
ಬೆಂಗಳೂರು (ಜ.31): ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಬೆನ್ನಲ್ಲೇ ಆಪ್ತ ಸ್ನೇಹಿತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದು ಕೇವಲ ಆತ್ಮ*ತ್ಯೆಯಲ್ಲ, ಇದರ ಹಿಂದೆ ರಾಜಕಾರಣಿಗಳ ಬೃಹತ್ ಜಾಲ ಮತ್ತು ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.
"ಸಿ.ಜೆ. ರಾಯ್ ಕೇವಲ ಉದ್ಯಮಿಯಲ್ಲ, ಅವರು ರಾಜಕೀಯ ನಾಯಕರಿಗೆ ದೊಡ್ಡ ಮಟ್ಟದ ಫಂಡ್ ಒದಗಿಸುತ್ತಿದ್ದರು. ಹ್ಯಾರಿಸ್, ನಲಪಾಡ್ ಮತ್ತು ಕೆ.ಜೆ. ಜಾರ್ಜ್ ಅವರಂತಹ ಪ್ರಭಾವಿಗಳ ಬ್ಯುಸಿನೆಸ್ ಪಾರ್ಟ್ನರ್ ಕೂಡ ಆಗಿದ್ದರು. ಅವರು ಹಣಕ್ಕೆ ಹದರಿ ಸಾಯುವ ವ್ಯಕ್ತಿಯಲ್ಲ. ಸಣ್ಣಪುಟ್ಟ ಕಾರಣಗಳಿಗೆ ಆತ್ಮ*ತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಯಾರದ್ದೋ ಒತ್ತಡಕ್ಕೆ ಬಲಿಯಾದ್ರು ಅನಿಸುತ್ತಿದೆ. ರಾಜಕಾರಣಿಗಳ ಗೇಮ್ ಗೆ ಸಿಲುಕಿದ್ದರು. ಕೇಂದ್ರ ಸರ್ಕಾರದ ಒತ್ತಡ ಅಂತಾ ಕಾಣುತ್ತಿದೆ. ಸಿಜೆ ರಾಯ್ ನ ಮುಗಿಸಬೇಕು ಅಂತ ಮಾಡಿದ್ದಾರೆ. ಇದು ತನಿಖೆ ಆಗ್ಬೇಕು. ಈಗ ಕೇರಳ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕೇರಳ ಕಾಂಗ್ರೆಸ್‌ಗೆ ಅವರು ಫಂಡಿಂಗ್ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಗುರಿಯಾಗಿಸಿ ಮುಗಿಸಲಾಗಿದೆ," ಎಂದು ಚಂದ್ರಚೂಡ್ ಗಂಭೀರವಾಗಿ ಹೇಳಿದ್ದಾರೆ.
ಚಂದ್ರಚೂಡ್ ಅವರ ಪ್ರಕಾರ, ರಾಯ್ ಅವರನ್ನು ಹಣದ ವಿಚಾರದಲ್ಲಿ ಬೆದರಿಸಿ ಸಾಯಿಸುವ ವ್ಯಕ್ತಿ ಅವರಲ್ಲ. 2016ರಲ್ಲಿ ದೊಡ್ಡಬಳ್ಳಾಪುರ ರೆಸಾರ್ಟ್ ಒಂದರಲ್ಲಿ ತೆಲುಗಿನ ಮೂವರು ಖ್ಯಾತ ನಟಿಯರ ಮೂಲಕ ಅವರನ್ನು ಹನಿಟ್ರ್ಯಾಪ್ ಮಾಡುವ ಯತ್ನ ನಡೆದಿತ್ತು. ಅದು ಸುದ್ದಿಯಾಯ್ತು. ಈ ಬಗ್ಗೆ ಅವರು ಕೂಡ ದೂರು ನೀಡಿರಲಿಲ್ಲ.
ಕಾಂಗ್ರೆಸ್‌ಗೆ ಹಣಕಾಸಿನ ನೆರವು ನೀಡುವವರನ್ನು ಹುಡುಕಿ ಹೊಡೆಯುವ ಕೆಲಸ ನಡೆಯುತ್ತಿದೆ. ಐಟಿ ಅಧಿಕಾರಿಗಳ ನಿರಂತರ ಒತ್ತಡದಿಂದಾಗಿ ರಾಯ್ ದೇಶ ಬಿಟ್ಟು ಹೋಗಲು ಪ್ಲಾನ್ ಮಾಡಿದ್ದರು ಮತ್ತು ಬೇರೆ ದೇಶದ ಪೌರತ್ವ ಪಡೆಯಲು ಮುಂದಾಗಿದ್ದರು ಎಂದಿದ್ದಾರೆ.
ಈ ಪ್ರಕರಣದ ತನಿಖೆ ಕುರಿತು ಮಾತನಾಡಿದ ಚಂದ್ರಚೂಡ್, "ಸಿಐಡಿ ತನಿಖೆಯಿಂದ ಸಣ್ಣ ಮಟ್ಟದ ಮಾಹಿತಿ ಸಿಗಬಹುದು. ಆದರೆ ಸಿಬಿಐ ತನಿಖೆ ಮಾಡಿಸಬೇಕು ಎಂದರೆ ಅಲ್ಲಿಯೂ ಬೇಟೆಗಾರರೇ ಕುಳಿತಿದ್ದಾರೆ. ಇದು ಕೇಂದ್ರ ಸರ್ಕಾರದ ವ್ಯವಸ್ಥಿತ ಹುನ್ನಾರ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.