ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜನತೆ ರೈತಪರ ಮುಖ್ಯಮಂತ್ರಿ ಎಂದು ಗುರುತಿಸುತ್ತಾರೆ ಎಂದ ಮಾಜಿ ಸಚಿವ ಎಸ್.ಎಸ್. ಪಾಟೀಲ| ಯಡಿಯೂರಪ್ಪ ಅವರಿಂದ ಕಪ್ಪತ್ತಗುಡ್ಡಕ್ಕೆ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ಇದೆ| ಈ ಹಿಂದೆ ಗದುಗಿನ ಲಿಂ. ಜ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಜರುಗಿದ ಪೋಸ್ಕೊ ಹೋರಾಟಕ್ಕೂ ಯಡಿಯೂರಪ್ಪ ಸ್ಪಂದಿಸಿದ್ದರು|
ಮುಂಡರಗಿ(ಸೆ.27) ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಜನತೆ ರೈತಪರ ಮುಖ್ಯಮಂತ್ರಿ ಎಂದು ಗುರುತಿಸುತ್ತಾರೆ. ಹೀಗಾಗಿ ರೈತರ ಜಮೀನುಗಳಿಗೆ ಮಳೆಯಾಗಲು ಅನುಕೂಲವಾಗಿರುವ ಕಪ್ಪತ್ತಗುಡ್ಡವನ್ನು ಈಗಾಗಲೇ ವನ್ಯಜೀವಿ ಧಾಮ ಎಂದು ಘೋಷಣೆ ಮಾಡಿರುವುದನ್ನೇ ಅವರು ಮುಂದುವರೆಸುತ್ತಾರೆ ಎನ್ನುವ ಭರವಸೆ ನನಗಿದೆ. ಯಡಿಯೂರಪ್ಪ ಅವರಿಂದ ಕಪ್ಪತ್ತಗುಡ್ಡಕ್ಕೆ ಅನ್ಯಾಯವಾಗುವುದಿಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದ್ದಾರೆ.
ಅವರು ಗುರುವಾರ ಮುಂಡರಗಿ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಗದುಗಿನ ಲಿಂ. ಜ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಜರುಗಿದ ಪೋಸ್ಕೊ ಹೋರಾಟಕ್ಕೂ ಯಡಿಯೂರಪ್ಪ ಸ್ಪಂದಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಲೂ ಈ ಭಾಗದ ಜನರ ಜೀವನಾಡಿಯಾಗಿರುವ ಕಪ್ಪತ್ತಗುಡ್ಡವನ್ನೂ ವನ್ಯಜೀವಿ ಧಾಮ ಎಂದು ಮುಂದುವರೆಸುತ್ತಾರೆ. ಇದಕ್ಕೂ ಗದುಗಿನ ಲಿಂ. ಜ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾಕಷ್ಟು ಹೋರಾಟ ಮಾಡಿ ಬಂಡವಾಳಶಾಹಿಗಳ ವಿರೋಧ ಕಟ್ಟಿಕೊಂಡಿದ್ದರು.
ಕಪ್ಪತ್ತಗುಡ್ಡ ಇರುವುದರಿಂದ ಗದಗ, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಉತ್ತಮ ಮಳೆಯಾಗುತ್ತದೆ. ಮಳೆಯಾದರೆ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಆದ್ದರಿಂದ ಇವರೊಬ್ಬ ರೈತಪರ ಮುಖ್ಯಮಂತ್ರಿಯಾಗಿರುವುದರಿಂದ ಕಪ್ಪತ್ತಗುಡ್ಡಕ್ಕೆ ಎಂದೆಂದಿಗೂ ಅನ್ಯಾಯವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸಹ ಪರಿಸರಕ್ಕೆ ಎಲ್ಲಿಲ್ಲದ ಪ್ರೀತಿ ತೋರಿಸುತ್ತಾರೆ. ಇವರ ಪರಿಸರ ಪ್ರೇಮವನ್ನು ಪರಿಸರ ಖಾಳಜಿಯನ್ನು ಮೆಚ್ಚಿಯೇ ಈಚೆಗೆ ಅಮೆರಿಕದ ವಿಶ್ವಸಂಸ್ಥೆಯಲ್ಲಿ ಮೋದಿಯವರನ್ನು ಮೊದಲ ಭಾಷಣಕಾರರಾಗಿ ಅವಕಾಶ ನೀಡಿದರು. ಆದ್ದರಿಂದ ಅವರಿಗೆ ಪರಿಸರ ಪ್ರೇಮ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿರುವ ರೈತಪರ ಕಾಳಜಿಯಿಂದಾಗಿ ಕಪ್ಪತ್ತಗುಡ್ಡಕ್ಕೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎನ್ನುವ ಭರವಸೆ ನನಗಿದೆ. ಇದು ಉತ್ತರ ಕರ್ನಾಟಕದ ಜೀವನಾಡಿ, ನಮ್ಮೆಲ್ಲರ ತಾಯಿ ಇದ್ದಂತೆ. ಹೀಗಾಗಿ ಕಪ್ಪತ್ತಗುಡ್ಡದ ಉಳುವಿಗಾಗಿ ತಾವು ಸದಾ ಹೋರಾಟಕ್ಕೆ ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಬಿಎಸ್ ವೈ ಮಾತು ತಪ್ಪಿದರೆ ಉಗ್ರ ಹೋರಾಟ
ಒಂದು ವೇಳೆ ರಾಜ್ಯ ಸರ್ಕಾರ ಹಿಂದಿನ ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿದ ವನ್ಯಜೀವಿ ಧಾಮವನ್ನು ಹಿಂದಕ್ಕೆ ಪಡೆದರೆ ಇಡೀ ಗದಗ ಜಿಲ್ಲೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತದೆ. ಜೈಲ… ಬರೋ ಚಳುವಳಿಯಾಗುತ್ತದೆ. ಅಷ್ಟೇ ಅಲ್ಲ ದೆಹಲಿಗೆ ತೆರಳಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಕಪ್ಪತ್ತಗುಡ್ಡದ ಉಳಿವಿಗೆ ಹಾಗೂ ಅಲ್ಲಿರುವ 210ಕ್ಕೂ ಹೆಚ್ಚು ಔಷಧಿ ಸಸ್ಯಗಳ ಉಳಿವಿಗಾಗಿ, ಪ್ರಾಣಿ ಪಕ್ಷಿಗಳ ಉಳಿವಿಗಾಗಿ, ಅಲ್ಲಿನ ಕೆರೆ, ಕೊಳ್ಳ, ಬಾವಿಗಳ ಉಳಿವಿಗಾಗಿ ಒತ್ತಾಯಿಸಿ ಮನವಿ ಸಲ್ಲಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಮುಂದುವರೆಸುವಂತೆ ತಿಳಿಸಬೇಕು. ಇದಕ್ಕೆ ಸಂಬಂಧಪಟ್ಟ ಎಲ್ಲರೂ ಕೈಜೋಡಿಸಿ ಗುಡ್ಡವನ್ನು ಉಳಿಸಿಕೊಳ್ಳಬೇಕು. ಒಂದು ವೇಳೆ ಕಪ್ಪತ್ತಗುಡ್ಡ ಉಳಿಯದಿದ್ದರೆ ಅದರ ಸುತ್ತಮುತ್ತಲಿನ 4-5 ಜಿಲ್ಲೆಗಳ ನಮಗ್ಯಾರಿಗೂ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ.