ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವಂತೆ ಒತ್ತಾಯಿಸಿ 24 ರಂದು ಪ್ರತಿಭಟನೆ

By Web DeskFirst Published Sep 22, 2019, 2:51 PM IST
Highlights

ಬೆಳಗಾವಿಯಲ್ಲಿ 24ರಂದು ಬೃಹತ್‌ ಪ್ರತಿಭಟನೆ| ಸಂತ್ರಸ್ತರಿಗೆ ನ್ಯಾಯ ಒದ​ಗಿ​ಸಲು ಆಗ್ರಹ| ಪ್ರತಿಭಟನೆಯಲ್ಲಿ ವಿಜಯಪುರ ಜಿಲ್ಲೆಯಿಂದ 2 ಸಾವಿರ ಕಾರ್ಯ​ಕ​ರ್ತರು ಭಾಗಿ| ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟದ ಎಚ್ಚರಿಕೆ| ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸಂತ್ರಸ್ತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ| 

ವಿಜಯಪುರ:(ಸೆ.22 ) ನೆರೆ ಸಂತ್ರಸ್ತರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಸೆ.24ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ವಿಜಯಪುರ ಜಿಲ್ಲೆಯಿಂದ ಸುಮಾರು 2 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ ತಿಳಿಸಿದರು.

ಶನಿವಾರ ನಗ​ರ​ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ದಿನೇಶ ಗುಂಡೂರಾವ್‌, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ನಡೆಯಲಿರುವ ಬೃಹತ್‌ ರಾರ‍ಯಲಿ ಯಶಸ್ವಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿವರ್ಷ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿತ್ತು. ಆದರೆ ಈ ಸಲ ಚಳಿಗಾಲ ಅಧಿವೇಶವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಇದು ಸರಿಯಲ್ಲ. ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬೆಳಗಾವಿ ಅಧಿವೇಶನ ನಡೆಸಲಾಗುತ್ತಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಬೆಳಗಾವಿ ಅಧಿವೇಶನವನ್ನು ಈ ಬಾರಿ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. 


ಇದು ಉತ್ತರ ಕರ್ನಾಟಕದ ಜನತೆಯನ್ನು ಕಡೆಗಣಿಸದಂತಾಗುತ್ತದೆ. ಪ್ರಸ್ತುತ ವರ್ಷ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಹಾಪ್ರವಾಹದಿಂದ ಜನರು ಮನೆ, ಮಠ, ಬೆಳೆ ಕಳೆದುಕೊಂಡು ಅಪಾರ ಹಾನಿ ಅನುಭವಿಸಿದ್ದಾರೆ. ಸಂತ್ರಸ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿಯೇ ಅಧಿವೇಶನ ಕರೆದು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅದನ್ನು ಬಿಟ್ಟು ಬೆಂಗಳೂರಿಗೆ ಅಧಿವೇಶನ ಸ್ಥಳಾಂತರ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. 

ಪ್ರವಾಹ ಸಂಭವಿಸಿ 2 ತಿಂಗಳಾದರೂ ಇಲ್ಲಿಯವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಪುನರ್ವಸತಿ ಕಲ್ಪಿಸಿಲ್ಲ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸಂತ್ರಸ್ತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದಾಗಿ ಸಂತ್ರಸ್ತರು ಇನ್ನೂ ತೊಂದರೆಯಿಂದ ಹೊರ ಬಂದಿಲ್ಲ ಎಂದರು. 

ಸರ್ಕಾರ ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸ್ಪಂದಿಸಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಲು ಯುದ್ಧೋಪಾದಿಯಲ್ಲಿ ಕ್ರಮ ಜರುಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರನ್ನು ನೇಮಿಸಲಾಗಿದೆ. ಅವರು ಕೂಡಲೇ ಅಧಿಕಾರಿಗಳ ಸಭೆ ಕರೆದು ಸಂತ್ರಸ್ತರ ತೊಂದರೆ ನಿವಾರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಒಂದೊಮ್ಮೆ ಕೇಂದ್ರ, ರಾಜ್ಯ ಸರ್ಕಾರಗಳು ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ತೊಂದರೆಗಳನ್ನು ನಿವಾರಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸೆ. 24ರಂದು ಬೆಳಗಾವಿಯಲ್ಲಿ ನಡೆಯಲಿರುವ ಹೋರಾಟದ ಸಂದರ್ಭದಲ್ಲಿ ಪಕ್ಷದ ವರಿಷ್ಠರು ನೆರೆ ಸಂತ್ರಸ್ತರ ಬಗೆಗಿನ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಏನು ಮಾಡಬೇಕು ಎಂಬುವುದರ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ, ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ವಸಂತ ಹೊನಮೋಡೆ, ನಾಗರಾಜ ಲಂಬು, ಸಾಹೇಬಗೌಡ ಬಿರಾದಾರ ಸೇರಿದಂತೆ ಮತ್ತಿತರಿದ್ದರು. 
 

click me!