ಮುಂಬೈನಿಂದ ಶಿವಮೊಗ್ಗ ಜಿಲ್ಲೆಯ ಉಕ್ಕಿನ ನಗರಿ ಭದ್ರಾವತಿಗೆ ಬಂದಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಭದ್ರಾವತಿ(ಜೂ.24): ಕೆಲವು ದಿನಗಳ ಹಿಂದೆ ನಗರದ ಹೃದಯ ಭಾಗದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇದೀಗ ಕಾಗದನಗರಕ್ಕೂ ವಿಸ್ತರಿಸಿಕೊಂಡಿದೆ. 6ನೇ ವಾರ್ಡಿನ ಮಹಿಳೆಯೊಬ್ಬರಲ್ಲಿ ವೈರಸ್ ದೃಢಪಟ್ಟಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ವಾರ್ಡಿನ 3-4 ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸ್ವಂತ ವಾಹನದಲ್ಲಿ ಮುಂಬೈ ಚಂಬುರೂಗೆ ಜೂ.5 ರಂದು ಮಗುವಿನೊಂದಿಗೆ ಪ್ರಯಾಣ ಬೆಳೆಸಿದ್ದ ಮಹಿಳೆ ವಾಪಾಸು ರೈಲಿನ ಮೂಲಕ ಬೆಂಗಳೂರು ಮತ್ತು ಕೆ.ಆರ್ ಪೇಟೆಗೆ ತೆರಳಿ ಮತ್ತೆ ಅಲ್ಲಿಂದ ಜೂ.17ರಂದು ನಗರಕ್ಕೆ ಆಗಮಿಸಿದ್ದು, ಜೂ.18ರಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾರೆ. ನಂತರ ಮಹಿಳೆ ಮತ್ತು ಮಗು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಇಬ್ಬರ ಗಂಟಲು ಮಾದರಿ ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು. ಸೋಮವಾರ ರಾತ್ರಿ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ. ಮಗುವಿನಲ್ಲಿ ಯಾವುದೇ ವೈರಸ್ ಪತ್ತೆಯಾಗಿಲ್ಲ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಶಿವಮೊಗ್ಗದಲ್ಲಿ ಮತ್ತೆ 5 ಕೊರೋನಾ ಕೇಸ್ ದೃಢ..!
ಮುನ್ನಚ್ಚರಿಕೆ ಕ್ರಮವಾಗಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಶಿವಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ. ಸತೀಶ್, ಕಾಗದನಗರ ಪೊಲೀಸರು, ಆಶಾ ಕಾರ್ಯಕರ್ತೆಯರ ತಂಡ ಮಹಿಳೆ ವಾಸವಿದ್ದ ಮನೆಯ ಸುತ್ತ್ತಮುತ್ತ ಪರಿಶೀಲನೆ ನಡೆಸಿತು. ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು.