
ಉಜಿರೆ (ಜ.31): ಧರ್ಮಸ್ಥಳ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಭಾಸ್ಕರ ಹೆಗಡೆ ತಮ್ಮ 33 ವರ್ಷಗಳ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಶನಿವಾರ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾಲೇಜಿನ ಪತ್ರಿಕೋದ್ಯಮದ ವಿಭಾಗದ ಹಳೇ ವಿದ್ಯಾರ್ಥಿಗಳು ನಿವೃತ್ತರಾಗುತ್ತಿರುವ ಪ್ರೀತಿಯ ಅಧ್ಯಾಪಕರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಭಾಸ್ಕರ ಹೆಗಡೆ ಕಾಲೇಜಿನ ಪ್ರಾಧ್ಯಾಪಕರಾಗಿ ಎದುರಿಸಿದ್ದ ಕೆಲವೊಂದು ಸವಾಲಿನ ಸಂದರ್ಭದ ಬಗ್ಗೆ ಮಾತನಾಡಿದರು. ಅದರಲ್ಲಿ ಧರ್ಮಸ್ಥಳಕ್ಕೂ ಹಾಗೂ ತಮಗೂ ಅತ್ಯಂತ ಸವಾಲಾಗಿ ಕಾಡಿದ್ದ ಎಚ್‌ಡಿಕೆ-ಬಿಎಸ್‌ವೈ ಅವರ ಆಣೆ ಪ್ರಮಾಣದ ಸಂದರ್ಭವನ್ನೂ ನೆನಪಿಸಿಕೊಂಡರು.
ಸಭಾಂಗಣದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಏನೇ ಮೇಜರ್ ಇವೆಂಟ್ ಆದ್ರೂ ಮಾಧ್ಯಮದ ಜವಾಬ್ದಾರಿಯನ್ನ ನನಗೆ ಕೊಡ್ತಿದ್ರು. ವೀರೇಂದ್ರ ಹೆಗ್ಗಡೆಯವರು ಬಹಳ ನಂಬಿಕೆಯಿಂದ ಈ ಜವಾಬ್ದಾರಿ ನನಗೆ ಕೊಡ್ತಾರೆ. ಎರಡು ಮಸ್ತಕಾಭಿಷೇಕ, ಎರಡು ನಡಾವಳಿ ಇನ್ನೊಂದು ತುಳು ಸಮ್ಮೇಳನ. ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದೇನೆ. ಎಲ್ಲಾ ವ್ಯವಸ್ಥೆಗಳನ್ನು ಧರ್ಮಸ್ಥಳದ ಆಡಳಿತ ಮಾಡುತ್ತೆ. ಆದರೆ, ಅಲ್ಲಿಯೂ ಮಾಧ್ಯಮದವರನ್ನು ನಿಭಾಯಿಸೋದು ಸುಲಭವಲ್ಲ. ಅದನ್ನು ಉಜಿರೆ ಪತ್ರಿಕೋದ್ಯಮದ ವಿಭಾಗ ಮಾಡುತ್ತಿದ್ದೆವು.
ಧರ್ಮಸ್ಥಳದ ಒಂದು ಸಂದರ್ಭ ವೀರೇಂದ್ರ ಹೆಗ್ಗಡೆಯವರಿಗೂ ಸವಾಲಾಗಿತ್ತು. ಇದು ನನ್ನ ನೆನಪಲ್ಲಿ ಇರುವ ಸಂದರ್ಭ ಕೂಡ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ನಡುವಿನ ಜಗಳ. ಎಲ್ಲಿಯವರೆಗೆ ಅದು ಹೋಯ್ತು ಅಂದ್ರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದವರೆಗೂ ಹೋಯ್ತು. ನಾನು ಸರೀನಾ? ನೀನು ಸರೀನಾ? ಅನ್ನೋದು ಪ್ರೂವ್ ಆಗಬೇಕು ಅನ್ನೋದಕ್ಕೆ ಆಣೆ ಪ್ರಮಾಣ. ಅವರು ಇಲ್ಲಿಗೆ ಬರೋ ತೀರ್ಮಾನ ಆಗಿತ್ತು. ಇದು ರಾಷ್ಟ್ರಮಟ್ಟದ ಮಾಧ್ಯಮ ಗಮನ ಸೆಳೆದಿತ್ತು.
ಧರ್ಮಸ್ಥಳದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಆಣೆ ಪ್ರಮಾಣ. ಹೆಗ್ಗಡೆಯವರು ಕೂಡ ಆಯ್ತು ಅಂತಾ ಹೇಳಿದ್ದರು. ಅದೆಲ್ಲವೂ ಧರ್ಮಸ್ಥಳಕ್ಕೆ ಹೊಸ ಅನುಭವ. ಅದಕ್ಕೆ ತಯಾರಿಗಳನ್ನ ಹೇಗೆ ಮಾಡ್ಬೇಕು ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ. ಎರಡೂ ಪಕ್ಷದ ಅಭಿಮಾನಿಗಳು ಎಷ್ಟು ಬರ್ತಾರೆ ಅನ್ನೋದು ಗೊತ್ತಿರಲಿಲ್ಲ. ಅದೆಲ್ಲಾ ಕೊನೆಗೆ ಹೇಗೋ ವ್ಯವಸ್ಥೆಯಾಯಿತು.
ಆದರೆ, ಈ ಸಮಯದಲ್ಲಿ ಹೆಚ್ಚು ಸವಾಲಾಗಿದ್ದು ಮಾಧ್ಯಮಗಳನ್ನು ನಿಯಂತ್ರಿಸೋದು. ರಾಷ್ಟ್ರಮಟ್ಟದ ದೊಡ್ಡ ದೊಡ್ಡ ಪತ್ರಕರ್ತರು ಬಂದಿದ್ದರು. ಹೆಗ್ಗಡೆಯವರು ಜೊತೆ ತುಂಬಾ ಗೌರವದಿಂದ ಮಾತನಾಡಿದರು. ಆದರೆ, ಅವರ ಡಿಮಾಂಡ್ ಕೇಳಿ ಮಾತ್ರ ಹೆಗ್ಗಡೆಯವರಿಗೆ ಇದು ಕಷ್ಟವಾಗುತ್ತೆ ಅಂತಾ ಅನಿಸಿತು. ಹಿರಿಯ ಪತ್ರಕರ್ತರಿಗೆ ಸಾರಾಸಗಟಾಗಿ ಇಲ್ಲ ಅನ್ನುವಂತೆಯೂ ಇಲ್ಲ. ಇದೊಂದು ಇವೆಂಟ್‌ನ ಕವರೇಜ್‌ಗೆ ಬಂದಿದ್ದೇವೆ. ಎಲ್ಲಾ ಕಡೆಯಿಂದಲೂ ಒತ್ತಡವಿದೆ. ಅವರು ದೇವರ ಎದುರುಗಡೆ ನಿಂತು ಮಾಡುವ ಆಣೆ ಪ್ರಮಾಣ ಹೇಗೆ ಮಾಡ್ತಾರೆ? ಏನು ಹೇಳ್ತಾರೆ? ಬಾಯಿಬಿಟ್ಟು ಹೇಳ್ತಾರೋ? ಇಲ್ಲ ಮನಸ್ಸಿನಲ್ಲೇ ಹೇಳ್ತಾರೋ? ಅನ್ನೋ ಕುತೂಹಲ ಜನರಿಗೆ ಇದೆ. ಅದನ್ನ ಅವರಿಗೆ ತಿಳಿಸಬೇಕು. ಅದಕ್ಕಾಗಿ ನಮಗೆ ದೇವಸ್ಥಾನದ ಒಳಗೆ ಬಿಡಬೇಕು ಅಂತಾ ಮನವಿ ಮಾಡಿದ್ದರು.
ಅಷ್ಟೂ ಮಂದಿ ಫೋಟೋಗ್ರಾಫರ್, ವಿಡಿಯೋಗ್ರಾಫರ್‌ಅನ್ನು ಧರ್ಮಸ್ಥಳದ ದೇವಸ್ಥಾನದ ಒಳಗೆ ಬಿಡಬೇಕು ಅಂತಾ ಡಿಮಾಂಡ್ ಮಾಡಿದ್ದರು. ಅದು ಆಡಳಿತಕ್ಕೆ ಸವಾಲಾಗಿತ್ತು. ಈ ಬಗ್ಗೆ ಯೋಚಿಸಿ ಹೇಳ್ತೇನೆ ಅಂತಾ ವೀರೇಂದ್ರ ಹೆಗ್ಗಡೆಯವರು ಹೇಳಿದ್ರು. ತುಂಬಾ ಯೋಚನೆ ಮಾಡಿದ ಬಳಿಕ ಗಂಟೆಗೆ ಒಂದೊಂದು ಪ್ರೆಸ್‌ನೋಟ್ ಕಳಿಸೋದೇ ಸೂಕ್ತ ಅಂತಾ ತೀರ್ಮಾನ ಮಾಡಿದ್ರು.
ಕೊನೆಗೆ ಅನಿವಾರ್ಯ ಕಾರಣಕ್ಕೆ ಒಳಗೆ ಕಳಿಸೋದು ಸೂಕ್ತ ಅಲ್ಲ ಎಂದು ತೀರ್ಮಾನಿಸಿ, ಆ ದಿನದಂದು ಭಕ್ತರಿಗೆ ಕೊಂಚ ತೊಂದರೆ ಆದರೂ ಸಮಸ್ಯೆಯಿಲ್ಲ. ದೇವಸ್ಥಾನದ ಎದುರಲ್ಲೇ ರಾತ್ರೋರಾತ್ರಿ ದೊಡ್ಡ ಪೆಂಡಾಲ್‌ಗಳನ್ನು ಹಾಕಿ ಮಾಧ್ಯಮದವರಿಗೆ ವ್ಯವಸ್ಥೆ ಮಾಡಿದರು. ಆಣೆ ಪ್ರಮಾಣ ಮುಗಿಸಿ ಹಿರಿಯ ರಾಜಕಾರಣಿಗಳು ಹೊರಬರುವಾಗ ಫೋಟೋಗ್ರಾಫರ್‌ಗಳು ವಿಡಿಯೋಗ್ರಾಫರ್‌ಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ವ್ಯವಸ್ಥೆ ಮಾಡಿದ್ದರು ಎಂದು ರಾಜ್ಯ ರಾಜಕಾರಣದ ಅತ್ಯಂತ ಪ್ರಖ್ಯಾತ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳದ ಆಣೆ ಪ್ರಮಾಣ ಘಟನೆಯನ್ನು ನೆನಪಿಸಿಕೊಂಡರು.