ಕರ್ನಾಟಕಕ್ಕೆ ಕಾಲಿಟ್ಟ ಹಕ್ಕಿಜ್ವರ : ಪರೀಕ್ಷೆಯಲ್ಲಿ ದೃಢ

By Kannadaprabha NewsFirst Published Mar 17, 2020, 8:56 AM IST
Highlights

ಕೊರೋನಾ ಅಟ್ಟಹಾಸದ ನಡುವೆಯೇ ರಾಜ್ಯಕ್ಕೆ ಇದೀಗ ಮತ್ತೊಂದು ರೋಗ ಕಾಲಿಟ್ಟಿದೆ. ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿದೆ. 

ಮೈಸೂರು [ಮಾ.17]:  ಕೊರೋನಾ ವೈರಾಣು ಭೀತಿಯ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸರಣಿ ಕೊಕ್ಕರೆ, ಕೋಳಿಗಳ ಸಾವಿನಿಂದ ಎದುರಾಗಿದ್ದ ಹಕ್ಕಿ ಜ್ವರ ಭೀತಿ ನಿಜವಾಗಿದೆ. ಹಕ್ಕಿ ಜ್ವರದಿಂದಲೇ 1 ಕೋಳಿ ಮತ್ತು 1 ಕೊಕ್ಕರೆ ಮೃತಪಟ್ಟಿರುವುದು ದೃಢಪಟ್ಟಿದೆ.

"

ಮೈಸೂರು ನಗರದ ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಮೃತಪಟ್ಟಸಾಕು ಕೋಳಿ ಮತ್ತು ಕೊಕ್ಕರೆಯಲ್ಲಿ ಹಕ್ಕಿ ಜ್ವರ ಇದ್ದದ್ದು ದೃಢಪಟ್ಟಿದೆ. ಮನೆಯಲ್ಲಿ ಸಾಕಿದ್ದ ಕೋಳಿ ಹಾಗೂ ಸ್ಮಶಾನದಲ್ಲಿ ಮೃತಪಟ್ಟಕೊಕ್ಕರೆಯಲ್ಲಿ ಹಕ್ಕಿ ಜ್ವರ ಇರುವುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನಲ್ಲಿ ವಾರದ ಹಿಂದೆ ಕೋಳಿ ಮತ್ತು ಪಕ್ಷಿಗಳು ಮೃತಪಟ್ಟಹಿನ್ನೆಲೆಯಲ್ಲಿ 7 ಮಾದರಿಗಳನ್ನು ಭೂಪಾಲ್‌ನಲ್ಲಿರುವ ಎವಿನಿಯನ್‌ ಇನ್‌ಫ್ಲುಂಜಾ ಟೆಸ್ಟಿಂಗ್‌ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಇದರಲ್ಲಿ 2 ಪಾಸಿಟಿವ್‌ ಬಂದಿದೆ. ಉಳಿದವು ನೆಗೆಟಿವ್‌ ಆಗಿದೆ. ಹಕ್ಕಿ ಜ್ವರ ಇರುವ ಬಗ್ಗೆ ಲ್ಯಾಬ್‌ನಿಂದ ವರದಿ ಬಂದ ಕೂಡಲೇ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ರಾರ‍ಯಪಿಡ್‌ ರೆಸ್ಪಾನ್ಸ್‌ ಟೀಂ ರಚಿಸಲಾಗಿದ್ದು, ಈಗಾಗಲೇ ಅವರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದರು.

ಹಕ್ಕಿಜ್ವರ ಕಂಡು ಬಂದಿರುವ ಕುಂಬಾರಕೊಪ್ಪಲು ಸುತ್ತಮುತ್ತ 1 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಎಂದು ಘೋಷಿಸಲಾಗಿದೆ. ಈ ವಲಯದಲ್ಲಿರುವ ಕೋಳಿ, ಬಾತುಕೋಳಿ ಸೇರಿದಂತೆ ಎಲ್ಲ ರೀತಿಯ ಸಾಕು ಪಕ್ಷಿಗಳನ್ನು ಕೊಲ್ಲುವ ಕಾರ್ಯಾಚರಣೆ (ಕಲ್ಲಿಂಗ್‌ ಆಪರೇಷನ್‌) ಕೈಗೊಳ್ಳಲಾಗುವುದು. ಸಿಬ್ಬಂದಿಗೆ ಅಗತ್ಯ ಮಾಸ್ಕ್‌, ಶೂ ಹಾಗೂ ಇನ್ನಿತರ ಪರಿಕರಗಳನ್ನು ನೀಡಲಾಗುವುದು. ನಮ್ಮಲ್ಲಿ ಸಾಕಷ್ಟುಔಷಧವಿದ್ದು, ಇನ್ನೂ ಹೆಚ್ಚಿನ ಔಷಧವನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ಪಾಲಿಕೆ ಸಿಬ್ಬಂದಿಯನ್ನೂ ಈ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಕೊರೋನಾ ವೈರಸ್; ಹಲಸಿನ ಹಣ್ಣಿಗೆ ಬೇಡಿಕೆ, ಕೋಳಿ ಬೆಲೆ ಪಾತಾಳಕ್ಕೆ!...

ಸೋಂಕಿತ ವಲಯದಿಂದ ಯಾವುದೇ ಪಕ್ಷಿ ಹೊರಗೆ ಅಥವಾ ಒಳಗೆ ತೆಗೆದುಕೊಂಡು ಹೋಗದಂತೆ ನೋಡಿಕೊಳ್ಳಲು ಚೆಕ್‌ ಪೋಸ್ಟ್‌ ಸಹ ನಿರ್ಮಿಸಲಾಗುತ್ತಿದೆ. ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಯಾವುದೇ ಪೌಲ್ಟ್ರಿ ಫಾರಂಗಳು ಇಲ್ಲ. ಇದ್ದಿದ್ದರೆ ಸಾವಿರಾರು ಕೋಳಿಗಳನ್ನು ಒಮ್ಮೆಲೆ ಕೊಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ, ಮನೆಯಲ್ಲಿ ಸಾಕಿರುವ ಕೋಳಿ ಹಾಗೂ ಇನ್ನಿತರ ಪಕ್ಷಿಗಳ ಸಂಖ್ಯೆ ಕಡಿಮೆ ಇದೆ ಎಂದರು.

ಇನ್ನೂ ಕುಂಬಾರಕೊಪ್ಪಲಿನಿಂದ 10 ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಕಣ್ಗಾವಲು ವಲಯ (ಸರ್ವಿಲೆನ್ಸ್‌ ಜೋನ್‌) ಎಂದು ಘೋಷಿಸಲಾಗಿದೆ. ಕಲ್ಲಿಂಗ್‌ ಆಪರೇಷನ್‌ ನಡೆಯುವ ಸಂದರ್ಭದಲ್ಲಿ ಈ ವಲಯದಲ್ಲಿ ಮೊಟ್ಟೆಮತ್ತು ಕೋಳಿ ಮಾಂಸ ಮಾರಾಟ ನಿಷೇಧಿಸಲಾಗಿದೆ. 10 ಕಿ.ಮೀ. ವ್ಯಾಪ್ತಿಯ ಎಲ್ಲ ಕೋಳಿ ಅಂಗಡಿಗಳನ್ನೂ ಮುಚ್ಚಲಾಗುವುದು ಎಂದು ಅವರು ತಿಳಿಸಿದರು.

ಕಲ್ಲಿಂಗ್‌ ಆಪರೇಷನ್‌ ಮಾಡಿದ ಮೇಲೆ ಆ ಪ್ರದೇಶವನ್ನು ನೈರ್ಮಲ್ಯೀಕರಣ ಮಾಡಲಾಗುವುದು. ಈ ಎಲ್ಲ ಕಾರ್ಯಾಚರಣೆಗೆ 4- 5 ದಿನ ಆಗುತ್ತದೆ. ಒಮ್ಮೆ ಕಲ್ಲಿಂಗ್‌ ಆಪರೇಷನ್‌ ಆದ ಮೇಲೆ ಕೆಲವರು ಮನೆಗಳಲ್ಲಿ ಪಕ್ಷಿಗಳನ್ನು ಬಚ್ಚಿಟ್ಟಿರಬಹುದು. ಹೀಗಾಗಿ, ಕೂಬಿಂಗ್‌ ಮಾಡಲಾಗುತ್ತದೆ. ನಂತರ ಹಕ್ಕಿ ಜ್ವರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಪ್ರಮಾಣ ಪತ್ರ ನೀಡಿ, ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಸೋಂಕಿತ ಪ್ರದೇಶದೊಳಗೆನೇ ಕೋಳಿ ಮತ್ತು ಇತರೆ ಪಕ್ಷಿಗಳನ್ನು ಕಲ್ಲಿಂಗ್‌ ಮಾಡಿ ವಿಲೇವಾರಿ ಮಾಡಬೇಕಿದೆ. ಹೊರಗಡೆ ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ, ಕುಂಬಾರಕೊಪ್ಪಲು ಸುತ್ತಮುತ್ತ ಎಷ್ಟುಪಕ್ಷಿಗಳಿಗೆ ಎಂಬುದುರ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಪಕ್ಷಿಗಳ ಸಂಖ್ಯೆ ಆಧಾರದ ಮೇಲೆ ಜಾಗ ನಿಗದಿಪಡಿಸಿ ವಿಲೇವಾರಿ ಮಾಡಲಾಗುವುದು. ವಿಲೇವಾರಿ ಮಾಡಲು ರಾಸಾಯನಿಕಗಳನ್ನು ಬಳಸಲಾಗುವುದು.

ಟ್ಯಾಮಿ ಫä್ಲ ಮಾತ್ರೆಗಳು ಸಾಕಷ್ಟುಇದ್ದು, ಈಗಾಗಲೇ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅವರು ಹೇಳಿದರು.

ನಗರ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಅಜಿತ್‌ಕುಮಾರ್‌, ಪಾಲಿಕೆ ಆರೋಗ್ಯಾಧಿಕಾರಿ ಡಾ. ಜಯಂತ್‌ ಇದ್ದರು.

ಹಕ್ಕಿ ಜ್ವರ ಪಕ್ಷಿಯಿಂದ ಮಾನವನಿಗೆ, ಮಾನವನಿಂದ ಮಾನವನಿಗೆ ಹರುಡುವುದಿಲ್ಲ. ಪಕ್ಷಿಗಳೊಂದಿಗೆ ತುಂಬಾ ಹತ್ತಿರ ಸಂಬಂಧ ಹೊಂದಿದರೆ ಮಾತ್ರ ಮಾನವನಿಗೆ ಸೋಂಕು ತಗಲುವ ಸಾಧ್ಯತೆ ಇದೆ. ಆದರೆ, ಅದು ಸಹ ಅತಿ ವಿರಳ. ಪಕ್ಷಿಗಳಿಂದ ಪಕ್ಷಿಗಳಿಗೆ ಮಾತ್ರ ಹಕ್ಕಿ ಜ್ವರ ಅತಿ ವೇಗವಾಗಿ ಹರಡುತ್ತದೆ. ಕೋಳಿ ಇನ್ನಿತರೆ ಪಕ್ಷಿಗಳ ಮಾಂಸವನ್ನು ಸರಿಯಾಗಿ ಬೇಯಿಸಿ ತಿಂದರೇ ಯಾವುದೇ ಸೋಂಕು ತಗುಲುವುದಿಲ್ಲ. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಜನ ಅನಗತ್ಯವಾಗಿ ಆತಂಕಗೊಳ್ಳುವ ಅಗತ್ಯವಿಲ್ಲ.

- ಅಭಿರಾಮ್‌ ಜಿ. ಶಂಕರ್‌, ಜಿಲ್ಲಾಧಿಕಾರಿ

click me!