ಆಯೋಧ್ಯ ರಾಮಲಲ್ಲಾ ಮೂರ್ತಿ ಕೆತ್ತನೆ ಶಿಲೆ ಲಭ್ಯವಾದ ಮೈಸೂರಿನ ಹಾರೋಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಮೈಸೂರು (ಜ.22): ಅಯೋಧ್ಯದಲ್ಲಿ ಪ್ರಾಣ ಪ್ರತಿಷ್ಠೆಯಾಗುತ್ತಿರುವ ಶ್ರೀ ರಾಮಲಲ್ಲಾ ಮೂರ್ತಿಗೆ ಕಲ್ಲು ಸಿಕ್ಕ ಸ್ಥಳವಾದ ಮೈಸೂರು ತಾಲೂಕಿನ ಹಾರೋಹಳ್ಳಿ- ಗುಜ್ಜೆಗೌಡನಪುರದ ದಲಿತ ವ್ಯಕ್ತಿ ರಾಮದಾಸು ಅವರ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ಹೌದು, ರಾಮಲಲ್ಲಾ ನಿರ್ಮಾಣಕ್ಕೆ ಕಲ್ಲು ಸಿಕ್ಕ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಸಿದ್ದತೆ ಮಾಡಲಾಗಿದೆ. ಮೈಸೂರು ತಾಲೂಕಿನ ಹಾರೋಹಳ್ಳಿ- ಗುಜ್ಜೆಗೌಡನಪುರದಲ್ಲಿ ಸಂಭ್ರಮಿಸಲಾಗಿದೆ. ಜಮೀನಿನ ಮಾಲೀಕರಾದ ರಾಮದಾಸ್ ಹಾಗೂ ಕಲ್ಲು ಕಳುಹಿಸಿಕೊಟ್ಟ ಶ್ರೀನಿವಾಸ್ ಕೂಡ ಭಾಗಿ. ಸ್ಥಳದಲ್ಲಿ ಚಪ್ಪರ ಹಾಕಿ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಕಾಡಿನಂತೆ ಇದ್ದ ಪ್ರದೇಶದಲ್ಲಿ ಕಲ್ಲು ಸಿಕ್ಕಿದ್ದು, ಇದೀಗ ಇದೇ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ.
ರಾಮ ಮಂದಿರ ನಿರ್ಮಾಣಕ್ಕೆ ಜೀವನಾಧಾರದ ಜಮೀನು ಬಿಟ್ಟುಕೊಟ್ಟ ದಲಿತ ರಾಮದಾಸ
ಹಾರೋಹಳ್ಳಿ ಗ್ರಾಮದಲ್ಲಿ ಮೂಲ ರಾಮ ನಿರ್ಮಾಣದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅರ್ಚಕ ಪ್ರಹ್ಲಾದ್ ಅವರು ಹಾರೋಹಳ್ಳಿ ರಾಮಮಂದಿರವನ್ನು ದಕ್ಷಿಣ ಅಯೋಧ್ಯೆ ಎಂದು ಕರೆದರು. ಅಯೋಧ್ಯೆಯಿಂದ ಮಣ್ಣು, ಸರಯೂ ನದಿಯಿಂದ ತೀರ್ಥ, ಪ್ರಸಾದವನ್ನು ತಂದು ಭೂಮಿ ಪೂಜೆ ಮಾಡಲಾಗುತ್ತಿದೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೆ ಕಲ್ಲು ಸಿಕ್ಕ ಸ್ಥಳವಾಗಿದೆ. ಕಲ್ಲು ಸಿಕ್ಕ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಸಿದ್ದತೆ ಮಾಡಲಾಗಿದೆ.
ಇನ್ನು ಮೈಸೂರಿನ ರಾಮದಾಸ್ ಅವರ ಜಮೀನಿನಲ್ಲಿ ದೊರೆತ 10 ಅಡಿ ಅಳತೆಯ ಮೂರು ಬೃಹತ್ ಬಂಡೆಗಳಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಬಾಲ ರಾಮ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಈಗ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಶಿಲೆಯಿಂದ ಜಗತ್ತೇ ನಮಿಸುವಂತಹ ಶ್ರೀರಾಮಲಲ್ಲಾನ ವಿಗ್ರಹ ರಚನೆಯಾಗಿದ್ದು, ಅದನ್ನು ಇಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಕನ್ನಡಿಗನ ವಿಗ್ರಹವೇ ಆಯ್ಕೆಯಾಗಿದ್ದೇಕೆ? ಅಯೋಧ್ಯೆಯ ಮೂಲ ವಿಗ್ರಹ ಎಲ್ಲಿರಲಿದೆ?
ಅರುಣ್ ಯೋಗಿರಾಜ್ ಅವರಿಂದ ಮೂರ್ತಿ ಕೆತ್ತನೆ:
ಹಾರೋಹಳ್ಳಿಯ ಒಬ್ಬ ದಲಿತ ರೈತನ ಜಮೀನಿನಲ್ಲಿ ದೊರೆತ ಕಲ್ಲನ್ನು ಪಡೆದು ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಿಲೆಯನ್ನು ಕೆತ್ತಿದ್ದಾರೆ. ಅದೇ ರೀತಿ ಪೂಜಾ ಕಾರ್ಯಕ್ರಮಗಳಲ್ಲೂ ಕರ್ನಾಟಕದ ಅರ್ಚಕರೇ ಭಾಗವಹಿಸುತ್ತಿರುವುದರಿಂದ ರಾಜ್ಯಕ್ಕೆ ಹೆಮ್ಮೆ ತಂದಿದೆ. ಜ.22 ರಂದು ಕಲ್ಲು ಸಿಕ್ಕಿದ ಭೂಮಿಯಲ್ಲಿ ಬೆಳಗ್ಗೆ ಭೂಮಿ ಪೂಜೆ ನೆರವೇರಿಸುವ ಜೊತೆಗೆ ಧ್ಯಾನ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಕಾರಣ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದಲೇ ಶ್ರೀ ರಾಮನ ವಿಗ್ರಹ ಕೆತ್ತನೆ ಮಾಡಿಸಲಾಗುವುದು.
- ಜಿ.ಟಿ. ದೇವೇಗೌಡ, ಶಾಸಕ