
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣನ್ಯೂಸ್, ಕೊಡಗು
ಕೊಡಗು (ಜೂ.23): ಬಿಡದಿ ಟೌನ್ ಶಿಪ್ ಅನ್ನು 2006 ರಲ್ಲಿ ಮೊದಲು ಆರಂಭಿಸಿದ್ದೇ ಇದೇ ಕುಮಾರಸ್ವಾಮಿ ಅವರು. ಇದನ್ನು ಕುರಿತು ಚರ್ಚಿಸಲು ಇದೇ 26 ಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಆದರೆ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರ್ ಸ್ವಾಮಿ ಅವರು 26 ಕ್ಕೆ ಯಾವುದೋ ಬೇರೆ ಕೆಲಸದ ನಿಮಿತ್ತ ಬ್ಯುಸಿಯಾಗಿದ್ದೇನೆ. ಆದ್ದರಿಂದ 27 ಕ್ಕೆ ಬಿಡದಿ ಸಮೀಪದ ಒಂದು ಹಳ್ಳಿಗೆ ಬನ್ನಿ ಎಂದಿದ್ದಾರೆ. ಇದರ ಅರ್ಥ ಹಿಟ್ ಅಂಡ್ ರನ್ ಕೆಲಸ ಎಂಬುದು ಸ್ಪಷ್ಟ.
ಕುಮಾರಸ್ವಾಮಿ ಅವರು ದೇಶದಲ್ಲಿ ಅತ್ಯಂತ ಪ್ರಸಿದ್ಧ ಹಿಟ್ ಅಂಡ್ ರನ್ ವ್ಯಕ್ತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೆಚ್ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 2006 ರಲ್ಲಿ ನೀವು ಸಿಎಂ ಆಗಿದ್ದಾಗ 12 ಸಾವಿರ ಎಕರೆಯನ್ನು ನೋಟಿಫೈ ಮಾಡಿದ್ರಿ. ಬಳಿಕ ಅದನ್ನು ರೆಡ್ ಝೋನ್ ಎಂದು ಮಾಡಿ ಅದನ್ನು ಮಾರಲೂ ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ ಕೀರ್ತಿ ನಿಮ್ಮದೇ. 2018 ರಲ್ಲಿ ನೀವು ಮತ್ತೆ ಸಿಎಂ ಆದಾಗಲಾದರೂ ರೈತರ ಭೂಮಿಯನ್ನು ತೆಗೆದುಕೊಳ್ಳಬಾರದು ಎನ್ನುವ ಮನೋಭಾವವಿದ್ದರೆ, ಆ ಭೂಮಿಯನ್ನು ಡಿನೋಟಿಫೈ ಮಾಡಬಹುದಿತ್ತಲ್ಲಾ.
ಯಾಕೆ ನೀವು ಮಾಡದೆ ಈಗ ಹೋರಾಟ ಎಂದು ರೈತರ ದಿಕ್ಕು ತಪ್ಪಿಸುತಿದ್ದೀರಾ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಿಡದಿ ಟೌನ್ ಶಿಪ್ ತರುವುದಕ್ಕೆ ಕಾರಣವಾಗಿದ್ದೇ ಕುಮಾರಸ್ವಾಮಿ ಅವರು ಮತ್ತು ಬಿಜೆಪಿ ಸರ್ಕಾರ. ಯಡಿಯೂರಪ್ಪನವರು, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡ್ರು ಇದ್ದಾಗ 912 ಎಕರೆ ವಶಕ್ಕೆ ಪಡೆದು ಈಗಾಗಲೇ ಹಂಚಲಾಗಿದೆ. ಆಗ ಅದು ಫಲವತ್ತಾದ ಭೂಮಿ ಅದನ್ನು ಕಿತ್ತುಕೊಳ್ಳಬಾರದು ಎನ್ನುವುದು ಗೊತ್ತಾಗಲಿಲ್ಲವೆ. ಈಗೇಕೆ ಈ ಕಳ್ಳಾಟವನ್ನು ಆಡುತ್ತಿದ್ದೀರಾ. ಡಿ.ಕೆ. ಶಿವಕುಮಾರ್ ಒಬ್ಬ ಒಕ್ಕಲಿಗ ಸಮುದಾಯದವರು ಸಿಎಂ ಆಗಿದ್ದಾರೆ ಎಂಬುದರಿಂದ ನೀವು ಈ ರೀತಿ ಮಾಡುತ್ತಿದ್ದೀರಿ.
ಇದು ಈ ರಾಜ್ಯದ ದುರಂತ. ಇಲ್ಲವೆ ಒಕ್ಕಲಿಗ ಸಮುದಾಯ ದುರಂತ ಇರಬಹುದು ಎಂದಿದ್ದಾರೆ. ಒಟ್ಟು 7483 ಎಕರೆ ನೋಟಿಫೈ ಮಾಡಿದ್ದೀರಾ. ಅದರಲ್ಲಿ 6434 ರೈತರು ಇದ್ದಾರೆ. ಅವರಲ್ಲಿ ಬಿಎಂಆರ್ಡಿಎಲ್ ನವರು ನೋಟಿಸ್ ಕೊಟ್ಟಾಗ ನಾವು ಯಾವ ಕಾರಣಕ್ಕೂ ಭೂಮಿಯನ್ನು ಕೊಡಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟ ರೈತರ ಸಂಖ್ಯೆ 1347 ಅಷ್ಟೆ. 265 ರೈತರು ಈ ಬೆಲೆಗೆ ಕೊಡಲು ನಮಗೆ ಒಪ್ಪಿಗೆ ಇಲ್ಲ ಎಂದಿದ್ರು. 663 ಜನರು ರೈತರು ಮಾತ್ರ ಭೂಮಿ ಕೊಡುವುದೇ ಇಲ್ಲ ಎಂದಿದ್ದಾರೆ. ಈ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ನೀವು ವಿಧಾನಸೌಧಕ್ಕೆ ಬಂದ್ರೆ ಆ ಎಲ್ಲಾ ದಾಖಲೆಗಳನ್ನು ನಿಮಗೆ ಕೊಡುತ್ತೇವೆ.
ನೀವು ನಾಲ್ಕೈದು ಸುಪ್ರೀಂಕೋರ್ಟ್ ಲಾಯರ್ ಮೂಲಕವೇ ಬನ್ನಿ ಚರ್ಚಿಸಿ. ಆಮೇಲೆ ನೀವು ಕರೆದಲ್ಲಿಗೆ ನಾವು ಬರುತ್ತೇವೆ. ಸರ್ಕಾರ ಬರುತ್ತದೆ ಎಂದು ಎಂ. ಲಕ್ಷ್ಮಣ್ ಹೆಚ್.ಡಿ ಕೆಗೆ ಆಗ್ರಹಿಸಿದ್ದಾರೆ. ಬಿಎಂಆರ್ಡಿಎಲ್ ಅವರು ಈ ಭೂಮಿಯನ್ನು ತೆಗೆದುಕೊಂಡು ಕೈಗಾರಿಕೆಯವರಿಗೆ ಭೂಮಿ ಹಂಚಿದ್ದಾರೆ. ಜೊತೆಗೆ ಅಲ್ಲಿಯೇ ವಸತಿ ಯೋಜನೆಯನ್ನು ಮಾಡಲಿದ್ದಾರೆ. ಇಲ್ಲಿ ಯಾವುದೇ ರೀತಿಯಿಂದಲೂ ರಿಯಲ್ ಎಸ್ಟೇಟಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಸುಳ್ಳು ಆರೋಪ ಮಾಡುವುದಕ್ಕೂ ಒಂದು ಅರ್ಥ ಇರಬೇಕಲ್ಲವೇ ಎಂದಿದ್ದಾರೆ.