Bhagavad Gita Campaign: ಕರ್ನಾಟಕದ ಎಲ್ಲ ಜೈಲಲ್ಲೂ ಭಗವದ್ಗೀತಾ ಅಭಿಯಾನ: ಸ್ವರ್ಣವಲ್ಲೀ ಶ್ರೀ

By Kannadaprabha News  |  First Published Sep 15, 2022, 12:27 PM IST

ನ.4ರಂದು ಅಭಿಯಾನಕ್ಕೆ ಚಾಲನೆ, ಡಿ.4ಕ್ಕೆ ದಾವಣಗೆರೆಯಲ್ಲಿ ಮಹಾ ಸಮರ್ಪಣೆ, ಭಗವದ್ಗೀತಾ ಅಭಿಯಾನಕ್ಕೆ ಐದನೇ ಅಧ್ಯಾಯ ಆಯ್ಕೆ: ಸ್ವರ್ಣವಲ್ಲೀ ಶ್ರೀ


ಶಿರಸಿ(ಸೆ.15): ರಾಜ್ಯದ ಎಲ್ಲ ಜೈಲುಗಳಲ್ಲೂ ಭಗವದ್ಗೀತಾ ಅಭಿಯಾನ ನಡೆಸಲು ಯೋಜಿಸಿದ್ದೇವೆ ಎಂದು ಭಗವದ್ಗೀತಾ ಅಭಿಯಾನದ ಮುಖ್ಯಸ್ಥರು, ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ಸ್ವರ್ಣವಲ್ಲೀಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ತಪ್ಪದೇ ಗೀತಾಭಿಯಾನ ನಡೆದಿದೆ. ಇದೇ ರೀತಿ ಅನೇಕ ಜೈಲಿನಲ್ಲಿ ಕೈದಿಗಳ ಮೂಲಕ ಅಭಿಯಾನ ನಡೆಸಲಾಗಿದೆ. ಮೂರು ಹಂತದಲ್ಲಿ ರಾಜ್ಯದಲ್ಲಿ ಗೀತಾ ಅಭಿಯಾನ ನಡೆಯಲಿದೆ ಎಂದರು.

14ನೇ ವರ್ಷದ ಭಗವದ್ಗೀತಾ ಅಭಿಯಾನವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನ.4ರಿಂದ ಆರಂಭಿಸಲಾಗುತ್ತಿದೆ. ಡಿ.4ರಂದು ದಾವಣಗೆರೆಯಲ್ಲಿ ಮಹಾ ಸಮರ್ಪಣೆ ನಡೆಯಲಿದೆ. ಗೀತಾ ಅಭಿಯಾನಕ್ಕೆ ಈ ಬಾರಿ ಐದನೇ ಅಧ್ಯಾಯ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

Latest Videos

undefined

ಸ್ವರ್ಣವಲ್ಲೀಯಲ್ಲಿ ಸೆ.26ರಿಂದ ಶರನ್ನವರಾತ್ರಿ ಆರಂಭ: ಗಂಗಾಧರೇಂದ್ರ ಸರಸ್ವತೀ ಶ್ರೀ

2007ರಿಂದ ಆರಂಭಗೊಂಡ ಈ ಅಭಿಯಾನ ಸಮಾಜದಲ್ಲಿ ಗೀತೆಯ ಮೂಲಕ ಸುಖ, ಶಾಂತಿ ನೆಲೆಸುವಂತೆ, ಪ್ರತಿ ವ್ಯಕ್ತಿ ಸುಸಂಸ್ಕೃತರಾಗಲು ಪ್ರೇರೇಪಿಸಲು ಇದು ನಿರಂತರವಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊರೋನಾ ಕಾರಣದಿಂದ ಸಾರ್ವಜನಿಕವಾಗಿ ನಡೆಸಲು ಸಾಧ್ಯ ಆಗಿರಲಿಲ್ಲ. ಈ ವರ್ಷ ಸಾರ್ವಜನಿಕರ, ಸರ್ಕಾರದ, ಸಂಸ್ಥೆಗಳ ಸಹಕಾರದಲ್ಲಿ ಮುನ್ನಡೆಸಲಾಗುತ್ತದೆ ಎಂದರು.

ಅಭಿಯಾನದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗೀತೆ ಕುರಿತ ವಿವಿಧ ಸ್ಪರ್ಧೆ ರಾಜ್ಯ ಮಟ್ಟದ ತನಕ ನಡೆಯಲಿದೆ. ಸಾರ್ವಜನಿಕವಾಗಿ ಮೂರು ಹಂತದ ಅಭಿಯಾನಕ್ಕೆ ನ.4ರಿಂದ 10, 12ರಿಂದ 18, 20ರಿಂದ ನ.26ರ ತನಕ ನಡೆಸಬೇಕು. ಎಂಟು ದಿನಗಳ ಅಭ್ಯಾಸ ಇಲ್ಲಾಗಬೇಕು ಎಂದ ಶ್ರೀಗಳು, ನ.28 ತಾಲೂಕು ಮಟ್ಟದ, ನ.30 ಜಿಲ್ಲಾ ಮಟ್ಟದ, ಡಿ.4 ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದರು.

ನ.27ರಿಂದ ಏಳು ದಿನಗಳ ಕಾಲ ಪ್ರತಿ ಮನೆಯಲ್ಲಿ 5ನೇ ಅಧ್ಯಾಯ ಪಠಿಸಬೇಕು. ಡಿ.3ರಂದು 18 ಅಧ್ಯಾಯ ಪಠಣ ಮಾಡಿ ಗೀತಾ ಜಯಂತಿ ಆಚರಿಸಬೇಕು ಎಂದು ಆಶಿಸಿದರು. ಈಗಾಗಲೇ ರಾಜ್ಯಮಟ್ಟದ ಅಭಿಯಾನ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಪ್ರಮುಖರನ್ನು ನಿಯೋಜಿಸಲಾಗಿದೆ ಎಂದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್‌. ಹೆಗಡೆ ಮಾಹಿತಿ ನೀಡಿ ಅಭಿಯಾನ ಕುರಿತು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ 8277383500, 08384-279359ನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಠದ ವ್ಯವಸ್ಥಾಪಕ ಎಸ್‌.ಎನ್‌. ಗಾಂವಕರ ಇದ್ದರು.

ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್‌ ಶೀಘ್ರ: ರಾಘವೇಶ್ವರ ಶ್ರೀ

ಮನುಷ್ಯ ಅನೇಕ ವಿಕಾರಗಳಿಗೆ ಬಲಿ ಆಗುತ್ತಿದ್ದಾನೆ. ವಿಕೃತ ಮನಸ್ಸು ಅಡ್ಡದಾರಿ ಹಿಡಿಯುತ್ತಿದೆ. ಅಪಕ್ವ, ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಅಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಅಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ ಅಂತ ಸ್ವರ್ಣವಲ್ಲೀ ಶ್ರೀ ತಿಳಿಸಿದ್ದಾರೆ. 

ಮುಖ್ಯಾಂಶಗಳು

* ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗೀತಾ ಅಭಿಯಾನಕ್ಕೆ ಸಿದ್ಧತೆ
* ಕೋವಿಡ್‌ ಆತಂಕದ ನಂತರದ ಪ್ರಥಮ ಸಾರ್ವಜನಿಕ ಅಭಿಯಾನ
* ಸರ್ಕಾರ ಹಾಗೂ ಜನ ಸ್ಪಂದನೆ ಕೂಡ ಈ ಬಾರಿ ಹೆಚ್ಚು
* ನ.4ರಿಂದ ಡಿ.4ರ ತನಕ ಮೂರು ಹಂತದಲ್ಲಿ ಅಭಿಯಾನ
* ರಾಜ್ಯದ ಪ್ರತಿ ಜಿಲ್ಲಾ ಕಾರಾಗೃಹದಲ್ಲೂ ನಡೆಸಲು ತೀರ್ಮಾನ
 

click me!