ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ರಾಜಕೀಯ ಗುದ್ದಾಟ ಜೋರಾಗಿದ್ದು, ಇದೀಗ ಒಂದೇ ಕಾಮಗಾರಿಗಳಿಗೆ ಮೂರು ಬಾರಿ ಭೂಮಿ ಪೂಜೆ ನೆರವೇರುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜ.28): ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ರಾಜಕೀಯ ಗುದ್ದಾಟ ಜೋರಾಗಿದ್ದು, ಇದೀಗ ಒಂದೇ ಕಾಮಗಾರಿಗಳಿಗೆ ಮೂರು ಬಾರಿ ಭೂಮಿ ಪೂಜೆ ನೆರವೇರುತ್ತಿದೆ. ಇಲ್ಲಿವರೆಗೆ ಸದ್ದಿಲ್ಲದೇ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯವು ವಿಧಾನಸಭಾ ಚುನಾವಣೆ ಸನಿಹದಲ್ಲಿರುವ ಕಾರಣ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಹೀಗಾಗಿ ಮೂರು ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಪೈಪೋಟಿಗೆ ಬಿದ್ದವರಂತೆ ಒಂದೇ ಕಾಮಗಾರಿಗೆ ಮೂರು ಮೂರು ಬಾರಿ ಗುದ್ದಲಿಪೂಜೆ ಮಾಡುತ್ತಿದ್ದಾರೆ. ಭೂಮಿ ಪೂಜೆ ಮೂಲಕ ಚುನಾವಣಾ ಪೂರ್ವದಲ್ಲಿ ಶಕ್ತಿ ಪ್ರದರ್ಶನದ ಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ಮತ ಸೆಳೆಯಲು ಮುಂದಾಗುತ್ತಿದ್ದಾರೆ. ರಾಮನಗರ ನಗರಸಭಾ ವ್ಯಾಪ್ತಿಯ ವಾರ್ಡುಗಳಲ್ಲಿ ಒಂದೇ ಕಾಮಗಾರಿಗೆ ಎರಡು - ಮೂರು ಬಾರಿ ಜನಪ್ರತಿನಿಧಿಗಳಿಂದ ಭೂಮಿ ಪೂಜೆ ನೆರವೇರುತ್ತಿದೆ.
ಸಚಿವರಿಂದ ಶಂಕುಸ್ಥಾಪನೆ: ಕಳೆದ ಡಿಸೆಂಬರ್ 16ರಂದು ಬಿಡದಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಕ್ರೀಡಾಂಗಣದ (ತಿಮ್ಮಪ್ಪನ ಕಟ್ಟೆ) ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜು 125 ಕೋಟಿ ರುಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ರಾಮನಗರ ನಗರಸಭೆ ವ್ಯಾಪ್ತಿಯ ನಗರೋತ್ಥಾನ ಸೇರಿದಂತೆ ಜಿಲ್ಲೆಯ 6 ಸ್ಥಳೀಯ ಸಂಸ್ತೆಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯ ಜೊತೆಗೆ ಹಲವು ಇಲಾಖೆಗಳಿಂದ ಅನುಷ್ಠಾನಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಮಾಗಡಿ ಕ್ಷೇತ್ರ ಶಾಸಕ ಎ.ಮಂಜುನಾಥ್ ಅವರನ್ನು ಹೊರತು ಪಡಿಸಿ ಶಾಸಕರಾದ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಅನಿತಾ ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ.ಸುರೇಶ್ ಅವರೆಲ್ಲರು ಗೈರಾಗಿದ್ದರು.
ನಿವೃತ್ತ ಸರ್ಕಾರಿ ನೌಕರರೇ ಇವರ ಟಾರ್ಗೆಟ್: ಪಂಚವಟಿ ಮಲ್ಟಿಸ್ಟೇಟ್ ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ ವಂಚನೆ
ಶಾಸಕಿಯಿಂದ ಭೂಮಿಪೂಜೆ: ಜಿಲ್ಲಾ ಸಚಿವರು ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿಗಳಿಗೆ ಡಿಸೆಂಬರ್ 19ರಂದು ರಾಮನಗರ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಜೆಡಿಎಸ್ ಶಾಸಕಿ ಅನಿತಾಕುಮಾರಸ್ವಾಮಿ ಮತ್ತೆ ಭೂಮಿಪೂಜೆ ನೆರವೇರಿಸಿದರು. ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ನೀಡದೆ ಏಕಾಏಕಿ ಕಾರ್ಯಕ್ರಮ ಆಯೋಜನೆ ಮಾಡಿದ ಶಾಸಕರ ವಿರುದ್ಧ ನಗರಸಭೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗೂ ಸನ್ನದ್ಧರಾಗಿದ್ದರು.
ಮಳೆಯಿಂದಾಗಿ ನಗರ ವ್ಯಾಪ್ತಿಯ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿತ್ತು. ಸೇತುವೆಗಳು ಕೊಚ್ಚಿ ಹೋಗಿದ್ದವು. ಇಂತಹ ಸಂಕಷ್ಟಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರು ಜೀವದ ಹಂಗು ತೊರೆದು ಜನರ ರಕ್ಷಣೆ ಮಾಡುವ ಕೆಲಸ ಮಾಡಿದ್ದರು. ಆದರೆ, ಕಾಮಗಾರಿಗೆ ಪೂಜೆ ನೆರವೇರಿಸುವ ವೇಳೆ ಸ್ಥಳೀಯ ಸದಸ್ಯರನ್ನು ಆಹ್ವಾನಿಸಿಲ್ಲ ಏಕೆಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದ ಕಾಂಗ್ರೆಸ್ ಸದಸ್ಯರ, ನಗರದ ಅಭಿವೃದ್ಧಿಗಾಗಿ ನಾವು ಕೈಜೋಡಿಸುತ್ತೇವೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಶಾಸಕರ ಮೇಲಿದೆ ಎಂದು ಹೇಳಿದ್ದರು.
ಕಾಂಗ್ರೆಸ್ ಸದಸ್ಯರಿಂದ ಗುದ್ದಲಿಪೂಜೆ: ಈಗ ಸಚಿವರು ಹಾಗೂ ಶಾಸಕರಿಂದ ಚಾಲನೆ ದೊರೆತಿರುವ ಕಾಮಗಾರಿಗಳಿಗೆ ನಗರಸಭೆ ಕಾಂಗ್ರೆಸ್ ಸದಸ್ಯರು ವಾರ್ಡ್‌ವಾರು ಗುದ್ದಲಿಪೂಜೆ ಮುಂದುವರೆಸಿದ್ದಾರೆ. ಕಳೆದ ಎರಡು ವಾರಗಳಿಂದ 5 ಮತ್ತು 6ನೇ ವಾರ್ಡಿನಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಪಕ್ಷದ ಮುಖಂಡರೊಂದಿಗೆ ಸೇರಿ ಕಾಮಗಾರಿಗಳಿಗೆ ಮತ್ತೆ ಪೂಜೆ ಮುಗಿಸಿದ್ದಾರೆ. ವಿಧಾನಸಭಾ ಚುನಾವಣೆ ಸನಿಹದಲ್ಲಿರುವ ಕಾರಣ ಮತ ಬ್ಯಾಂಕ್ ಅನ್ನು ಗಟ್ಟಿಮಾಡಿಕೊಳ್ಳಲು ಜೆಡಿಎಸ್ ಶಾಸಕರು ಹಾಗೂ ನಗರಸಭೆ ಕಾಂಗ್ರೆಸ್ ಸದಸ್ಯರು ಜಿದ್ದಿಗೆ ಬಿದ್ದವರಂತೆ ಕಂಡು ಬರುತ್ತಿದೆ.
ಪ್ರಧಾನಿ ಮೋದಿ ಜನಪರ ಬದ್ಧತೆಯ ನಾಯಕ: ಶಾಸಕ ಮಹೇಶ್
ಬಿಡದಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣರವರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಶಾಸಕರು ಸ್ಥಳೀಯ ಸದಸ್ಯರನ್ನು ಆಹ್ವಾನಿಸದೆ ಕಾಮಗಾರಿಗೆ ಚಾಲನೆ ನೀಡಿ ಹೋಗಿದ್ದಾರೆ. ಹಾಗಾಗಿ ವಾರ್ಡ್‌ಗಳಲ್ಲಿ ಪೂಜೆ ಮಾಡುತ್ತಿದ್ದೇವೆ.
-ಕೆ.ಶೇಷಾದ್ರಿ, ಸದಸ್ಯರು, ನಗರಸಭೆ, ರಾಮನಗರ.