ಮೈಸೂರು ಕೊಡಗು ಲೋಕಸಭೆ ಬಿಜೆಪಿ ಟಿಕೆಟ್‌ಗೆ ಫೈಟ್; ನಾನೂ ಪ್ರಬಲ ಆಕಾಂಕ್ಷಿ ಎಂದ ಭಾಸ್ಕರ್ ರಾವ್!

By Sathish Kumar KH  |  First Published Feb 27, 2024, 8:27 PM IST

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟಿಗಾಗಿ ನಾನು ತೀವ್ರ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಹೇಳಿದ್ದಾರೆ. 


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು  (ಫೆ.27): ಲೋಕಸಭಾ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಪಕ್ಷಗಳು ಅಖಾಡ ಸಿದ್ಧ ಮಾಡಿಕೊಳ್ಳುತ್ತಿವೆ. ಆದರೆ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂದು ಯಾವುದೇ ಪಕ್ಷ ನಿರ್ಧಾರ ಮಾಡಿಲ್ಲ. ಈ ನಡುವೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟಿಗಾಗಿ ನಾನು ತೀವ್ರ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಹೇಳಿದ್ದಾರೆ. 

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಷ್ಕರ್ ರಾವ್ ಅವರು, ಟಿಕೆಟ್ ಬೇಕೆಂದು ಈಗಾಗಲೇ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದೇನೆ. ಹೈಕಮಾಂಡ್ ಏನು ನಿರ್ಧಾರ ಮಾಡುವುದೋ ಗೊತ್ತಿಲ್ಲ. ಈಗಾಗಲೇ ನಾನು ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಹೀಗಾಗಿ ಟಿಕೆಟ್ ಸಿಗುವುದು ಎನ್ನುವ ನಂಬಿಕೆಯಲ್ಲಿ ಇದ್ದೇನೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಟಿಕೆಟಿಗಾಗಿ ಮನವಿ ಸಲ್ಲಿಸಿರುವ ಭಾಸ್ಕರ್ ರಾವ್ ಅವರು ಫೀಲ್ಡಿಗೆ ಇಳಿದು ಅಖಾಡ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. 

Latest Videos

undefined

Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ!

ಕೊಡಗಿಗೆ ಭೇಟಿ ನೀಡಿರುವ ಭಾಸ್ಕರ್ ರಾವ್ ತಮ್ಮ ವ್ಯಾಪ್ತಿಯಲ್ಲಿ ಸಂಪರ್ಕವಿರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ತಮ್ಮ ಸಹಕಾರ ನೀಡುವಂತೆ ಮನವಿ ಮಾಡಿ ಹೋಗಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಮತ್ತೆ ಕೊಡಗಿಗೆ ಆಗಮಿಸಲಿರುವ ಭಾಸ್ಕರ್ ರಾವ್ ಅವರು ಜಿಲ್ಲೆಯಲ್ಲಿ ಹಿತೈಷಿಗಳ ಸಭೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ. ನೀವು ಮೈಸೂರು ಕೊಡಗು ಲೋಕಸಭಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ಏಕೆ ಎಂದು ಕೇಳಿದರೆ ನಾನು ಮೈಸೂರು ಜಿಲ್ಲೆಯವನು. ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ನಿವಾಸಿ, ಮೈಸೂರಿನಲ್ಲಿ ಮನೆ ಇದೆ. 

ಹೀಗಾಗಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಸಂಬಂಧವಿದೆ. ಜೊತೆಗೆ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಹಲವು ಜನಪರವಾದ ಕೆಲಸ ಮಾಡಿದ್ದೇನೆ. ಆ ಮೂಲಕ ಕೊಡಗು ಜಿಲ್ಲೆಯಲ್ಲಿ ಚಿರಪರಿಚಿತನಾಗಿದ್ದೇನೆ. ನನ್ನ ಪತ್ನಿ ಕೂಡ ಕೊಡಗಿನ ಸುಂಟಿಕೊಪ್ಪದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದರಿಂದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇವೆ. ಮೂರು ತಲಮಾರುಗಳ ಜನರೊಂದಿಗೆ ನಮ್ಮ ಸಂಬಂಧವಿದೆ. ಇವೆಲ್ಲವೂ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೇಳಲು ಕಾರಣಗಳಾಗಿವೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಡ್ರೈವರ್-ಕಂ-ಕಂಡಕ್ಟರ್ 2000 ಹುದ್ದೆಗಳ ನೇಮಕಾತಿಗೆ ಮರುಚಾಲನೆ: ಮಾ.6ರಿಂದ ಫಿಸಿಕಲ್ ಟೆಸ್ಟ್

ಆದರೆ ಅಂತಿಮ ನಿರ್ಧಾರ ಪಕ್ಷದ್ದೇ ಆಗಿರುತ್ತದೆ. ಪಕ್ಷ ಟಿಕೆಟ್ ನೀಡಿದಲ್ಲಿ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ. ಒಂದು ವೇಳೆ ನನಗೆ ಟಿಕೆಟ್ ನೀಡದೆ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. ಆದರೆ ಈಗಾಗಲೇ ಚುನಾವಣಾ ಪೂರ್ವದಲ್ಲಿಯೇ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ, ಜೆಡಿಎಸ್ ಪಕ್ಷಗಳು ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಚಿಹ್ನೆಯ ಅಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. 

ಮತ್ತೊಂದೆಡೆ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ತಮಗೆ ಮತ್ತೊಮ್ಮೆ ಟಿಕೆಟ್ ಸಿಗಲಿದ್ದು ಹ್ಯಾಟ್ರಿಕ್ ಗೆಲುವು ಸಾಧಿಸಬೇಕೆಂಬ ಉಮೇದಿನಲ್ಲಿ ಈಗಾಗಲೇ ಫುಲ್ ಅಲರ್ಟ್ ಆಗಿ ಕ್ಷೇತ್ರದಲ್ಲಿ ಎಡಬಿಡದೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟಿಗಾಗಿ ಪೈಪೋಟಿ ಶುರುವಾಗಿದ್ದು ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಕಾದು ನೋಡಬೇಕಾಗಿದೆ.

click me!