
ಬೆಂಗಳೂರು (ಆ.9): ವರಮಹಾಲಕ್ಷ್ಮಿ ಹಬ್ಬದ ದಿನದಂದು ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ದುರ್ಘಟನೆಯ ಆಘಾತದಿಂದ ಅವರ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆ ಬೆಂಗಳೂರಿನ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಮಲ್ಲೇಶ್ವರಂ ನಿವಾಸಿ ಗೀತಾ (23) ಎಂದು ಗುರುತಿಸಲಾಗಿದೆ. ಅವರ ಪತಿ ಸುನಿಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕೇವಲ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ, ಹಬ್ಬದ ಪ್ರಯುಕ್ತ ಸುನಿಲ್ ಅವರ ಅಕ್ಕನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಲಗ್ಗೆರೆ ಬ್ರಿಡ್ಜ್ ಬಳಿ ಅವರ ಬೈಕ್‌ಗೆ 12 ಚಕ್ರಗಳ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೀತಾ ಬೈಕ್‌ನಿಂದ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯ ನಂತರ ರಸ್ತೆಯ ಮಧ್ಯೆ ಪತ್ನಿಯ ಶವದ ಮುಂದೆ ಕುಳಿತು ಪತಿ ಸುನಿಲ್ ಗೋಳಾಡಿದ್ದು, ಆ ದೃಶ್ಯ ಸ್ಥಳೀಯರನ್ನು ಭಾವುಕರನ್ನಾಗಿಸಿದೆ. ಅಪಘಾತದ ವಿಷಯ ತಿಳಿದ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗೀತಾ ಅವರ ತಾಯಿ ವಿಕ್ಟೋರಿಯ ಆಸ್ಪತ್ರೆಯ ಮಾರ್ಚರಿ ಮುಂದೆ ಗೋಳಾಡಿದ್ದಾರೆ. ಈ ದುರಂತದ ನಡುವೆ, ಗೀತಾ ಅವರ ಸಾವಿನ ವಿಷಯ ತಿಳಿದು ಚನ್ನಪಟ್ಟಣದಲ್ಲಿ ವಾಸವಿದ್ದ ಅವರ ಅಜ್ಜಿ ತೀವ್ರ ಆಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
‘ಏನಾಯ್ತು ಅಂತಾ ನಾನು ಸರಿಯಾಗಿ ನೋಡಲಿಲ್ಲ. ನಾನು ಕೂಡ ಬಿದ್ದಿದ್ದೆ. ಬಿದ್ದ ತಕ್ಷಣ ನಾನು ಎದ್ದಕೊಂಡೆ. ಆದರೆ ಹುಡುಗಿಗೆ ಜಾಸ್ತಿ ಪೆಟ್ಟಾಗಿತ್ತು. ನನ್ನ ತೊಡೆಯ ಮೇಲೆ ಆಕೆ ಪ್ರಾಣಬಿಟ್ಟಳು. ಘಟನೆ ಆದ ಬಳಿಕ ಸ್ಥಳದಲ್ಲಿ ತುಂಬಾ ಹೊತ್ತು ಕೂಗಾಡಿದೆ. ಗೋಳಾಡಿದೆ. ಆದರೆ, ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ ಯಾರೋ ಒಬ್ಬರು ಆಂಬ್ಯುಲೆನ್ಸ್‌ಗೆ ಫೋನ್ ಮಾಡಿದರು. ಅದರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ತಲೆಯ ಬಲಭಾಗದಲ್ಲಿ ತುಂಬಾ ಏಟಾಗಿತ್ತು. ಮದುವೆಯಾಗಿ 2 ತಿಂಗಳ 8 ದಿನ ಆಗಿದ್ದವು. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಹೊಸ ಮನೆ ಮಾಡಿದ್ದೆವು. ಹೊಸ ಮನೆಯಲ್ಲಿ ಮೂರು ದಿನ ವಾಸವಿದ್ದೆವು. ಭಾನುವಾರ ಆ ಮನೆಯಲ್ಲಿ ಹಾಲು ಉಕ್ಕಿಸಿದ್ದೆವು. ಚೆನ್ನಾಗಿ ಬಾಳಬೇಕು ಎಂದು ಕನಸು ಕಂಡಿದ್ದೆವು. ಎಲ್ಲೂ ಈಗ ಕನಸಾಗಿಯೇ ಉಳಿಯಿತು..’ ಎಂದು ಅವರ ಪತಿ ಸುನಿಲ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.