ಕರಾವಳಿಯ ಇತಿಹಾಸ ಪ್ರಸಿದ್ದ ಮಂಗಳಾದೇವಿಯ ಸನ್ನಿಧಿಯಲ್ಲಿ ಆರಂಭವಾದ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಆದರೆ ನವರಾತ್ರಿ ಉತ್ಸವ ಆರಂಭವಾದ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಪರ ಫೀಲ್ಡಿಗಿಳಿದಿದ್ದಾರೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಅ.16): ಕರಾವಳಿಯ ಇತಿಹಾಸ ಪ್ರಸಿದ್ದ ಮಂಗಳಾದೇವಿಯ ಸನ್ನಿಧಿಯಲ್ಲಿ ಆರಂಭವಾದ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಆದರೆ ನವರಾತ್ರಿ ಉತ್ಸವ ಆರಂಭವಾದ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಪರ ಫೀಲ್ಡಿಗಿಳಿದಿದ್ದಾರೆ. ದೇವಸ್ಥಾನದ ಸಮೀಪ ಹಿಂದೂಗಳೇ ವ್ಯಾಪಾರ ಮಾಡಬೇಕು ಅಂತ ಆಗ್ರಹಿಸಿ ಭಗವಾಧ್ಬಜ ಅಭಿಯಾನ ಆರಂಭಿಸಿದ್ದಾರೆ. ಕಳೆದೊಂದು ವಾರದಿಂದ ಭಾರೀ ಸದ್ದು ಮಾಡಿದ್ದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವ್ಯಾಪಾರಿ ಧರ್ಮ ದಂಗಲ್ ಸದ್ಯ ತಣ್ಣಗಾಗಿದೆ. ಎರಡು ಬಣಗಳ ಗುದ್ದಾಟದ ಮಧ್ಯೆ ದ.ಕ ಜಿಲ್ಲಾಡಳಿತ ಮಧ್ಯ ಪ್ರವೇಶದ ಬಳಿಕ ಬಹುತೇಕ ಎಲ್ಲವೂ ನಿರಾಳವಾಗಿ ಸದ್ಯ ನವರಾತ್ರಿ ಹಬ್ಬದ ವ್ಯಾಪಾರ ಮಂಗಳಾದೇವಿಯಲ್ಲಿ ಆರಂಭವಾಗಿದೆ.
ಆದರೆ ಇದೀಗ ವ್ಯಾಪಾರ ಶುರುವಾಗ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಅಖಾಡಕ್ಕೆ ಇಳಿದಿದ್ದು, ಹಿಂದೂ ವ್ಯಾಪಾರಿಗಳ ಪರ ಮಂಗಳಾದೇವಿಯಲ್ಲಿ ಅಭಿಯಾನ ಆರಂಭಿಸಿದೆ. ವಿವಾದ ತಣ್ಣಗಾದ ಬೆನ್ನಲ್ಲೇ ಮತ್ತೆ ಅಖಾಡಕ್ಕಿಳಿದ ವಿಶ್ವ ಹಿಂದೂ ಪರಿಷತ್, ಮಂಗಳಾದೇವಿ ದೇವಸ್ಥಾನದ ಹಿಂದೂ ವ್ಯಾಪಾರಿಗಳ ಪರ ಬ್ಯಾಟಿಂಗ್ ಆರಂಭಿಸಿದೆ. ದೇವಸ್ಥಾನದ ರಥಬೀದಿಯ ಹಿಂದೂ ವ್ಯಾಪಾರಿಗಳ ಸ್ಟಾಲ್ ಗಳಿಗೆ ವಿಎಚ್ ಪಿ ನಾಯಕರು ಭೇಟಿ ನೀಡಿದ್ದು, ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹಾಗೂ ನಾಯಕರು ಭೇಟಿ ನೀಡಿದ್ದಾರೆ. ಹಿಂದೂಗಳ ಸ್ಟಾಲ್ ಗಳಿಗೆ ಭಗವಾಧ್ಬಜ ವಿತರಿಸಿದ ವಿಎಚ್ ಪಿ ನಾಯಕರು, ಸ್ಟಾಲ್ ಗಳ ಮುಂಭಾಗ ಭಗವಾಧ್ವಜ ಕಟ್ಟಿದ್ದಾರೆ.
ಮೋದಿ ಜನಪರ ಯೋಜನೆಗಳು ಭಾರತೀಯರಿಗೆ ಶ್ರೀರಕ್ಷೆ: ಚಕ್ರವರ್ತಿ ಸೂಲಿಬೆಲೆ
ಅಲ್ಲದೇ ಕೇಸರಿ ಧ್ಬಜ ಕಟ್ಟಿದ ಅಂಗಡಿಗಳಲ್ಲೇ ವ್ಯಾಪಾರ ನಡೆಸಲು ಭಕ್ತರಲ್ಲಿ ಮನವಿ ಮಾಡಿದ್ದಾರೆ. ದೇವಸ್ಥಾನದ ಸುತ್ತಮುತ್ತ ಹಿಂದೂಗಳ ಅಂಗಡಿಗಳಿಗೆ ಭೇಟಿ ನೀಡಿದ ವಿಎಚ್ ಪಿ ನಿಯೋಗ, ಅನ್ಯಧರ್ಮೀಯರು ಎಲ್ಲಿ ಬೇಕಾದರೂ ವ್ಯಾಪಾರ ಮಾಡಲಿ. ಆದರೆ ದೇವಸ್ಥಾನದ ಸನಿಹದಲ್ಲಿ ಹಿಂದೂ ವ್ಯಾಪಾರಿಗಳೇ ವ್ಯಾಪಾರ ಮಾಡಬೇಕು. ದೇವಸ್ಥಾನದ ಭಕ್ತರು ಹಿಂದೂಗಳ ಜೊತೆಗೆಯೇ ವ್ಯವಹರಿಸುವಂತೆ ಶರಣ್ ಪಂಪ್ ವೆಲ್ ಮನವಿ ಮಾಡಿಕೊಂಡಿದ್ದಾರೆ. ಸಲ ವಿಶೇಷವಾಗಿ ಹಿಂದುಗಳಿಗೆ ಮಾತ್ರ ಕೊಡಬೇಕು ಎಂಬ ಬೇಡಿಕೆ ಸನಾತನ ಹಿಂದೂ ವ್ಯಾಪಾರಸ್ಥರ ಸಂಘದವರು ಕೊಟ್ಟಿದ್ರು. ನಾವು ಮುಸಲ್ಮಾನ್ ವ್ಯಾಪಾರಿಗಳ ವಿರೋಧಿನೂ ಅಲ್ಲ. ನಮ್ಮ ದೇವಸ್ಥಾನದ ಸುತ್ತ ಮುತ್ತ ಹಿಂದುಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ಎರಡನೇ ಸಲ ಹರಾಜು ನಡೆಸಿದ್ದನ್ನ ನಾವು ವಿರೋಧ ಮಾಡ್ತೀವಿ.
ಇನ್ನೊಂದು ಸಲ ಹರಾಜು ಮಾಡಿ ಅನ್ಯ ಧರ್ಮಿಯರಿಗೆ ಕೊಟ್ಟಿದ್ದಾರೆ, ಅದಕ್ಕಾಗಿ ಧ್ವಜವನ್ನ ಕಟ್ಟಿದ್ದೇವೆ ಎಂದಿದ್ದಾರೆ. ಇನ್ನು ಎರಡು ಬಾರಿ ಸ್ಟಾಲ್ ಗಳ ಬಹಿರಂಗ ಹರಾಜು ನಡೆಸಿದ್ದ ದೇವಸ್ಥಾನದ ಆಡಳಿತ ಮಂಡಳಿ, ಎರಡನೇ ಹರಾಜಿನಲ್ಲಿ ಸುಮಾರು 11 ಸ್ಟಾಲ್ ಗಳ ಬಹಿರಂಗ ಹರಾಜು ಮಾಡಿತ್ತು. ಒಟ್ಟು 6 ಮಂದಿ ಅನ್ಯಮತೀಯರಿಂದ ಹರಾಜಿನಲ್ಲಿ ಸ್ಟಾಲ್ ಖರೀದಿಸಿದ್ದು, 6 ಮುಸ್ಲಿಂ ವ್ಯಾಪಾರಿಗಳು ಸೇರಿ 82 ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ದೇವಸ್ಥಾನದ ಸಮೀಪ ಹಿಂದೂ ವ್ಯಾಪಾರಿಗಳಿಗಷ್ಟೇ ಅವಕಾಶ ನೀಡಿದ್ದು, ನೂರು ಮೀಟರ್ ಹೊರಗೆ ಬೇರೆ ಧರ್ಮದ ವ್ಯಾಪಾರಿಗಳು ಇದ್ದಾರೆ. ಹೀಗಾಗಿ ನಮ್ಮ ಮನವಿಗೆ ದೇವಸ್ಥಾನದ ಆಡಳಿತ ಸ್ಪಂದಿಸಿದೆ ಅನ್ನೋದು ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಮಾತು.
ಮತ್ತೊಮ್ಮೆ ಹರಾಜು ಮಾಡಿದ್ದಕ್ಕೆ ಭಗವಾಧ್ವಜ ಕಟ್ಟಿದ್ದೇವೆ: ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ಹಿಂದುಗಳಿಗೆ ಮಾತ್ರ ಕೊಡಬೇಕು ಎಂಬ ಬೇಡಿಕೆ ಸನಾತನ ಹಿಂದೂ ವ್ಯಾಪಾರಸ್ಥರ ಸಂಘದವರು ಕೊಟ್ಟಿದ್ರು. ಇವತ್ತು ಎಲ್ಲಾ ಅಂಗಡಿಗಳಿಗೆ ಭಗವಾಧ್ಬಜ ಹಾಕಿದ್ದೇವೆ. ಹಿಂದೂಗಳ ಅಂಗಡಿ ಹಿಂದೂಗಳದೆಂದು ಗೊತ್ತಾಗಬೇಕು ಎಂದು ಧ್ವಜ ಕಟ್ಟುತ್ತಿದ್ದಾರೆ. ಹಿಂದುಗಳ ಅಂಗಡಿಯಲ್ಲೇ ವ್ಯಾಪಾರ ಮಾಡಬೇಕು. ನಮ್ಮ ಬೇಡಿಕೆ ಕಳೆದ ಎರಡು ಮೂರು ವರ್ಷಗಳಿಂದ ಇದೆ. ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನ ಪ್ರಕಾರ ಸಂತೆ ವ್ಯಾಪಾರ ಹಿಂದೂಗಳಿಗೆ ಕೊಡಬೇಕು ಎಂಬ ನಿಯಮ ಇದೆ. ಈವಾಗ ಇದನ್ನು ಮಂಗಳಾದೇವಿ ದೇವಸ್ಥಾನದಲ್ಲಿ ಮಾಡಿದ್ದೇವೆ. ಇನ್ನು ಮುಂದೆ ಎಲ್ಲಾ ದೇವಸ್ಥಾನಗಳಲ್ಲಿ ಇದೆ ರೀತಿ ಮಾಡಬೇಕು. ಕಮ್ಯುನಿಸ್ಟ್ ನವರು ಮುಸಲ್ಮಾನ್ ಬಡ ವ್ಯಾಪಾರಿಗಳಿಗೆ ಅವಕಾಶ ನೀಡಬೇಕು ಅನ್ನುತ್ತಾರೆ.
ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ
ನಾವು ಮುಸಲ್ಮಾನ್ ವ್ಯಾಪಾರಿಗಳ ವಿರೋಧಿಗಳಲ್ಲ. ನಮ್ಮ ದೇವಸ್ಥಾನದ ಸುತ್ತಮುತ್ತ ಹಿಂದುಗಳಿಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದೇವೆ. ರಸ್ತೆಯ ಎಲ್ಲಿ ಬೇಕಾದರೂ ಅನ್ಯಧರ್ಮದವ್ರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿ ನಮ್ಮ ಅಭ್ಯಂತರ ಇಲ್ಲ. ಎಲ್ಲಿ ದೇವಸ್ಥಾನಕ್ಕೆ ಜನ ಬರುತ್ತಾರೆ, ಎಲ್ಲಿ ದೇವಸ್ಥಾನದ ರಥ ಹೋಗುತ್ತೋ ಅಲ್ಲಿ ಹಿಂದುಗಳಿಗೆ ಅವಕಾಶ ಕೊಡಿ. ಒಮ್ಮೆ ಹರಾಜು ಆದ ಬಳಿಕ ಪಾಲಿಕೆ ಮತ್ತೆ ಹರಾಜು ಪ್ರಕ್ರಿಯೆ ನಡೆಸಿದೆ. ಹರಾಜು ಆದ ಮೇಲೆ ಎರಡನೇ ಹರಾಜಿಗೆ ಅವಕಾಶ ಇಲ್ಲ. ಎಲ್ಲಿವರೆಗೂ ದೇವಸ್ಥಾನ ಇರುತ್ತೋ ಅಲ್ಲಿ ತನಕ ಇದು ದೇವಸ್ಥಾನದ ಜಾಗ. ಮಹಾನಗರ ಪಾಲಿಕೆಗಿಂತ ಮೊದಲೇ ದೇವಸ್ಥಾನ ಇದೆ. ದೇವಸ್ಥಾನವನ್ನ ಬಿಟ್ಟು ಎಲ್ಲಿ ಬೇಕಾದರೂ ಅನ್ಯಧರ್ಮಿಯರು ವ್ಯಾಪಾರ ಮಾಡಲಿ ಎಂದಿದ್ದಾರೆ.