
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ನೂತನ ಯಾಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಸಚಿವೆ ಅವರಿಗೆ ‘ಭಾರತ ಲಕ್ಷ್ಮಿ’ ಎಂಬ ಗೌರವ ಬಿರುದನ್ನು ಘೋಷಿಸಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಗಳು ಬಿರುದು ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, “ಶ್ರೀ ಕೃಷ್ಣನ ಸಂದೇಶಗಳನ್ನು ಪಸರಿಸುವಲ್ಲಿ ಪುತ್ತಿಗೆ ಮಠದ ಕೊಡುಗೆ ಅನನ್ಯ. ಪ್ರತಿದಿನ ಜನರಿಂದ ಭಗವದ್ಗೀತೆ ಬರೆಯಿಸುವುದು ಒಂದು ಮಹಾಯಜ್ಞದಂತೆ ನಡೆಯುತ್ತಿದೆ. ಒಂದು ಕೋಟಿ ಭಗವದ್ಗೀತೆಯ ಬರಹಗಳ ಸಂಗ್ರಹ ಶ್ಲಾಘನೀಯ ಕಾರ್ಯ. ಇದರಿಂದ ಶ್ರೀ ಕೃಷ್ಣನ ಸಂದೇಶವು ಪ್ರಪಂಚದಾದ್ಯಂತ ಹರಡಲಿದೆ,” ಎಂದರು.
ಮುಂದುವರಿದು ಮಾತನಾಡಿ, ಜನರಿಗೆ ನಿತ್ಯ ಅನ್ನದಾಸೋಹ ನಡೆಸುವ ಮೂಲಕ ಅನ್ನಬ್ರಹ್ಮನ ಸೇವೆ ನಡೆಯುತ್ತಿದೆ. ಒಂದು ದಿನವೂ ಬಿಡದೆ ಕೃಷ್ಣ ಭೋಜನಶಾಲೆಯಲ್ಲಿ ದಾಸೋಹ ನಡೆಯುತ್ತಿರುವುದು ಭಕ್ತರಿಗೆ ಆಶೀರ್ವಾದ. ಉತ್ತಮ ಭೋಜನದಿಂದ ಸಂತುಷ್ಟನಾದ ಭಕ್ತರಲ್ಲಿ ಕೃಷ್ಣನ ದರ್ಶನ ಸಾಧ್ಯ. ಉಡುಪಿ ಕೃಷ್ಣಮಠದೊಂದಿಗೆ ನನಗೆ ಅವಿಸ್ಮರಣೀಯ ನೆನಪುಗಳಿವೆ. ಅಷ್ಟಮಠದ ಗುರುಗಳ ಕೃಪೆ ನನ್ನ ಮೇಲಿದೆ ಎಂದರು.
“ಕೃಷ್ಣ ಭಗವಂತನು ಭಾರತ ದೇಶವನ್ನು ಆಶೀರ್ವದಿಸಲಿ. ನಮ್ಮ ಪ್ರಧಾನ ಮಂತ್ರಿಗಳಿಗೆ ಶ್ರೀ ಕೃಷ್ಣನ ಆಶೀರ್ವಾದ ದೊರಕಲಿ. ನಮ್ಮ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ನಾವು ಭಾರತಮಾತೆಯನ್ನು ದೇವಿಯಂತೆ ಭಾವಿಸುವ ಜನರು. ಪ್ರಧಾನ ಮಂತ್ರಿಗಳು ಸ್ವಾರ್ಥವಿಲ್ಲದೆ ದೇಶ ಸೇವೆ ಮಾಡುತ್ತಿದ್ದಾರೆ. ಸವಾಲುಗಳು ಸರಣಿ ಸರಣಿಯಾಗಿ ಬಂದರೂ, ಗುರುಗಳ ಪ್ರಾರ್ಥನೆ ಮತ್ತು ದೇವರ ಆಶೀರ್ವಾದ ನಮ್ಮ ಶ್ರೀರಕ್ಷೆ. ಭಾರತಮಾತೆಯನ್ನು ಎಲ್ಲರೂ ತಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಿ. ದೇವರ ಮುಂದೆ ನಿಂತಾಗ ದೇಶದ ಬಗ್ಗೆ ಪ್ರಾರ್ಥಿಸಿ. ಯುವ ಜನಾಂಗದ ಏಳಿಗೆಗಾಗಿ ದೇಶ ಅಭಿವೃದ್ಧಿಯಾಗಲೆಂದು ಹಾರೈಸಿ ಎಂದು ಹೇಳಿದರು.
ರಕ್ಷಾಬಂಧನದ ದಿನ ಶ್ರೀ ಕೃಷ್ಣನ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದ ಸಚಿವೆ, ನಾವು ಭಾರತೀಯರು ಯಾವತ್ತೂ ಒಗ್ಗಟ್ಟಾಗಿರಬೇಕು. ಮನುಷ್ಯ ಸೇವೆಯೇ ದೇಶ ಸೇವೆ, ದೇಶ ಸೇವೆಯೇ ಭಗವಂತನ ಸೇವೆ ಎಂದು ಬಾವುಕರಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಅಷ್ಟಮಠಾಧೀಶರಿಗೆ ಕೈಮುಗಿದು ಆಶೀರ್ವಾದ ಪಡೆದ ವಿತ್ತ ಸಚಿವೆ, ಕಾರ್ಯಕ್ರಮದ ನೆನಪನ್ನು ಜೀವನದ ಅಮೂಲ್ಯ ಕ್ಷಣವೆಂದು ವರ್ಣಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಮಾತನಾಡಿ, ಉಡುಪಿಯ ಶ್ರೀ ಕೃಷ್ಣ ದೇವರು ರುಕ್ಮಿಣಿ ಕರಾರ್ಚಿತ ಮೂರ್ತಿ. ನಿರ್ಮಲಾ ಸೀತಾರಾಮನ್ ಅವರ ಮೂಲ ಹೆಸರು ರುಕ್ಮಿಣಿ ಎಂಬುದು ನನಗೆ ತಿಳಿದುಬಂದಿತು. ಶ್ರೀ ಕೃಷ್ಣ ದೇವರು ಮತ್ತೊಮ್ಮೆ ರುಕ್ಮಿಣಿ ದರ್ಶನ ಬಯಸಿದಂತೆ, ಕೃಷ್ಣನ ಪ್ರೇರಣೆಯಿಂದಲೇ ನಿರ್ಮಲಾ ಅವರು ಮತ್ತೆ ದರ್ಶನಕ್ಕೆ ಬಂದಿದ್ದಾರೆ ಎಂದರು.
ನಿರ್ಮಲಾ ಸೀತಾರಾಮನ್ ನಮ್ಮ ದೇಶದ ಭಾಗ್ಯ ದೇವತೆ. ಪ್ರತಿಯೊಬ್ಬರ ಮನೆಯಲ್ಲೂ ಮಡದಿ ವಿತ್ತ ಸಚಿವೆ ಇದ್ದಂತೆಯೇ, ದೇಶದ ಆರ್ಥಿಕ ಸ್ಥಿತಿಗೂ ವಿತ್ತ ಸಚಿವೆ ಮುಖ್ಯಸ್ಥರು. ಶಾಸ್ತ್ರದಲ್ಲೂ ಸಂಪತ್ತು ಲಕ್ಷ್ಮಿಯ ಬಳಿಯೇ ಇದೆ ಎಂದು ಹೇಳಿದೆ. ದೇಶದ ಆರ್ಥಿಕ ವೃದ್ಧಿಗೆ ತಮ್ಮ ಬಜೆಟ್‌ಗಳ ಮೂಲಕ ಅವರು ನೀಡಿರುವ ಕೊಡುಗೆ ಅಪಾರ. ನಾನು ಅವರನ್ನು ‘ಭಾರತ ಲಕ್ಷ್ಮಿ’ ಎಂದು ಕರೆಯುತ್ತೇನೆ. ಅವರ ಗುರು ಶ್ರೀ ವಿಶ್ವಪ್ರಿಯ ತೀರ್ಥರ ಮೂಲಕ ಈ ಬಿರುದನ್ನು ನೀಡುತ್ತಿದ್ದೇನೆ. ದೇಶದ ಆರ್ಥಿಕ ಸಂಕಷ್ಟಗಳೆಲ್ಲಾ ನಿವಾರಣೆಯಾಗಲಿ, ಕೃಷ್ಣನ ಅನುಗ್ರಹ ದೊರಕಲಿ, ಭಾರತ ಜಗತ್ತಿನ ನಂಬರ್ ಒನ್ ಆರ್ಥಿಕ ಶಕ್ತಿಯಾಗಲಿ ಎಂದು ಸ್ವಾಮೀಜಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ಹಾಜರಿದ್ದರು. ಇಬ್ಬರೂ ಚಂದ್ರ ಶಾಲೆಯಲ್ಲಿ ಕುಳಿತು ದೇವರ ಸೇವೆಗೆ ಹೂವು ಕಟ್ಟಿದರು. ಸುಧಾ ಮೂರ್ತಿ ಸ್ವತಃ ಹೂಮಾಲೆ ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು. ನಿರ್ಮಲಾ ಸೀತಾರಾಮನ್ ಅವರು ಸಾಮಾನ್ಯ ಗೃಹಿಣಿಯರಂತೆ ದೇವರ ನೈವೇದ್ಯದ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ತಯಾರಿಯಲ್ಲೂ ಭಾಗವಹಿಸಿದರು. ಶ್ರೀ ಕೃಷ್ಣ ಮಠದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ತೋರಿಸಿದ ಸರಳತೆ ಮತ್ತು ಭಕ್ತಿ ಎಲ್ಲರ ಮನಸೂರೆಗೊಂಡಿತು.