮುಖಂಡರಿಂದ 2.30 ಲಕ್ಷ ಕೋಟಿ ವಕ್ಫ್ ಆಸ್ತಿ ಗುಳುಂ'

By Kannadaprabha NewsFirst Published Dec 2, 2020, 9:09 AM IST
Highlights

ಕಾಂಗ್ರೆಸ್ಸಿಗರ ವಿರುದ್ಧ ಅನ್ವರ್‌ ಮಾಣಿಪ್ಪಾಡಿ ಆರೋಪ| ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ| ವಕ್ಫ್ ಮಂಡಳಿಗೆ ಸೇರಿದ ಈ ಜಾಗ ಇನ್ನೂರು ವರ್ಷಗಳ ಹಿಂದೆಯೇ ಅತಿಕ್ರಮಣ| 1998ರ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಅದರನ್ನು ತೆರವುಗೊಳಿಸಬೇಕು| 

ಬೆಂಗಳೂರು(ಡಿ. 02): ಕಾಂಗ್ರೆಸ್‌ ನಾಯಕರು ವಕ್ಫ್ ಬೋರ್ಡ್‌ಗೆ ಸೇರಿದ 2.30 ಲಕ್ಷ ಕೋಟಿ ರು. ಮೌಲ್ಯದ ಜಾಗವನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಕನ್ನಿಂಗ್‌ಹ್ಯಾಮ್‌ ರಸ್ತೆಯ ವಕ್ಫ್ ಬೋರ್ಡ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅನ್ವರ್‌ ಮಾಣಿಪ್ಪಾಡಿ, ಕಾಂಗ್ರೆಸ್‌ ಮುಖಂಡರಾದ ರೆಹಮಾನ್‌ ಖಾನ್‌, ದಿವಂಗತ ಜಾಫರ್‌ ಷರೀಫ್‌, ಸಿ.ಎಂ.ಇಬ್ರಾಹಿಂ ಅವರು ವಕ್ಫ್ ಬೋರ್ಡ್‌ಗೆ ಸೇರಿದ ಕೋಟ್ಯಂತರ ರು. ಮೌಲ್ಯದ ಜಾಗವನ್ನು ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಆಸ್ತಿಗಳಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳಿದ್ದು, ಇದರ ತೆರವಿಗಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಬಿಜೆಪಿ ಶಾಸಕನಿಂದ ಮಹಿಳಾ ದೌರ್ಜನ್ಯ ಕೇಸ್ : 5 ಕೋಟಿ ಪರಿಹಾರ ಕೋರಿಕೆ

ವಕ್ಫ್ ಮಂಡಳಿಗೆ ಸೇರಿದ ಈ ಜಾಗ ಇನ್ನೂರು ವರ್ಷಗಳ ಹಿಂದೆಯೇ ಅತಿಕ್ರಮಣವಾಗಿದೆ. 1998ರ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಅದರನ್ನು ತೆರವುಗೊಳಿಸಬೇಕು. ಈ ಆಸ್ತಿಯ ಅತಿಕ್ರಮಣ ಸಂಬಂಧ 2012ರ ಮಾ.26ರಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಆದರೆ, ಸರ್ಕಾರ ಆ ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ. ಬಿಜೆಪಿ ಸರ್ಕಾರ ಸಂಪುಟದಲ್ಲಿ ವರದಿ ಮಂಡಿಸಿ ಆರು ವಿಧೇಯಕ ಜಾರಿಗೊಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ವರದಿ ಜಾರಿ ಮಾಡಲು ಸಾಧ್ಯವಾಗಿಲ್ಲ ಎಂದರು.

ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮುಜಾಮಿಲ್‌ ಅಹ್ಮದ್‌ ಬಾನು, ಪ್ರಧಾನ ಕಾರ್ಯದರ್ಶಿಗಳಾದ ಡಾ.ಅನಿಲ್‌ ಥಾಮಸ್‌, ಸಯ್ಯದ್‌ ಸಲಾಂ, ಉಪಾಧ್ಯಕ್ಷ ಶಾಂತಕುಮಾರ್‌ ಕೆನಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

click me!