ಭಾವೈಕ್ಯದಿಂದ ಇರುವುದೇ ನಿಜವಾದ ಬದುಕು. ಸಮನ್ವಯತೆಯಿಂದ ಬಾಳುವುದೇ ಧರ್ಮ ಎಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
ಕುಕನೂರು (ಜು.1) : ಭಾವೈಕ್ಯದಿಂದ ಇರುವುದೇ ನಿಜವಾದ ಬದುಕು. ಸಮನ್ವಯತೆಯಿಂದ ಬಾಳುವುದೇ ಧರ್ಮ ಎಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಭಾನಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಸೀದಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಭಾವೈಕ್ಯದಿಂದ ಬದುಕು ಸಾಗಿಸುವುದು ಮುಖ್ಯ. ಧರ್ಮ ಸಮನ್ವಯದ ಸಂಕೇತವಾಗಿದೆ. ಎಲ್ಲರೂ ಧರ್ಮ ಎನ್ನುವ ಶಬ್ದ ಕೇಳಿದ್ದೀರಿ, ಧರ್ಮವಂತ ಎನ್ನುವ ಶಬ್ದ ಯಾರಿಗೆ ಅನ್ನಬೇಕು. ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿ ಹಣ್ಣು, ಕಾಯಿ ಒಡೆದು ಪೂಜೆ ಮಾಡಿ, ಬಾಳೆ ಹಣ್ಣಿನ ಸಿಪ್ಪೆ ಅಲ್ಲಿಯೇ ಬಿಸಾಡುವವನ್ನು ಧರ್ಮವಂತ ಅನ್ನುವುದಿಲ್ಲ. ಸಿಪ್ಪೆ ತೆಗೆದು ಸ್ವಚ್ಛ ಮಾಡುವವ ನಿಜವಾದ ಧರ್ಮವಂತ ಎಂದರು.
ಗಂಗಾವತಿ: ಭೋಗಾಪುರೇಶ ಕೆರೆಗೆ ಗವಿ ಶ್ರೀಗಳಿಂದ ಬಾಗಿನ ಅರ್ಪಣೆ
ನಮ್ಮ ಧರ್ಮ ಶೇಷ್ಠ, ನಮ್ಮ ಧರ್ಮ ಶೇಷ್ಠ ಎಂದು ರಸ್ತೆಯಲ್ಲಿ ಬಡಿದಾಡಿಕೊಂಡು ರಸ್ತೆ ಮೇಲೆ ರಕ್ತ ಸುರಿಸುವವರು ಧರ್ಮವಂತರಾಗುವುದಿಲ್ಲ. ಆಸ್ಪತ್ರೆಯಲ್ಲಿ ರಕ್ತವಿಲ್ಲದ ರೋಗಿಗೆ ರಕ್ತ ನೀಡಿ ಬರುವವಂತವರು ಧರ್ಮವಂತನಾಗುತ್ತಾನೆ ಎಂದರು.
ಈ ದೇಶದ ಹಿರಿಯರು, ದಾರ್ಶನಿಕರು ಧರ್ಮ ಎನ್ನುವ ಬಗ್ಗೆ ಬಹಳ ಸಂಶೋಧನೆ ಮಾಡಿದರೆ ಯಾವುದು ಧರ್ಮ, ಯಾರಿಗೆ ಧರ್ಮವಂತರು ಅನ್ನಬೇಕು ಎಂಬುದು ವಿಚಾರವಂತಿಕೆಗೆ ನಿಲುಕದ ಭಾವ ಅದು. ಸರಳವಾಗಿ ಸಾಮಾನ್ಯ ವ್ಯಕ್ತಿ ಕೂಡ ಧರ್ಮವಂತನಾಗಿ ಬದುಕಬೇಕು. ಮಸೀದಿ, ದೇವಸ್ಥಾನ, ಚಚ್‌ರ್‍ಗೆ ಹೋಗುವವ ಅಷ್ಟೇ ಧರ್ಮವಂತನಾ? ನಿಜವಾದ ಧರ್ಮವಂತ ಯಾರು? ಧರ್ಮ ಎನ್ನುವುದನ್ನು ಮನುಷ್ಯ ಸರಿಯಾಗಿ ತಿಳಿದುಕೊಳ್ಳಬೇಕು. ಅದರಂತೆ ನಡೆದುಕೊಳ್ಳಬೇಕು ಎಂದರು.
ಧರ್ಮದ ಅರ್ಥ ಇನ್ನೊಬ್ಬರ ಮನಸ್ಸಿಗೆ ನೋವು, ಮೋಸ ಮಾಡದೇ ಬದುಕುವುದೇ ನಿಜವಾದ ಧರ್ಮವಂತ ಎಂದರು.
ಹಿರಿಯರು ಹಾಕಿ ಕೊಟ್ಟಮಾರ್ಗದಲ್ಲಿ ಪ್ರೇಮದಿಂದ ಬದುಕಬೇಕು. ನಾನು ಸುಖಿಯಾಗಿರಬೇಕು. ನನ್ನ ಜೊತೆ ಇರುವವರು ಸುಖಿಯಾಗಿರಬೇಕು. ಅದಕ್ಕೆ ಮುಖ್ಯವಾಗಿ ಕಲಿಯುವುದು ಸಾಕಷ್ಟುಇದೆ. ಹರಿಯುವ ನದಿ, ಭೂಮಿ, ಸೂರ್ಯ, ಬೀಸುವ ಗಾಳಿ ಎಂದಾದರೂ ಈ ಧರ್ಮದವರು ಎಂದು ಹೇಳಿದೆಯೇ? ನಿಸರ್ಗಕ್ಕೆ ಇಲ್ಲದ ಬೇದಭಾವ ಮನುಷ್ಯನ ಮನಸ್ಸಿನಲ್ಲಿ ಹುಟ್ಟಿಸಿದರಲ್ಲ. ಅದು ಒಂದು ತಪ್ಪು ಕಲ್ಪನೆ. ಅದಕ್ಕೆ ನಿಜವಾದ ಧರ್ಮದ ಸಾರ್ಥಕತೆ ಎಂದರೆ ಎಲ್ಲರೂ ಕೂಡಿ ಬದುಕುವುದೇ ಧರ್ಮವಾಗುತ್ತದೆ ಎಂದರು.
ಜಾತಿ, ಮತ, ಪಂಥ ನೋಡಿ ಬದುಕುವುದಲ್ಲ. ಧರ್ಮ ಎಂದರೆ ಎಲ್ಲರನ್ನು ನೋಡಿ, ಸಂತೋಷ ಪಡಬೇಕು. ಇಂತಹ ಪುಟ್ಟಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಐದು ಮನೆಗಳಿದ್ದರೂ ಎಲ್ಲರೂ ಸಮನ್ವಯದಿಂದ ಬದುಕು ಸಾಗಿಸುತ್ತಿರುವುದು ಧರ್ಮ ಸಮನ್ವಯದ ಸಂಕೇತ ಎಂದರು.
ದರ್ಗಾಕ್ಕೆ ಭೇಟಿ ನೀಡಿ ಭಾವೈಕ್ಯತೆ ಮೆರೆದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ
ಈ ಸಂದರ್ಭದಲ್ಲಿ ಯಲ್ಲಪ್ಪ ಮೇಟಿ, ಚಂದ್ರಶೇಖರಯ್ಯ ಹಿರೇಮಠ, ನಿಂಗನಗೌಡ ಡಂಬಳ, ರಹಿಮಾನಸಾಬ್ ನದಾಫ್, ಶಂಕ್ರಪ್ಪ ಚೌಡ್ಕಿ, ಮಹ್ಮದ್‌ರಫಿ ಇಟಗಿ, ನೀಲಕಂಠಯ್ಯ ಸಸಿಮಠ, ಮಲ್ಲಿಕಾರ್ಜುನಯ್ಯ ಮಠದ, ವಿರುಪಾಕ್ಷಪ್ಪ ಅಂಗಡಿ, ಹುಚ್ಚಿರಪ್ಪ ತಳವಾರ, ಹುಸೇನ್‌ಸಾಬ್ ಇಟಗಿ, ಅಲ್ಲಾಭಕ್ಷಿ ನದಾಫ್, ಈಶ್ವನಾಥ ಮಠದ, ಜೀವನ್‌ಸಾಬ್ ಇಟಗಿ, ಚಂದ್ರಸಿಂಗ್ ರಜಪೂತ್, ಮಹಮ್ಮದ್ ಅಲಿ, ರಮಜಾನ್‌ಸಾಬ, ಈರಯ್ಯ ಸಸಿಮಠ ಇತರರಿದ್ದರು.