ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಗಡಿಕಾಯುವ ಯೋಧರನ್ನು ನಾವು ನಿತ್ಯ ಸ್ಮರಣೆ ಮಾಡಬೇಕು ಎಂದು ದಾವಣೆಗೆರೆ ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಹೇಳಿದ್ದಾರೆ.
ವರದಿ : ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಆಗಸ್ಟ್ 9): ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತವರು, ದೇಶಕ್ಕೆ ಅನ್ನ ನೀಡುವ ರೈತರು ಹಾಗೂ ಗಡಿಕಾಯುವ ಯೋಧರನ್ನು ನಾವು ನಿತ್ಯ ಸ್ಮರಣೆ ಮಾಡಬೇಕು ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಕರೆ ನೀಡಿದರು. 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಮಹಾನಗರ ಪಾಲಿಕೆವರೆಗೆ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದಂತೆ ಆ 13 ರಿಂದ 15 ರವರೆಗೆ ಪ್ರತಿಮನೆಯಲ್ಲಿ ತಿರಂಗಾ ಧ್ವಜ ಹಾರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸಬೇಕಿದೆ. ದಾವಣಗೆರೆಯಲ್ಲಿ 6 ಜನ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿದ್ದಾರೆ ಅವರನ್ನು ನಾವೆಲ್ಲರೂ ಸ್ಮರಿಸಬೇಕಿದೆ ಎಂದರು. ದೇಶದ ಸ್ವಾತಂತ್ರ್ಯ ಕ್ಕಾಗಿ ದುಡಿದಿದ್ದೇವೆ ಎನ್ನುವ ಕಾಂಗ್ರೆಸ್ ನವರು ತಾವೇ ದೇಶಪ್ರೇಮಿಗಳು ಎಂದು ಬಿಂಬಿಸಲು ಹೊರಟಿದ್ದಾರೆ.
ಮೊದಲು ಕಾಂಗ್ರೆಸ್ ನಕಲಿ ಯೋ ಅಸಲಿಯೋ ಜನಕ್ಕೆ ಹೇಳಲಿ:
ಮಹಾತ್ಮಾ ಗಾಂಧಿಯವರೇ ಹೇಳಿದ್ದರು ಸ್ವಾತಂತ್ರ್ಯ ಪಡೆಯಲು ಹುಟ್ಟಿದ ಸಂಸ್ಥೆ ಕಾಂಗ್ರೆಸ್ ಎಂದು. ಆದರೆ ಈಗೀರುವುದು ನಕಲಿ ಕಾಂಗ್ರೆಸ್ ಹಾಗೂ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷ .ಮಾಜಿ ಸಿಎಂ ಸಿದ್ದರಾಮಯ್ಯ ಸಭೆಯೊಂದರಲ್ಲಿ ತಿರಂಗಾ ಧ್ವಜ ಎಂದರೆ ಕೆಂಪು ಎಂದು ಹೇಳಿದ್ದಾರೆ. ಅವರಿಗೆ ತಿರಂಗಾ ಯಾವ ಬಣ್ಣದಲ್ಲಿದೆ ಎಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ದುರಂತ. ನಾವೆಲ್ಲರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಹೋರಾಟಗಾರರು ಸ್ವಾತಂತ್ರ್ಯ ಸೇನಾನಿಗಳನ್ನು ಗೌರವಿಸಬೇಕು ಅಂತಹ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್ ನವರು ಸಂವಿಧಾನ ರಚಿಸಿದ ಡಾ.ಬಿ.ಆರ್ ಅಂಬೇಡ್ಕರ್ ರನ್ನೆ ಕಡೆಗಣಿಸಿದ ಪಕ್ಷ:
ದೇಶದ ಜನತೆ ಸ್ವಾತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಲು ಆನಂದದಿಂದ ಬದುಕಲು ಹೋರಾಟ ಮಾಡಿದವರು ಕ್ರಾಂತಿ ಮಾಡಿದವರನ್ನು ನೆನಪು ಮಾಡಿಕೊಳ್ಳಬೇಕಿದೆ.ಯಾವುದೇ ಚಿಂತೆ ಇಲ್ಲದೇ ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣರಾದವರು ದೇಶದ ಗಡಿಕಾಯುವ ಯೋಧರು. ನಾವೆಲ್ಲರೂ ದೇಶಕ್ಕೆ ಅನ್ನ ನೀಡುವ ರೈತ,ದೇಶದ ಗಡಿಕಾಯುವ ಯೋಧ ನಮಗೆ ಸ್ವಾತಂತ್ರ್ಯ ನೀಡಿದ ಹೋರಾಟಗಾರರನ್ನು ಸದಾ ಸ್ಮರಿಸಬೇಕು ಅವರಿಗೆ ಋಣಿಯಾಗಿರಬೇಕು.
ಕಾಂಗ್ರೆಸ್ ನವರು ಸಂವಿಧಾನ ರಚಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಕಡೆಗಣಿಸಿದ ಪಕ್ಷ ಇಂದು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಮಾಜಿ ಮೇಯರ್ ಬಿ.ಜೆ ಅಜಯ್ ಕುಮಾರ್, ಪಾಲಿಕೆ ಸದಸ್ಯರು ಇದ್ದರು.
‘ಮನೆ ಮನೆಯಲ್ಲಿ ರಾಷ್ಟ್ರಧ್ವಜ’ ಯಶಸ್ಸಿಗೆ ಸಿಎಂ ಬೊಮ್ಮಾಯಿ ಸೂಚನೆ
ಏನಿದು ಹರ್ ಘರ್ ತಿರಂಗಾ: ಹೆಚ್ಚೆಚ್ಚು ಜನರನ್ನು ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ‘ಹರ್ ಘರ್ ತಿರಂಗಾ’ ಎಂಬ ಯೋಜನೆಯೊಂದನ್ನು ಜಾರಿಗೊಳಿಸಲು ಬಿಜೆಪಿ ನಿರ್ಧರಿಸಿದೆ. ಆ.15ರ ಸಮಯದಲ್ಲಿ ಒಂದು ವಾರದ ಕಾಲ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಕರೆ ನೀಡುವ ಕಾರ್ಯಕ್ರಮ ಇದಾಗಿದೆ.
ಹರ್ ಘರ್ ತಿರಂಗಾ ಅಭಿಯಾನ: ಬಿಜೆಪಿಯಿಂದ ಭರ್ಜರಿ ಸಿದ್ಧತೆ
ಇದಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಣಿಗೊಳಿಸಲು ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಕಳೆದ ಜುಲೈನಲ್ಲಿ ಹೈದರಾಬಾದಲ್ಲಿ ಆರಂಭವಾದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ನಿರ್ಣಯಗಳನ್ನು ಘೋಷಿಸಲಾಗಿದೆ.