ಕೊಲ್ಲೂರು ಸಮೀಪದ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಕಣ್ಮರೆಯಾಗಿ 8 ದಿನಗಳ ಬಳಿಕ ಶವವಾಗಿ ಪತ್ತೆಯಾದ ಭದ್ರಾವತಿಯ ಯುವಕ ಶರತ್‌ಕುಮಾರನ ಅಂತ್ಯಕ್ರಿಯೆ ಸೋಮವಾರ ನೆರವೇರಿತು.
ಶಿವಮೊಗ್ಗ (ಜು.31): ಕೊಲ್ಲೂರು ಸಮೀಪದ ಅರಿಶಿನಗುಂಡಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಕಣ್ಮರೆಯಾಗಿ 8 ದಿನಗಳ ಬಳಿಕ ಶವವಾಗಿ ಪತ್ತೆಯಾದ ಭದ್ರಾವತಿಯ ಯುವಕ ಶರತ್‌ಕುಮಾರನ ಅಂತ್ಯಕ್ರಿಯೆ ಹುಟ್ಟೂರಾದ ಕೆಎಚ್ ನಗರದಲ್ಲಿ ಸೋಮವಾರ ನೆರವೇರಿತು.
ಶರತ್ ಕುಮಾರ್ ಈಗಷ್ಟೇ 23ರ ಹರೆಯಕ್ಕೆ ಕಾಲಿಟ್ಟಿದ್ದ ಯುವಕ. ಹಿಡಿ ಕುಟುಂಬಕ್ಕೆ ಏಕೈಕ ಆಸರೆಯಾಗಿ ಜೆಸಿಬಿ ಯಂತ್ರ ಹಾಗೂ ಅಡಿಕೆ ತಟ್ಟೆ ಹಾಳೆ ತಯಾರಿಕೆ ಘಟಕವನ್ನು ಹೊಂದಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದ. ವಿದ್ಯಾಭ್ಯಾಸ ಜೊತೆ ಜೊತೆಗೆ ಸ್ವಯಂ ಉದ್ಯೋಗದ ಮೂಲಕ ತನ್ನ ಕುಟುಂಬಕ್ಕೆ ಅಲ್ಲದೆ ನಾಲ್ಕರ ಜನರಿಗೆ ಉದ್ಯೋಗ ನೀಡಿದ್ದ ಯುವಕ. ಅದೇನು ಗ್ರಹಚಾರ ಕಾಡಿತ್ತೋ ತನ್ನದೆಲ್ಲದ ತಪ್ಪಿಗೆ ಇಂದು ಬಾರದ ಲೋಕ ಸೇರಿದ್ದಾನೆ. ಶರತ್ ಕಳೆದ ಜು.23ರಂದು ತನ್ನ ಸ್ನೇಹಿತನೊಂದಿಗೆ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ತೆರಳಿದ್ದ. ಈ ವೇಳೆ ಮಾರ್ಗಮಧ್ಯದಲ್ಲಿದ್ದ ಅರಿಶಿನಗುಂಡಿ ಜಲಪಾತ ವೀಕ್ಷಿಸಲು ಹೋಗಿದ್ದನು.
ಅರಶಿನಗುಂಡಿ ಜಲಪಾತ ದುರಂತ, ಕೊನೆಗೂ 1 ವಾರದ ಬಳಿಕ ಶರತ್ ಮೃತದೇಹ ಪತ್ತೆ
ಜಲಪಾತದ ಬಳಿ ಬಂಡೆ ಮೇಲೆ ನಿಂತಿದ್ದ ವೇಳೆ ಜಾರಿ ಸ್ನೇಹಿತ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗಲೇ ಹರಿಯುತ್ತಿದ್ದ ಜಲಪಾತದ ನೀರಿಗೆ ಬಿದ್ದಿದ್ದನು. ಅಂದು ನೀರಿನಲ್ಲಿ ಕೊಚ್ಚಿ ಹೋದ ಶರತ್ ಗಾಗಿ ಹಲವು ತಂಡಗಳು ಹುಡುಕಾಟ ನಡೆಸಿದ್ದವು. ತೀವ್ರ ಮಳೆ ಮತ್ತು ನೀರಿನ ರಭಸ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ಎಂಟು ದಿನಗಳ ಬಳಿಕ ಬಳಿಕ ಶರತ್ ಬಿದ್ದ ಜಾಗದಿಂದ 200 ಮೀಟರ್ ದೂರದಲ್ಲಿ ಕೊನೆಗೂ ಶರತ್ ಮೃತದೇಹ ಪತ್ತೆಯಾಗಿತ್ತು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.
ನಿನ್ನೆ ತಡರಾತ್ರಿ ಶರತ್ ಪಾರ್ಥಿವ ಶರೀರವನ್ನು ಸ್ವಗ್ರಾಮ ಭದ್ರಾವತಿ ತಾಲೂಕಿನ ಕೆ.ಎಚ್.ನಗರಕ್ಕೆ ತರಲಾಯಿತು. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿತ್ತು. ಈಜು ಬಲ್ಲವನಾಗಿದ್ದ ಮಗ ಶರತ್ ಖಂಡಿತವಾಗೂ ಕೈ ಕಾಲಿಗೆ ಹೊಡೆತ ಬಿದ್ದು ನೀರಿನಲ್ಲಿ ಬಿದ್ದಿದ್ದರು ಬದುಕಿದ್ದಾನೆ ಎಂದು ಕೊಂಡು ಸಮಾಧಾನ ಮಾಡಿ ಕೊಂಡಿದ್ದರು. ಬದುಕಿ ಬಾಳಬೇಕಿದ್ದ ಮಗನ ಶವವನ್ನು ಕಂಡು ಇಡೀ ಕುಟುಂಬ ದುಃಖತಪ್ತವಾಗಿತ್ತು ತಂದೆ ಮುನಿಸ್ವಾಮಿಯವರಂತೂ ನಿರ್ಬಂಧಿತ ಪ್ರದೇಶಗಳಿಗೆ ಯಾರನ್ನು ಬಿಡಬಾರದು ಹೀಗೆ ಬಿಟ್ಟಿದ್ದರಿಂದಲೇ ನಮ್ಮ ಮಗನನ್ನು ಕಳೆದು ಕೊಂಡಿದ್ದೇವೆ . ಆತನ ಸ್ನೇಹಿತನೊಂದಿಗೆ ಹೋಗಿದ್ದರಿಂದ ಮಗನನ್ನು ಕಳೆದುಕೊಂಡೆ ಎಂದು ನೋವು ಹೊರ ಹಾಕಿದರು.
ಕೊಚ್ಚಿಹೋದ ಯುವಕ.. 70 ಗಂಟೆಯಾದ್ರೂ ಸಿಗದ ಶವ: ಮಗನ ಮೃತದೇಹಕ್ಕಾಗಿ ಅನ್ನ, ನೀರು ಬಿಟ್ಟ ಪೋಷಕರು
ವಿವಾಹಕ್ಕೂ ಮುನ್ನವೇ ಶರತ್ ಆಕಾಲಿಕ ಸಾವು ಹಿನ್ನೆಲೆಯಲ್ಲಿ ಹಿಂದೂ ತಮಿಳು ಗೌಂಡರ್ ಸಂಪ್ರದಾಯದಂತೆ ವಿವಾಹ ಶಾಸ್ತ್ರ ಮುಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.ಅಂತ್ಯಸಂಸ್ಕಾರಕ್ಕೂ ಮುನ್ನ ವಿವಾಹ ಶಾಸ್ತ್ರ ನೆರವೇರಿಸಿದ ಕುಟುಂಬಸ್ಥರು, ಬಾಳೆಗಿಡಕ್ಕೆ ತಾಳಿ ಕಟ್ಟಿ, ವಿವಾಹ ಶಾಸ್ತ್ರ ನೆರವೇರಿಸಿದ್ದಾರೆ. ಬಳಿಕ ಬಾಳೆಗಿಡ ಕತ್ತರಿಸಿ, ಅಂತ್ಯಸಂಸ್ಕಾರ ನಡೆದಿದೆ. ಒಟ್ಟಿನಲ್ಲಿ ಮಗನಿಲ್ಲದ ಮನೆಯಲ್ಲಿ ಕುಟುಂಬ ಒಂದು ಅನಾಥ ಸ್ಥಿತಿಯಲ್ಲಿ ದುಃಖದಲ್ಲಿ ಮುಳುಗಿದೆ. ಇನ್ನೊಂದೆಡೆ ಪ್ರಕೃತಿ ರಮಣೀಯ ಜಲಪಾತದಂತ ಪ್ರವಾಸ ಸ್ಥಳಗಳಲ್ಲಿ ಅಪಾಯವನ್ನು ಲೆಕ್ಕಿಸದೆ ಮುನ್ನುಗ್ಗುವ ಯುವಕರ ಹುಚ್ಚಾಟ ಅವರ ಪ್ರಾಣಕ್ಕೆ ಸಂಚಕಾರ ತಂದು ಕುಟುಂಬ ಒಂದನ್ನು ಅನಾಥ ವನ್ನಾಗಿಸಿದೆ. ಸರ್ಕಾರ ಕೂಡ ಇಂತಹ ಅಪಾಯಕಾರಿ ಸ್ಥಳಗಳಿಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ವಿಧಿಸಬೇಕಾಗಿದೆ.