Bengaluru: ಸಿಲಿಕಾನ್‌ ಸಿಟಿಯಲ್ಲಿ ಆಜಾನ್‌ ವಿರುದ್ಧ ಸುಪ್ರಭಾತಕ್ಕೆ ತಡೆ

Published : May 10, 2022, 03:00 AM IST
Bengaluru: ಸಿಲಿಕಾನ್‌ ಸಿಟಿಯಲ್ಲಿ ಆಜಾನ್‌ ವಿರುದ್ಧ ಸುಪ್ರಭಾತಕ್ಕೆ ತಡೆ

ಸಾರಾಂಶ

ವಿವೇಕ ನಗರದ ಜಯ ಆಂಜನೇಯ ದೇವಾಲಯದ ಬಳಿ ಭದ್ರತೆಗೆ ಇಬ್ಬರು ಎಸಿಪಿ, ನಾಲ್ವರು ಇನ್‌ಸ್ಪೆಕ್ಟರ್‌, 10ಕ್ಕೂ ಅಧಿಕ ಎಎಸ್‌ಐ, 30ಕ್ಕೂ ಅಧಿಕ ಕಾನ್‌ಸ್ಟೇಬಲ್‌ಗಳು, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು.

ಬೆಂಗಳೂರು (ಮೇ.10): ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಆಜಾನ್‌ (Azaan) ಕೂಗುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆ (Sri Ram Sene) ಕಾರ್ಯಕರ್ತರು ಸೋಮವಾರ ಮುಂಜಾನೆ ದೇವಸ್ಥಾನಗಳಲ್ಲಿ ಸುಪ್ರಭಾತ (Suprabhata) ಮೊಳಗಿಸಲು ಸಜ್ಜಾಗಿದ್ದ ಮಾಹಿತಿ ತಿಳಿದ ಪೊಲೀಸರು (Police) ಹಲವು ದೇವಸ್ಥಾನಗಳ (Temples) ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿ, 30 ಕಾರ್ಯಕರ್ತರನ್ನು ವಶಕ್ಕೆ ಪಡೆಯುವ ಮೂಲಕ ಈ ಆಂದೋಲನಕ್ಕೆ ತಡೆ ಒಡ್ಡಿದರು. ಆಜಾನ್‌ಗೆ ವಿರುದ್ಧವಾಗಿ ಬೆಳಿಗ್ಗೆ 5ಕ್ಕೆ ದೇವಸ್ಥಾನಗಳಲ್ಲಿ ಮೈಕ್‌ಗಳಲ್ಲಿ ಹನುಮಾನ್‌ ಚಾಲೀಸಾ, ಭಜನೆ, ಸುಪ್ರಭಾತ ಹಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಪೊಲೀಸರು ಮಾರ್ಗ ಮಧ್ಯದಲ್ಲಿ 30ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವೇಕ ನಗರದ ಜಯ ಆಂಜನೇಯ ದೇವಸ್ಥಾನ, ಪಾದರಾಯನಪುರದ ಕೋದಂಡರಾಮಸ್ವಾಮಿ ದೇವಸ್ಥಾನ, ಹಲಸೂರು ಸಮೀಪದ ಅಂಗಾಳ ಪರಮೇಶ್ವರಿ ದೇವಾಲಯ, ಅಶೋಕ ನಗರದ ಆಂಜನೇಯ ದೇವಾಲಯ, ಹಲಸೂರಿನ ಸೋಮನಾಥ ದೇವಸ್ಥಾನ, ರಾಜಾಜಿ ನಗರದ ರಾಮಮಂದಿರ ಸೇರಿದಂತೆ ನಗರದ ಹಲವು ದೇವಾಲಯಗಳ ಬಳಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಬಂದೋಬಸ್ತ್‌ ಮಾಡಿದ್ದರು. ಹೊಯ್ಸಳ ವಾಹನದಲ್ಲಿ ದೇವಸ್ಥಾನಗಳ ಸುತ್ತು ಹಾಕಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೇವಾಲಯದ ಬಳಿ ಬಾರದಂತೆ ನಿಗಾವಹಿಸಿದ್ದರು.

ರಾಜ್ಯದಲ್ಲೀಗ ಆಜಾನ್ VS ಸುಪ್ರಭಾತ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ

30 ಕಾರ್ಯಕರ್ತರು ವಶಕ್ಕೆ: ವಿವೇಕ ನಗರದ ಜಯ ಆಂಜನೇಯ ದೇವಾಲಯದ ಬಳಿ ಭದ್ರತೆಗೆ ಇಬ್ಬರು ಎಸಿಪಿ, ನಾಲ್ವರು ಇನ್‌ಸ್ಪೆಕ್ಟರ್‌, 10ಕ್ಕೂ ಅಧಿಕ ಎಎಸ್‌ಐ, 30ಕ್ಕೂ ಅಧಿಕ ಕಾನ್‌ಸ್ಟೇಬಲ್‌ಗಳು, ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಮುಂಜಾನೆ ಹನುಮಾನ ಚಾಲೀಸಾ ಹಾಕಲು ಮುಂದಾದ ಶೀರಾಮ ಸೇನೆಯ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಸೇರಿದಂತೆ ಸುಮಾರು 30 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಪ್ರತಿನಿತ್ಯ ಬೆಳಗ್ಗೆ 7ಕ್ಕೆ ಆಂಜನೇಯನ ದರ್ಶನ ಮಾಡಲು ಭಕ್ತರಿಗೆ ಅವಕಾಶವಿತ್ತು. ಆದರೆ ಶ್ರೀರಾಮ ಸೇನೆಯವರು ಮೈಕ್‌ ಅಳವಡಿಸಿದ್ದು ಸುಪ್ರಭಾತಕ್ಕೆ ಆಗಮಿಸುತ್ತಾರೆ ಎಂಬ ಮಾಹಿತಿ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ದೇವಸ್ಥಾನದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ದೇವಸ್ಥಾನ 9 ಗಂಟೆಯಾದರೂ ತೆರೆಯಲಿಲ್ಲ. ದೇವಸ್ಥಾನ ಪ್ರವೇಶಿಸಲು ಕಾರ್ಯಕರ್ತರು ಮುಂದಾದಾಗ ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಹಲಸೂರಿನ ವಿವೇಕಾನಂದ ರಸ್ತೆಯಲ್ಲಿರುವ ಅಂಗಾಳ ಪರಮೇಶ್ವರಿ ದೇಗುಲದಲ್ಲಿ ಸುಪ್ರಭಾತ ಮಾಡಲು ಶ್ರೀರಾಮ ಸೇನೆ ಕಾರ್ಯಕರ್ತರು ಉದ್ದೇಶಿಸಿದ್ದರಾದರೂ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಿದ್ದರಿಂದ ಆ ಕಡೆ ಸುಳಿಯಲಿಲ್ಲ. ಎಂದಿನಂತೆ ಬೆಳಗಿನ ಜಾವ 6ಕ್ಕೆ ದೇಗುಲದ ಅರ್ಚಕರು ಸುಪ್ರಭಾತ ಹಾಕಿದ್ದಾರೆ. ಮತ್ತೊಂದೆಡೆ ಮನೆ ಮನೆ ರಾಮ ಅಭಿಯಾನವನ್ನು ಋುಷಿಕುಮಾರ ಸ್ವಾಮಿ ಆರಂಭಿಸಿದ್ದಾರೆ. ಉಳ್ಳಾಳ ಆರ್‌.ಟಿ.ಓ. ಬಳಿಯ ಹಿಂದೂ ಭಕ್ತರೊಬ್ಬರ ಮನೆಯಲ್ಲಿ ಮುಂಜಾನೆ 5.30ರಲ್ಲಿ ರಾಮತಾರಕ ಮಂತ್ರ ಪಠಿಸಿದ್ದಾರೆ. ಹಿಂದೂಪರ ಸಂಘಟನೆಗಳ ಹಲವು ಕಾರ್ಯಕರ್ತರೂ ಜಪದಲ್ಲಿ ಪಾಲ್ಗೊಂಡಿದ್ದರು.

ಬೇಗ ಮುಚ್ಚಿದ ಕೋದಂಡರಾಮಸ್ವಾಮಿ ದೇಗುಲ: ಪಾದರಾಯನಪುರದ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಸುಪ್ರಭಾತ ಹಾಕಲು ಶ್ರೀರಾಮ ಸೇನೆ ನಿರ್ಧರಿಸಿತ್ತು. ಅನಾಹುತವಾದರೆ ನೀವೇ ಹೊಣೆ ಎಂದು ದೇವಸ್ಥಾನದವರಿಗೆ ಪೊಲೀಸರು ಮೌಖಿಕ ಸೂಚನೆ ನೀಡಿದ್ದರಿಂದ ನಿಗದಿತ ಸಮಯಕ್ಕಿಂತ ಮೊದಲೇ ದೇಗುಲವನ್ನು ಮುಚ್ಚಲಾಯಿತು. ಯಾವಾಗಲೂ ಬೆಳಗ್ಗೆಯೇ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಪೊಲೀಸರ ಸೂಚನೆಯಿಂದಾಗಿ ಬೆಳಗ್ಗೆ 8.45ರ ಸುಮಾರಿಗೆ ತೆರೆದು ದೇವರಿಗೆ ಪೂಜೆ ಸಲ್ಲಿಸಿದ ದೇವಾಲಯದ ಬಾಗಿಲು ಹಾಕಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

Tumakuru ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಸ್ತುತಿಗೆ ನೀರಸ ಪ್ರತಿಕ್ರಿಯೆ

ರಾಜ್ಯಾದ್ಯಂತ ಹೋರಾಟ: ಪೊಲೀಸರನ್ನು ಮುಂದಿಟ್ಟುಕೊಂಡು ಸರ್ಕಾರ ನಮ್ಮ ಧಾರ್ಮಿಕ ಹಕ್ಕು ಕಿತ್ತುಕೊಳ್ಳುತ್ತಿದೆ. ಸುಪ್ರೀಂ ಕೋರ್ಚ್‌ ಆದೇಶವನ್ನು ಪಾಲಿಸುತ್ತಿಲ್ಲ. ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ಎಚ್ಚರಿಸಿದರು. ಮಸೀದಿಗಳಲ್ಲಿ ಮೈಕ್‌ ಮೂಲಕ ಆಜಾನ್‌ ಕೂಗುವಂತಿಲ್ಲ ಎಂದು ಸುಪ್ರೀಂ ಕೋರ್ಚ್‌ ಆದೇಶ ನೀಡಿದೆ. ಆದರೆ ಇದನ್ನು ಪಾಲಿಸದವರಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಡಿ.ಜೆ.ಹಳ್ಳಿಯಲ್ಲಿ ಗಲಭೆ ಮಾಡಿದಂತಹ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.

PREV
Read more Articles on
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!